ಹೊನ್ನಾವರ: ತಾಲೂಕಿನ ಹಳದೀಪುರದ ಪ್ರಸಿದ್ಧ ಆರ್.ಇ.ಎಸ್. ಪ್ರೌಢಶಾಲೆಯಲ್ಲಿ ದಿ. ಸರೋಜಿನಿ ಹಾಗೂ ದಿ. ಎಂ.ಎಸ್. ನಾಯ್ಕ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಶಾಲೆಗೆ ಕೊಡುಗೆಯಾಗಿ ನೀಡಲಾದ ಅತ್ಯಾಧುನಿಕ ಕಂಪ್ಯೂಟರ್ ಕೊಠಡಿಯನ್ನು ಹಿರಿಯ ಪತ್ರಕರ್ತರಾದ ಜಿ.ಯು. ಭಟ್ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿ.ಯು. ಭಟ್ ಅವರು, “ಹಳ್ಳಿಯ ಮಕ್ಕಳಿಗೆ ಮೂಲಭೂತ ಶಿಕ್ಷಣವೇ ಸಿಗದ ಕಾಲದಲ್ಲಿ ಈ ಸಂಸ್ಥೆಯನ್ನು ದೂರದೃಷ್ಟಿಯಿಂದ ಕಟ್ಟಲಾಗಿತ್ತು. ಪ್ರಸ್ತುತ ಜಗತ್ತಿನಲ್ಲಿ ಗಣಿತ ಮತ್ತು ವಿಜ್ಞಾನದ ಜೊತೆಗೆ ಕಂಪ್ಯೂಟರ್ ಜ್ಞಾನ ಅತ್ಯಂತ ಮುಖ್ಯವಾಗಿದೆ. ಗ್ರಾಮೀಣ ಭಾಗದ ಪ್ರತಿಯೊಬ್ಬ ಮಗುವಿಗೂ ಕಂಪ್ಯೂಟರ್ ಶಿಕ್ಷಣ ದೊರೆಯುವಂತಾಗಬೇಕು. ಇಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಿದಾಗ ಮಾತ್ರ ಶಾಲೆಗೆ ಹಾಗೂ ಆಡಳಿತ ಮಂಡಳಿಗೆ ನಿಜವಾದ ಗೌರವ ಸಿಗುತ್ತದೆ” ಎಂದು ಅಭಿಪ್ರಾಯಪಟ್ಟರು.
ಪೂರ್ವಜರ ಸಂಸ್ಕಾರದಿಂದ ದಾನದ ಗುಣ: ಆರ್.ಎನ್. ನಾಯ್ಕ
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಸಚಿವ ಆರ್.ಎನ್. ನಾಯ್ಕ ಮಾತನಾಡಿ, “ದಿವಂಗತ ಎಂ.ಎಸ್. ನಾಯ್ಕ ಅವರ ಮಕ್ಕಳು ಶಾಲೆಗೆ ಇಂತಹ ದೊಡ್ಡ ನೆರವು ನೀಡುವ ಮೂಲಕ ಹೆತ್ತವರ ಹೆಸರನ್ನು ಸಾರ್ಥಕಗೊಳಿಸಿದ್ದಾರೆ. ದಾನ, ಧರ್ಮ ಮತ್ತು ಎದೆಗಾರಿಕೆ ಎಂಬುದು ತಲೆತಲಾಂತರದಿಂದ ರಕ್ತಗತವಾಗಿ ಬರುವ ಸಂಸ್ಕಾರವಾಗಿದೆ. ವಿದ್ಯಾರ್ಥಿಗಳು ತಾವು ಉನ್ನತ ಸ್ಥಾನಕ್ಕೇರಿದಾಗ ತಾವು ಕಲಿತ ಶಾಲೆಗೆ ಹಾಗೂ ಊರಿಗೆ ಸಹಾಯ ಮಾಡುವ ಸಂಕಲ್ಪ ಮಾಡಬೇಕು” ಎಂದು ಕರೆ ನೀಡಿದರು.

ಹೆತ್ತವರ ನೆನಪಿನಲ್ಲಿ ₹6.5 ಲಕ್ಷ ವೆಚ್ಚದ ಕೊಡುಗೆ: ರಾಜೀವ ಶ್ಯಾನಭಾಗ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ರಾಜೀವ ಶ್ಯಾನಭಾಗ ಮಾತನಾಡಿ, “ಇಂದಿನ ಕಾಲದಲ್ಲಿ ಹೆತ್ತವರ ನಿಧನದ ನಂತರ ಆಸ್ತಿಗಾಗಿ ಜಗಳವಾಡುವವರೇ ಹೆಚ್ಚು. ಆದರೆ ಈ ಮಕ್ಕಳು ತಮ್ಮ ತಂದೆ-ತಾಯಿಯ ನೆನಪಿನಲ್ಲಿ ಸುಮಾರು ₹6.5 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ಹಾಗೂ ಕಂಪ್ಯೂಟರ್ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿರುವುದು ಶ್ಲಾಘನೀಯ. 21ನೇ ಶತಮಾನವು ಸಂಪೂರ್ಣ ತಂತ್ರಜ್ಞಾನದ ಯುಗವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು” ಎಂದರು.
ಕಾರ್ಯಕ್ರಮದಲ್ಲಿ ಆರ್.ಇ.ಎಸ್. ಆಡಳಿತ ಮಂಡಳಿಯ ಸದಸ್ಯರಾದ ಸೀತಾರಾಮ ನಾಯ್ಕ, ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾದ ಉಮೇಶ್ ಗೌಡ ಹಾಗೂ ಪ್ರೌಢಶಾಲಾ ವಿಭಾಗದ ಮುಖ್ಯಾಧ್ಯಾಪಕರಾದ ಸೋಮೇಶ್ ಪೂಜಾರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

More Stories
ಹೊನ್ನಾವರದಲ್ಲಿ ಜುಲೈ 26ರಂದು ‘ಕಾರ್ಗಿಲ್ ವಿಜಯ ದಿವಸ’: ಬೃಹತ್ ರ್ಯಾಲಿ ಹಾಗೂ ಹುತಾತ್ಮ ಯೋಧರಿಗೆ ಪುಷ್ಪನಮನ ಕಾರ್ಯಕ್ರಮ
ಕ್ರೀಡಾಕೂಟದಲ್ಲಿ ಮಂಕಿಯ ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳ ಅದ್ಭುತ ಸಾಧನೆ:
ಕಿಸಾ (KISA) ಯೋಗ ಸ್ಪರ್ಧೆ: ಮಂಕಿಯ ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಗೆ ಪ್ರಥಮ ಸ್ಥಾನ