ಕೂಡ್ಲಿಗಿ: “ಹಬ್ಬಗಳು ಸಂಭ್ರಮದ ಸಂಕೇತ. ಮೊಹರಂ ಹಬ್ಬದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಶಾಂತಿ ಭಂಗವಾಗಲು ಬಿಡುವುದಿಲ್ಲ. ಸಾರ್ವಜನಿಕರು ಹಾಗೂ ಸರ್ವ ಧರ್ಮದ ಮುಖಂಡರು ಇಲಾಖೆಯೊಂದಿಗೆ ಕೈಜೋಡಿಸಿ ಶಾಂತಿ-ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು” ಎಂದು ಕೂಡ್ಲಿಗಿ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಮಲ್ಲೇಶಪ್ಪ ದೊಡ್ಡಮನೆ ತಿಳಿಸಿದರು.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪೊಲೀಸ್ ಉಪವಿಭಾಗ, ಪೊಲೀಸ್ ಠಾಣೆ, ತಾಲೂಕು ಆಡಳಿತ ಹಾಗೂ ವಿವಿಧ ಸಮುದಾಯಗಳ ಮುಖಂಡರು ಮತ್ತು ನಾಗರಿಕರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮೊಹರಂ ಹಬ್ಬದ ಮುಂಜಾಗ್ರತಾ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಪುಂಡ ಯುವಕರನ್ನು ಹತೋಟಿಯಲ್ಲಿಡುವುದು ಹಿರಿಯರ ಜವಾಬ್ದಾರಿ
ಹಬ್ಬದ ಸಂದರ್ಭದಲ್ಲಿ ಯುವಕರು ದಾರಿ ತಪ್ಪದಂತೆ ನೋಡಿಕೊಳ್ಳುವಲ್ಲಿ ಪೋಷಕರು ಮತ್ತು ಸಮುದಾಯದ ಮುಖಂಡರ ಪಾತ್ರ ದೊಡ್ಡದಾಗಿದೆ ಎಂದ ಡಿವೈಎಸ್ಪಿ, “ಸಮುದಾಯಗಳ ಹಿರಿಯರು, ಪ್ರಭಾವಿಗಳು ಮತ್ತು ಜನಪ್ರತಿನಿಧಿಗಳು ತಮ್ಮ ತಮ್ಮ ಭಾಗದ ಯುವಕರಿಗೆ ಕಾನೂನಿನ ಗಾಂಭೀರ್ಯದ ಬಗ್ಗೆ ತಿಳಿಹೇಳಬೇಕು. ಅವರನ್ನು ಹದ್ದುಬಸ್ತ್ನಲ್ಲಿಟ್ಟು, ಹಬ್ಬದಲ್ಲಿ ಜವಾಬ್ದಾರಿಯುತವಾಗಿ ವರ್ತಿಸುವಂತೆ ಜಾಗೃತಿ ಮೂಡಿಸಬೇಕು” ಎಂದು ಸೂಚಿಸಿದರು.
ಅಪರಾಧಕ್ಕೆ ಕ್ಷಮೆ ಇಲ್ಲ; ಕಠಿಣ ಕ್ರಮದ ಎಚ್ಚರಿಕೆ
ಶಾಂತಿ ಭಂಗ ತಂದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಇಲಾಖೆ ನಿರ್ಧಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳಲಿದೆ. ಹಬ್ಬದ ನೆಪದಲ್ಲಿ ಕೋಮು ಗಲಭೆ, ದಂಗೆ, ದೊಂಬಿ, ಗುಂಪು ಘರ್ಷಣೆ ಹಾಗೂ ಹಲ್ಲೆಗಳಂತಹ ದುಶ್ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಮತ್ತು ಅಂತಹ ಘಟನೆಗಳಿಗೆ ಕುಮ್ಮಕ್ಕು ನೀಡುವವರಿಗೆ ಕಾನೂನಿನಲ್ಲಿ ಯಾವುದೇ ಕ್ಷಮೆ ಇರುವುದಿಲ್ಲ ಎಂದು ಅವರು ಕಟ್ಟುನಿಟ್ಟಾಗಿ ಎಚ್ಚರಿಸಿದರು.

