August 21, 2026

ಕಸ್ತೂರಿ ರಂಗನ್ ವರದಿ ಅಧಿಸೂಚನೆಗೆ ತೀವ್ರ ವಿರೋಧ: ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿ ಆಕ್ರೋಶ.

ಕಾರವಾರ (ಉತ್ತರ ಕನ್ನಡ): ಪಶ್ಚಿಮ ಘಟ್ಟ ರಕ್ಷಣೆಗೆ ಸಂಬಂಧಿಸಿದಂತೆ ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕಾಗಿ ಕೇಂದ್ರ ಅರಣ್ಯ ಮತ್ತು ಪರಿಸರ ಮಂತ್ರಾಲಯ ಹೊರಡಿಸಿರುವ 7ನೇ ಕರಡು ಅಧಿಸೂಚನೆಗೆ ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಜುಲೈ 27ರಂದು ಕೇಂದ್ರ ಸರ್ಕಾರ ಹೊರಡಿಸಿದ ಈ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಹೋರಾಟ ಸಮಿತಿಯು ಈಗಾಗಲೇ ತನ್ನ ಲಿಖಿತ ಆಕ್ಷೇಪಣೆಯನ್ನು ಸಲ್ಲಿಸಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಸಮಿತಿಯ ಅಧ್ಯಕ್ಷ ಶ್ರೀ ಚಂದ್ರಕಾಂತ ಕೊಚರೇಕರ್ ಆಗ್ರಹಿಸಿದ್ದಾರೆ.

ಜನವಸತಿ ಪ್ರದೇಶಗಳಿಗೆ ನಿರ್ಬಂಧ ಸರಿಯಲ್ಲ – ಚಂದ್ರಕಾಂತ ಕೊಚರೇಕರ್:

ಈ ಕುರಿತು ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ ಮಾತನಾಡಿದ ಅಧ್ಯಕ್ಷ ಚಂದ್ರಕಾಂತ ಕೊಚರೇಕರ್ ಅವರು, ಜಿಲ್ಲೆಯ ಪ್ರಸ್ತುತ ಪರಿಸ್ಥಿತಿ ಹಾಗೂ ಅರಣ್ಯವಾಸಿಗಳ ಆತಂಕವನ್ನು ಎತ್ತಿಹಿಡಿದರು:

ಶೇ. 80ರಷ್ಟು ಅರಣ್ಯ ಭೂಮಿ: उत्तर ಕನ್ನಡ ಜಿಲ್ಲೆಯ ಒಟ್ಟು ವಿಸ್ತೀರ್ಣದಲ್ಲಿ ಶೇ. 80ರಷ್ಟು ಭಾಗ ಅರಣ್ಯ ಭೂಮಿಯಾಗಿದ್ದು, ಖಾಸಗಿ ಮತ್ತು ಕಂದಾಯ ಭೂಮಿ ಕೇವಲ ಶೇ. 20ರಷ್ಟು ಮಾತ್ರವಿದೆ. ಜಿಲ್ಲೆಯ ಸುಮಾರು ಶೇ. 30ರಷ್ಟು ಜನರು ತಲೆತಲಾಂತರದಿಂದ ಅರಣ್ಯ ಭೂಮಿಯಲ್ಲಿ ಕೃಷಿ, ತೋಟಗಾರಿಕೆ ಹಾಗೂ ವಸತಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.

567 ಹಳ್ಳಿಗಳಿಗೆ ಆತಂಕ: ಈಗಾಗಲೇ ಚಾಲ್ತಿಯಲ್ಲಿರುವ ನಿಯಮಗಳಿಂದಲೇ ಜನಸಾಮಾನ್ಯರ ಬದುಕು ಕಷ್ಟಕರವಾಗಿದೆ. ಹೀಗಿರುವಾಗ ಜಿಲ್ಲೆಯ ಬೃಹತ್ ಭಾಗ ಹಾಗೂ ಸುಮಾರು 567 ಹಳ್ಳಿಗಳ ಜನವಸತಿ ಪ್ರದೇಶಗಳನ್ನು ‘ಪರಿಸರ ಸೂಕ್ಷ್ಮ ವಲಯ’ (Eco-Sensitive Zone) ಎಂದು ಘೋಷಿಸಿ ನಿರ್ಬಂಧ ಹೇರಲು ಹೊರಟಿರುವುದು ಆಘಾತಕಾರಿ.

ಕೇಂದ್ರದ ದ್ವಿಮುಖ ನೀತಿ: ಪರಿಸರ ಸೂಕ್ಷ್ಮ ವಲಯ ಗುರುತಿಸುವಲ್ಲಿ ಕೇಂದ್ರ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ. ಒಂದೆಡೆ ತಲೆತಲಾಂತರದಿಂದ ಅರಣ್ಯ ಹಾಗೂ ಪರಿಸರವನ್ನು ರಕ್ಷಿಸಿಕೊಂಡು ಬಂದಿರುವ ರೈತರ ಕೃಷಿ ಮತ್ತು ಜೀವನೋಪಾಯಕ್ಕೆ ನಿರ್ಬಂಧ ಹೇರಲಾಗುತ್ತಿದೆ. ಇನ್ನೊಂದೆಡೆ, ಅತ್ಯಂತ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಬೃಹತ್ ಯೋಜನೆಗಳನ್ನು ಸ್ಥಾಪಿಸಲು ಕೇಂದ್ರವೇ ಅವಕಾಶ ನೀಡುತ್ತಿರುವುದು ಖಂಡನೀಯ.

    ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರಕ್ಕೆ ಆಗ್ರಹ:

    ಅರಣ್ಯ ಮತ್ತು ಪರಿಸರ ರಕ್ಷಣೆಯಲ್ಲಿ ಅರಣ್ಯವಾಸಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವಾರು ಕಾಯ್ದೆ-ಕಾನೂನುಗಳು ಜಾರಿಯಲ್ಲಿವೆ. ಆದ್ದರಿಂದ ಕೇಂದ್ರ ಪರಿಸರ ಇಲಾಖೆಯು ಈ ಜನವಿರೋಧಿ 7ನೇ ಕರಡು ಅಧಿಸೂಚನೆಯನ್ನು ಕೂಡಲೇ ಹಿಂಪಡೆಯಬೇಕು.

    ರಾಜ್ಯ ಸರ್ಕಾರವು ಈ ಅಧಿಸೂಚನೆಗೆ ತನ್ನ ಸ್ಪಷ್ಟ ವಿರೋಧವನ್ನು ದಾಖಲಿಸಬೇಕು ಹಾಗೂ ಜಿಲ್ಲೆಯ ಜನರ ಹಿತ ಕಾಯಲು ದೃಢವಾದ ಕ್ರಮ ಕೈಗೊಳ್ಳಬೇಕು ಎಂದು ಚಂದ್ರಕಾಂತ ಕೊಚರೇಕರ್ ಅವರು ಒತ್ತಾಯಿಸಿದ್ದಾರೆ.

    About The Author

    error: Content is protected !!