ಕೂಡ್ಲಿಗಿ: ಇಲ್ಲಿನ ತಾಲೂಕು ಕಚೇರಿಯ ಆಧಾರ್ ಕೇಂದ್ರದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಮಾಡಿಸಲು ಮತ್ತು ಅಪ್ಡೇಟ್ ಮಾಡಿಸಲು ತಿಂಗಳುಗಟ್ಟಲೆ ಅಲೆಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಕಚೇರಿಯ ಸಿಬ್ಬಂದಿಯ ಬೇಜವಾಬ್ದಾರಿತನದಿಂದಾಗಿ ವಿದ್ಯಾರ್ಥಿಯೊಬ್ಬ ಪ್ರವೇಶ ಪರೀಕ್ಷೆಯಿಂದಲೇ ವಂಚಿತನಾದ ಗಂಭೀರ ಘಟನೆ ಬೆಳಕಿಗೆ ಬಂದಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ ಬಡೆಲಡಕ್ಕೂ ಗ್ರಾಮದ ದೊಡ್ಡಗೋಲ್ರಹಟ್ಟಿಯ ನಿವಾಸಿ ಕಾಳಮ್ಮ ಎಂಬ ಮಹಿಳೆ ತನ್ನ ಮಗನ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇವರ ಮಗ ಸದ್ಯ ೬ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶ ಪರೀಕ್ಷೆ ಬರೆಯಲು ಆಧಾರ್ ಕಾರ್ಡ್ ಅತ್ಯಗತ್ಯವಾಗಿತ್ತು. ಆದರೆ ಕೂಡ್ಲಿಗಿ ತಾಲೂಕು ಕಚೇರಿಯ ಆಧಾರ್ ಕೇಂದ್ರದಲ್ಲಿ ಸಕಾಲಕ್ಕೆ ಕೆಲಸವಾಗದ ಕಾರಣ, ಈ ತಾಯಿ ಕೂಡ್ಲಿಗಿಯಿಂದ ದಾವಣಗೆರೆ ಹಾಗೂ ವಿಜಯನಗರ ಜಿಲ್ಲಾಧಿಕಾರಿ ಕಚೇರಿಗಳಿಗೂ ಅಲೆದಾಡಿದ್ದಾರೆ. ಆದರೂ ಕೆಲಸವಾಗದೆ ಬೇಸೆತ್ತು ಕೊನೆಗೆ ಮನೆಗೆ ವಾಪಸ್ ಹೋಗಿದ್ದಾರೆ. ಆಧಾರ್ ಕಾರ್ಡ್ ಸಿಗದ ಕಾರಣ ಬಾಲಕ ಮುರಾರ್ಜಿ ಪರೀಕ್ಷೆಯಿಂದ ವಂಚಿತನಾಗಿದ್ದು, ಹೆತ್ತವರು ಕಣ್ಣೀರು ಹಾಕುವಂತಾಗಿದೆ.

