ಕಾರವಾರ, ಜೂನ್ 11: ಉತ್ತರ ಕನ್ನಡ ಜಿಲ್ಲೆಯ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ದ್ವಿತೀಯ ದರ್ಜೆ ಸಹಾಯಕರಿಗೆ ಕರ್ನಾಟಕ ರಾಜ್ಯ ಕಂದಾಯ ಸೇವೆಗಳ (ವೃಂದ ಮತ್ತು ನೇಮಕಾತಿ) ನಿಯಮಗಳು–2026ರ ಅನ್ವಯ ಪ್ರಥಮ ದರ್ಜೆ ಸಹಾಯಕ ಮತ್ತು ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಹುದ್ದೆಗಳಿಗೆ ಪದೋನ್ನತಿ ನೀಡಲಾಗಿದೆ. ಈ ಸಂಬಂಧ ಒಟ್ಟು 29 ಸಿಬ್ಬಂದಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಅವರು ಆದೇಶ ಹೊರಡಿಸಿದ್ದಾರೆ.

ಜಿಲ್ಲಾ ಕಂದಾಯ ಘಟಕದ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ದ್ವಿತೀಯ ದರ್ಜೆ ಸಹಾಯಕರ ಅಂತಿಮ ಸಂಯುಕ್ತ ಜೇಷ್ಠತಾ ಪಟ್ಟಿ ಪ್ರಕಟವಾದ ಬಳಿಕ ಜೂನ್ 9ರಂದು ಇಲಾಖಾ ಮುಂಬಡ್ತಿ ಸಮಿತಿ ಸಭೆ ನಡೆಸಲಾಗಿತ್ತು. ಸಿಬ್ಬಂದಿಯ ಸೇವಾ ದಾಖಲೆಗಳು ಹಾಗೂ ನಿಯಮಾನುಸಾರ ಅರ್ಹತೆಗಳನ್ನು ಪರಿಶೀಲಿಸಿದ ಸಮಿತಿಯು ಪದೋನ್ನತಿಗೆ ಅನುಮೋದನೆ ನೀಡಿದ್ದು, ಅದರಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಪದೋನ್ನತಿ ಆದೇಶ ಹೊರಬಿದ್ದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಹಾಗೂ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಚಾಂದಬಾಷಾ ಮುಲ್ಲಾ ಮಾತನಾಡಿ, ರಾಜ್ಯದಲ್ಲೇ ಮೊದಲ ಬಾರಿಗೆ ಈ ರೀತಿಯ ಪದೋನ್ನತಿ ಪ್ರಕ್ರಿಯೆ ಯಶಸ್ವಿಯಾಗಿ ಜಾರಿಯಾಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಪ್ರಕ್ರಿಯೆ ಯಶಸ್ವಿಯಾಗಲು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಶಿರಸ್ತೇದಾರ ಶೇಖ್, ವಿಷಯ ನಿರ್ವಾಹಕ ಶಿವಾನಂದ ಸಾಳುಂಕೆ ಸೇರಿದಂತೆ ಸಂಬಂಧಿತ ಅಧಿಕಾರಿಗಳ ಸಹಕಾರ ಪ್ರಮುಖ ಕಾರಣವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.


ಅಲ್ಲದೆ, ರಾಜ್ಯಾಧ್ಯಕ್ಷ ಯೋಗೇಶ್ ನಾಯ್ಕ್, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ನಾಯ್ಕ್ ಹಾಗೂ ರಾಜ್ಯ ಸಂಘದ ಪದಾಧಿಕಾರಿಗಳ ಸಹಕಾರವನ್ನೂ ಅವರು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಕ್ಷಿತ ಪೂಜಾರಿ, ಖಜಾಂಚಿ ಚರಣ್ ಗೌಡ, ಉಪಾಧ್ಯಕ್ಷ ಕೋಟ್ರೇಶ ಎನ್.ಬಿ., ಸಂದೀಪ್, ಮಂಜುನಾಥ ನಾಯ್ಕ, ಲತಾ ನಾಯ್ಕ, ಆಶಾ ಭಟ್ಟ, ಸಂತೋಷ, ಗಣೇಶ ಕುಲಾಲ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.
About The Author


More Stories
ಕಸ್ತೂರಿ ರಂಗನ್ ವರದಿ ಅಧಿಸೂಚನೆಗೆ ತೀವ್ರ ವಿರೋಧ: ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿ ಆಕ್ರೋಶ.
ಜನಜಾಗೃತಿ ವೇದಿಕೆ ಜಿಲ್ಲಾ ನೂತನ ಸಂಘಟನಾ ಅಧ್ಯಕ್ಷರಾಗಿ ವಾಮನ ಸುಬ್ರಾಯ ನಾಯ್ಕ್ ಸರ್ವಾನುಮತದಿಂದ ಆಯ್ಕೆ.
ಮಂತ್ರಿ ನಾಗೇಂದ್ರ ರಾಜೀನಾಮೆ ನೀಡಲೇಬೇಕು: ಕಾರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬಿರುಸಿನ ಹೋರಾಟ!