

ಕೂಡ್ಲಿಗಿ (ವಿಜಯನಗರ): ಪಟ್ಟಣದಲ್ಲಿರುವ 100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯನ್ನು 150 ಹಾಸಿಗೆಗಳ ಆಸ್ಪತ್ರೆಯಾಗಿ ಉನ್ನತೀಕರಿಸಿ, ಹಾಲಿ ಇರುವ ಆಸ್ಪತ್ರೆಯ ಆವರಣದಲ್ಲೇ ‘ತಾಯಿ ಮತ್ತು ಮಕ್ಕಳ ಆಸ್ಪತ್ರೆ’ಯನ್ನು ನಿರ್ಮಿಸಲು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರು ಕೈಗೊಂಡಿರುವ ನಿರ್ಧಾರಕ್ಕೆ ಸಾರ್ವಜನಿಕ ವಲಯ ಹಾಗೂ ವಿವಿಧ ಸಂಘಟನೆಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಸಾರ್ವಜನಿಕ ಆಸ್ಪತ್ರೆ ಆವರಣದಲ್ಲೇ ಏಕೆ ಬೇಕು? ಹಾಲಿ ಇರುವ ಸಾರ್ವಜನಿಕ ಆಸ್ಪತ್ರೆಯ ಪಕ್ಕದಲ್ಲೇ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಾಣವಾಗುವುದರಿಂದ ತುರ್ತು ಸಂದರ್ಭಗಳಲ್ಲಿ ತಾಯಿ ಮತ್ತು ನವಜಾತ ಶಿಶುಗಳಿಗೆ ತಕ್ಷಣದ ಚಿಕಿತ್ಸೆ ನೀಡಲು ಸುಲಭವಾಗುತ್ತದೆ. ಸ್ತ್ರೀರೋಗ ತಜ್ಞ ಡಾ. ನಾಗರಾಜ್ ಅವರ ಪ್ರಕಾರ, ಈ ಆಸ್ಪತ್ರೆ ಹತ್ತಿರದಲ್ಲಿದ್ದರೆ ತಾಯಿ-ಮಕ್ಕಳ ಮರಣ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದು.

ದೂರದ ಆಸ್ಪತ್ರೆಗಳಿಗೆ ಅಲೆಯುವುದು ತಪ್ಪಲಿದೆ: ಆಶಾ ಕಾರ್ಯಕರ್ತೆಯರ ಪ್ರಕಾರ, ಪ್ರಸ್ತುತ ಸಂಕೀರ್ಣ ಹೆರಿಗೆ ಪ್ರಕರಣಗಳನ್ನು ಹೊಸಪೇಟೆ, ಬಳ್ಳಾರಿ, ಕೊಪ್ಪಳ ಹಾಗೂ ದಾವಣಗೆರೆಗೆ ಶಿಫಾರಸು ಮಾಡಲಾಗುತ್ತಿತ್ತು. ಇದರಿಂದ ಬಡ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದರು. ಕೂಡ್ಲಿಗಿಯಲ್ಲೇ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾದರೆ ಮಾಸಿಕವಾಗಿ ಬರುವ 50 ರಿಂದ 75 ಹೆರಿಗೆ ಪ್ರಕರಣಗಳಿಗೆ ಸ್ಥಳೀಯವಾಗಿಯೇ ಉತ್ತಮ ಚಿಕಿತ್ಸೆ ಸಿಗಲಿದೆ.

ವಿಜಯನಗರ ಜಿಲ್ಲೆಗೆ ಸಂಜೀವಿನಿ: ಹಿರಿಯ ನಾಗರಿಕರು ಹಾಗೂ ದಲಿತ ಮುಖಂಡರು ಮಾತನಾಡಿ, “ಈ ಹಿಂದೆ ಶಾಸಕರ ತಂದೆ, ದಿವಂಗತ ಎನ್.ಟಿ. ಬೊಮ್ಮಣ್ಣ ಅವರು 100 ಹಾಸಿಗೆಯ ಆಸ್ಪತ್ರೆ ತಂದು ತಾಲೂಕಿಗೆ ಕೊಡುಗೆ ನೀಡಿದ್ದರು. ಈಗ ಅವರ ಪುತ್ರ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರು ಅದನ್ನು ವಿಭಾಗೀಯ ಮಟ್ಟದ ಆಸ್ಪತ್ರೆಯನ್ನಾಗಿ ಬೆಳೆಸುತ್ತಿದ್ದಾರೆ. ಇದು ಕೂಡ್ಲಿಗಿಗೆ ಮಾತ್ರವಲ್ಲದೆ ನೆರೆಹೊರೆಯ ತಾಲೂಕುಗಳಿಗೂ ಮಾದರಿಯಾಗಲಿದೆ” ಎಂದು ಬಣ್ಣಿಸಿದ್ದಾರೆ.


ಕನ್ನಡ ಪರ ಸಂಘಟನೆಗಳು, ದಲಿತ ಪರ ಸಂಘಟನೆಗಳು, ರೈತ ಸಂಘ, ಕಾರ್ಮಿಕ ಸಂಘ, ಮಹಿಳಾ ಸಂಘಟನೆಗಳು ಹಾಗೂ ಕೂಡ್ಲಿಗಿ ತಾಲೂಕಿನ ಸಾರ್ವಜನಿಕರು ಶಾಸಕರ ಈ ಜನಪರ ಕಾಳಜಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ನಿಗದಿಪಡಿಸಿದ ಜಾಗದಲ್ಲೇ ತುರ್ತಾಗಿ ಆಸ್ಪತ್ರೆ ನಿರ್ಮಿಸಬೇಕೆಂದು ಒತ್ತಾಯಿಸಿದ್ದಾರೆ.
(ವರದಿ: ವಿ.ಜಿ. ವೃಷಭೇಂದ್ರ, ಕೂಡ್ಲಿಗಿ)
About The Author




More Stories
ಶೇ. 33 ಮೀಸಲಾತಿ ನಮ್ಮ ಹಕ್ಕು: ಕೂಡ್ಲಿಗಿಯಲ್ಲಿ ಜನವಾದಿ ಮಹಿಳಾ ಸಂಘದಿಂದ ಬೃಹತ್ ಪ್ರತಿಭಟನೆ ಹಾಗೂ ಹಕ್ಕೊತ್ತಾಯ
ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಸಂಘಟನಾ ಚತುರ, ಅತ್ಯಂತ ಜನಪ್ರಿಯ ಮಾದರಿ ಶಾಸಕ: ಹರ್ಕರ್ ವೇಣುಗೋಪಾಲ್ ರಾವ್ ಬಣ್ಣನೆ
ಅನಿಯಮಿತ ದಂಡ ವಸೂಲಾತಿ ಕಿರುಕುಳ ನಿಲ್ಲಿಸಿ: ಜೆಸ್ಕಾಂಗೆ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ತಾಕೀತು