ಮೂರು ತಿಂಗಳಿಂದ ಮೂರು ವರ್ಷ ಅಲೆದಾಟ!
ಕೂಡ್ಲಿಗಿ ತಾಲೂಕು ಕಚೇರಿಯ ಆಧಾರ್ ಕಾರ್ಡ್ ಕಂಪ್ಯೂಟರ್ ಆಪರೇಟರ್ ಸಾರ್ವಜನಿಕರನ್ನು ಸುಖಾಸುಮ್ಮನೆ ಮೂರು ತಿಂಗಳಿಂದ ಹಿಡಿದು ಮೂರು ವರ್ಷಗಳವರೆಗೆ ಅಲೆದಾಡಿಸುತ್ತಿದ್ದಾರೆ ಎಂದು ಸಾರ್ವಜನಿಕರು ನೇರವಾಗಿ ದೂರುತ್ತಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಸರಿಯಾದ ಕಾರಣ ತಿಳಿಸದೆ ಪದೇ ಪದೇ ಕಚೇರಿಗೆ ಅಲೆದಾಡಿಸುವುದೇ ಇವರ ನಿತ್ಯದ ಕೆಲಸವಾಗಿದೆ. ಮಕ್ಕಳ ಶಿಕ್ಷಣ, ವಿದ್ಯಾರ್ಥಿವೇತನ ಹಾಗೂ ಸರ್ಕಾರದ ಸೌಲಭ್ಯಗಳಿಗಾಗಿ ಜನರು ದಿನವಿಡೀ ಕ್ಯೂ ನಿಂತರೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಈ ಧೋರಣೆಯಿಂದಾಗಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದಲೇ ದೂರ ಉಳಿಯುವ ಭೀತಿ ಎದುರಾಗಿದೆ.
ಅಧಿಕಾರಿಗಳ ಗಮನಕ್ಕೆ ತನ್ನಿ ಎಂದ ಸಿಬ್ಬಂದಿ:
ಸಾರ್ವಜನಿಕರ ಆಕ್ರೋಶಕ್ಕೆ ಉತ್ತರಿಸಿರುವ ಆಧಾರ್ ಕಂಪ್ಯೂಟರ್ ಆಪರೇಟರ್, “ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ. ಇಡೀ ಕೇಂದ್ರವನ್ನು ನಿಭಾಯಿಸಲು ನಾನು ಒಬ್ಬನೇ ಇರುವುದು. ಇನ್ನೂ ಹೆಚ್ಚಿನ ಸಿಬ್ಬಂದಿಯ ಅವಶ್ಯಕತೆ ಇದ್ದು, ಈ ಬಗ್ಗೆ ನೀವೇ ತಾಲೂಕು ದಂಡಾಧಿಕಾರಿಗಳಿಗೆ (ತಹಶೀಲ್ದಾರ್) ತಿಳಿಸಿ,” ಎಂದು ತಣ್ಣನೆಯ ಉತ್ತರ ನೀಡುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ.

“ಒಂದೆಡೆ ಸರ್ಕಾರ ಡಿಜಿಟಲ್ ಇಂಡಿಯಾ ಎನ್ನುತ್ತದೆ, ಮತ್ತೊಂದೆಡೆ ಕೇವಲ ಒಂದು ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಜಿಲ್ಲೆಯಿಂದ ಜಿಲ್ಲೆಗೆ ಅಲೆಯಬೇಕಾಗಿದೆ. ಇಲಾಖೆಯ ನಿರ್ಲಕ್ಷ್ಯದಿಂದಾಗಿ ನನ್ನ ಮಗ ಮುರಾರ್ಜಿ ಪರೀಕ್ಷೆ ಬರೆಯಲಾಗದೆ ವಂಚಿತನಾಗಿದ್ದಾನೆ. ಅಧಿಕಾರಿಗಳ ಈ ಉದಾಸೀನತೆಗೆ ಯಾರು ಹೊಣೆ?”
— ಕಾಳಮ್ಮ, ನೊಂದ ತಾಯಿ, ದೊಡ್ಡಗೋಲ್ರಹಟ್ಟಿ.
ಕೂಡ್ಲಿಗಿ ತಾಲೂಕಿನ ಹಿರಿಯ ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ, ಆಧಾರ್ ಕೇಂದ್ರಕ್ಕೆ ಹೆಚ್ಚುವರಿ ಸಿಬ್ಬಂದಿ ನೇಮಿಸಬೇಕು ಹಾಗೂ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ತಾಲೂಕು ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

More Stories
ಕೂಡ್ಲಿಗಿಯಲ್ಲಿ ಸೋಲಾರ್, ವಿಂಡ್ ಪವರ್ ಕಂಪನಿಗಳ ಅಕ್ರಮ: ಲೋಕಾಯುಕ್ತ, ಇ.ಡಿ ತನಿಖೆಗೆ ಹೋರಾಟಗಾರರ ಒತ್ತಾಯ
ಮೊಹರಂ ಶಾಂತಿ ಸಭೆ; ಶಾಂತಿ-ಸೌಹಾರ್ದತೆಗೆ ಮೊದಲ ಆದ್ಯತೆ ಎಂದ ಡಿವೈಎಸ್ಪಿ ಮಲ್ಲೇಶಪ್ಪ ದೊಡ್ಡಮನೆ
ವಿವಿಧ ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ತಯಾರಕರಿಂದ ಬೃಹತ್ ಪ್ರತಿಭಟನೆ; ತಹಶೀಲ್ದಾರ್ ಮೂಲಕ ಸಿಎಂಗೆ ಮನವಿ