ಸಿಸಿಟಿವಿ ಕಣ್ಗಾವಲು ಹಾಗೂ ಬಿಗಿ ಪೊಲೀಸ್ ಭದ್ರತೆ
ಮೊಹರಂ ಮೆರವಣಿಗೆ ಸುಸೂತ್ರವಾಗಿ ನಡೆಯಲು ಇಲಾಖೆ ಸರ್ವರೀತಿಯಲ್ಲಿ ಸನ್ನದ್ಧವಾಗಿದೆ. ಪ್ರಮುಖ ಬೀದಿಗಳು, ಧಾರ್ಮಿಕ ಕೇಂದ್ರಗಳು ಹಾಗೂ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಅಗತ್ಯವಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ/ಡಿಎಆರ್) ನಿಯೋಜಿಸಿ ಬಿಗಿ ಭದ್ರತೆ ಕಲ್ಪಿಸಲಾಗುವುದು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಅನಗತ್ಯವಾಗಿ ಗುಂಪು ಸೇರುವುದನ್ನು ನಿಷೇಧಿಸಿ ತೀವ್ರ ನಿಗಾ ವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ ಗಣ್ಯರು
ಸಭೆಯಲ್ಲಿ ಉಪಸ್ಥಿತರಿದ್ದ ತಹಶೀಲ್ದಾರ್ ವಿ. ಕೆ. ನೇತ್ರಾವತಿ ಹಾಗೂ ಸಿಪಿಐ ಪ್ರಹ್ಲಾದ್ ಆರ್. ಚನ್ನಗಿರಿ ಅವರು ಮಾತನಾಡಿ ಸಾರ್ವಜನಿಕರಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ಸಭೆಯಲ್ಲಿದ್ದ ವಿವಿಧ ಸಮುದಾಯಗಳ ಮುಖಂಡರು ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ತಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡರು.
ವೇದಿಕೆಯಲ್ಲಿ ಪಿಎಸ್‌ಐ ಸಿ. ಪ್ರಕಾಶ್ ಉಪಸ್ಥಿತರಿದ್ದರು. ಮುಸ್ಲಿಂ ಧರ್ಮದ ಪ್ರಮುಖರು ಸೇರಿದಂತೆ ವಿವಿಧ ಧರ್ಮಗಳ ಗುರುಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪಟ್ಟಣದ ಹಿರಿಯರು, ರಾಜಕೀಯ ಮುಖಂಡರು ಹಾಗೂ ನೂರಾರು ಯುವಕರು ಈ ಶಾಂತಿ ಸಭೆಯಲ್ಲಿ ಪಾಲ್ಗೊಂಡಿದ್ದರು.

More Stories
ವಿವಿಧ ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ತಯಾರಕರಿಂದ ಬೃಹತ್ ಪ್ರತಿಭಟನೆ; ತಹಶೀಲ್ದಾರ್ ಮೂಲಕ ಸಿಎಂಗೆ ಮನವಿ
ವರುಣನ ಕೃಪೆಗಾಗಿ ಕೂಡ್ಲಿಗಿಯಲ್ಲಿ ಕತ್ತೆ, ಕಪ್ಪೆಗಳ ಅದ್ದೂರಿ ಮದುವೆ: ಭರ್ಜರಿ ಮೆರವಣಿಗೆ!
ಕರ್ತವ್ಯ ನಿಷ್ಠೆ, ಸೇವಾ ಮನೋಭಾವ ಅಳವಡಿಸಿಕೊಳ್ಳಿ; ಆಸ್ಪತ್ರೆ ಸಿಬ್ಬಂದಿಗೆ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಕರೆ