May 13, 2026

ಹೆದ್ದಾರಿ ಸಮಸ್ಯೆ ಆಲಿಸಿದ ಸಂಸದ ಕಾಗೇರಿ; ವಿವಿಧ ಮನವಿಗಳ ಸ್ವೀಕಾರ

ಭಟ್ಕಳ: ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭಟ್ಕಳ ಭೇಟಿ ವೇಳೆ ಸಾರ್ವಜನಿಕರಿಂದ ವಿವಿಧ ಮನವಿಗಳನ್ನು ಸ್ವೀಕರಿಸಿದರು.


ಭಟ್ಕಳದಿಂದ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಪುರವರ್ಗದ ಬಳಿ ವಾಹನ ನಿಲ್ಲಿಸಿ ಸ್ಥಳೀಯರ ಅಹವಾಲು ಆಲಿಸಿದರು. ಈ ವೇಳೆ ಅಣ್ಣಪ್ಪ ನಾಯ್ಕ ಅಬ್ಬಿಹಿತ್ತಲು, ‘‘ಪುರವರ್ಗದಲ್ಲಿ ರಸ್ತೆಗೆ ಡಿವೈಡರ್ ಇಲ್ಲ. ಸರ್ವಿಸ್ ರಸ್ತೆ ಹಾಗೂ ಬಸ್ ನಿಲ್ದಾಣ ವ್ಯವಸ್ಥೆ ಮಾಡಿಲ್ಲ. ಹೆದ್ದಾರಿ ಪಕ್ಕದಲ್ಲಿ ಶಾಲೆ, ಚರ್ಚ್‌, ದೇವಸ್ಥಾನಗಳಿದ್ದು, ಐದು ರಸ್ತೆಗಳು ಸೇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ತಕ್ಷಣ ಸರ್ವಿಸ್ ರಸ್ತೆ ನಿರ್ಮಿಸಬೇಕು’’ ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾಗೇರಿ, ‘‘ಭಟ್ಕಳದಲ್ಲಿ ಕಳೆದ 14 ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ-66 ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿತ್ತು. ನಾನು ಸಂಸದನಾದ ಬಳಿಕ ಮೂಡಭಟ್ಕಳ ಹಾಗೂ ಕಾಯ್ಕಿಣಿಯಲ್ಲಿ ಅಂಡರ್‌ಪಾಸ್ ಮಂಜೂರು ಮಾಡಿಸಿದ್ದು, ಕಾಮಗಾರಿ ನಡೆಯುತ್ತಿದೆ. ಸಂಬಂಧಿತ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗುವುದು’’ ಎಂದು ಭರವಸೆ ನೀಡಿದರು.


ಮೂಡಭಟ್ಕಳ ಹಾಗೂ ಪುರವರ್ಗದ ಸಾರ್ವಜನಿಕರು ಹೆದ್ದಾರಿ ಕಾಮಗಾರಿಯಿಂದ ಉಂಟಾದ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು. ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಪದಾಧಿಕಾರಿಗಳೂ ತಮ್ಮ ಬೇಡಿಕೆಗಳ ಮನವಿ ಪತ್ರ ನೀಡಿದರು.
ಬಳಿಕ ಗೊರ್ಟೆಯಲ್ಲಿ ನೂತನ ಹವ್ಯಕ ಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾಗೇರಿ, ಶುಭ ಹಾರೈಸಿದರು.


ಇದೇ ವೇಳೆ ಉತ್ತರ ಕನ್ನಡ ಜಿಲ್ಲಾ ಕಬಡ್ಡಿ ಸಂಸ್ಥೆಯ ಅಧ್ಯಕ್ಷ ಶ್ರೀಧರ್ ನಾಯ್ಕ ನೇತೃತ್ವದಲ್ಲಿ ಪದಾಧಿಕಾರಿಗಳು ಭೇಟಿ ನೀಡಿ ಜಿಲ್ಲೆಯ ತಾಲೂಕು ಕೇಂದ್ರಗಳಿಗೆ ಕಬಡ್ಡಿ ಮ್ಯಾಟ್ ಒದಗಿಸುವಂತೆ ಮನವಿ ಸಲ್ಲಿಸಿದರು. ಕ್ರೀಡಾಪಟುಗಳ ಹಿತದೃಷ್ಟಿಯಿಂದ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಕಾಗೇರಿ ಭರವಸೆ ನೀಡಿದರು.
ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ನಾಯ್ಕ, ಭಾಸ್ಕರ ದೈಮನೆ, ಮೋಹನ್ ನಾಯ್ಕ, ಗೋವರ್ಧನ್ ನಾಯ್ಕ, ರವಿ ನಾಯ್ಕ, ನಾಗೇಶ್ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

error: Content is protected !!