July 15, 2026

ತಾಯಿ ಸಾವಿನ ನೋವು, ಕುಡಿತದ ಚಟ: ಬಾವಿಗೆ ಹಾರಿ ಯುವಕ ಆತ್ಮಹತ್ಯೆ

ಭಟ್ಕಳ: ತಾಯಿಯ ಸಾವಿನ ನೋವು ಹಾಗೂ ಮದ್ಯದ ಚಟದಿಂದಾಗಿ ಮಾನಸಿಕವಾಗಿ ನೊಂದಿದ್ದ ಯುವಕನೊಬ್ಬ ಮನೆಯ ಹಿಂಭಾಗದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆ ತಾಲೂಕಿನ ಬೆಂಗ್ರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೋಳಿನಮನೆ ಗ್ರಾಮದಲ್ಲಿ ನಡೆದಿದೆ.
ಮೋಳಿನಮನೆ ನಿವಾಸಿ ಆನಂದ ಅಣ್ಣಪ್ಪ ನಾಯ್ಕ (36) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ. ಎಂ.ಕಾಂ. ಉನ್ನತ ಪದವಿ ಪಡೆದಿದ್ದ ಆನಂದ್, ಸದ್ಯ ಯಾವುದೇ ಉದ್ಯೋಗವಿಲ್ಲದೆ ಮನೆಯಲ್ಲೇ ಇದ್ದು, ಕಳೆದ ಕೆಲ ವರ್ಷಗಳಿಂದ ತೀವ್ರ ಮದ್ಯದ ಚಟಕ್ಕೆ ಬಿದ್ದಿದ್ದ ಎನ್ನಲಾಗಿದೆ.

ತಾಯಿಯ ಅಗಲಿಕೆ ತಂದಿದ್ದ ಆಘಾತ:

ಕಳೆದ ಮೇ ತಿಂಗಳಲ್ಲಿ ಶಿರಾಲಿಯ ತಟ್ಟಿಹಕ್ಕಲ್‌ನಲ್ಲಿ ಸಂಭವಿಸಿದ್ದ ಭೀಕರ ‘ಚಿಪ್ಪೆಕಲ್ಲು ದುರಂತ’ದಲ್ಲಿ ಆನಂದ್ ಅವರ ತಾಯಿ ಲಕ್ಷ್ಮೀ ಮೃತಪಟ್ಟಿದ್ದರು. ತಾಯಿಯ ಹಠಾತ್ ಸಾವಿನಿಂದ ಆನಂದ್ ತೀವ್ರವಾಗಿ ಮನನೊಂದಿದ್ದ ಹಾಗೂ ಆ ದುಃಖದಿಂದ ಹೊರಬರಲಾಗದೆ ಮಾನಸಿಕವಾಗಿ ತೀವ್ರವಾಗಿ ಕುಗ್ಗಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ. ಈ ನೋವಿನಿಂದಾಗಿ ಇತ್ತೀಚೆಗೆ ಆತ ಮದ್ಯಪಾನವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದ ಎನ್ನಲಾಗಿದೆ. ಆಗಾಗ್ಗೆ ಕುಡಿತಕ್ಕೆ ಹಣ ನೀಡುವಂತೆ ಮನೆಯವರನ್ನು ಒತ್ತಾಯಿಸುತ್ತಿದ್ದ ಆತ, ಹಣ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯನ್ನೂ ಹಾಕುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹೆಂಚು ತೆಗೆದು ಬಾವಿಗೆ ಜಿಗಿದ ಯುವಕ:

ಮಂಗಳವಾರವೂ ಸಹ ಆನಂದ್ ಮನೆಯವರ ಎದುರು ಮಾನಸಿಕ ಅಸ್ವಸ್ಥನಂತೆ ವಿಚಿತ್ರವಾಗಿ ವರ್ತಿಸಿದ್ದಾನೆ. ತದನಂತರ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಮನೆಯ ಮುಂದಿನ ಎರಡೂ ಬಾಗಿಲುಗಳನ್ನು ಒಳಗಿನಿಂದ ಭದ್ರವಾಗಿ ಬೀಗ ಹಾಕಿಕೊಂಡಿದ್ದಾನೆ. ಬಳಿಕ ಮನೆಯ ಮೇಲ್ಛಾವಣಿಯ ಹೆಂಚನ್ನು ತೆಗೆದು, ಅದರ ಮೂಲಕ ಹೊರಬಂದು ಮನೆಯ ಹಿಂಭಾಗದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು:

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿ ಮುರುಡೇಶ್ವರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮೃತನ ತಂದೆ ಅಣ್ಣಪ್ಪ ಭೈರಾ ನಾಯ್ಕ ಅವರು ನೀಡಿದ ದೂರಿನ ಮೇರೆಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು (UDR) ಪ್ರಕರಣ ದಾಖಲಾಗಿದೆ. ಮುರುಡೇಶ್ವರ ಠಾಣೆಯ ಸಬ್ ಇನ್ಸ್‌ಪೆಕ್ಟರ್ (ಎಸ್.ಐ) ಹಣಮಂತ ಬಿರಾದಾರ ಅವರು ಪ್ರಕರಣದ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

About The Author

error: Content is protected !!