August 21, 2026

ಕಿಕ್ಕೇರಿ ಡೈರಿ ಅಧ್ಯಕ್ಷರಾಗಿ ಕೆ.ಟಿ. ರಮೇಶ್ ಎರಡನೇ ಬಾರಿಗೆ ಅವಿರೋಧ ಆಯ್ಕೆ.

ಕಿಕ್ಕೇರಿ (ಕೃಷ್ಣರಾಜಪೇಟೆ): ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನ ತೆರವಾಗಿದ್ದ ಹಿನ್ನೆಲೆಯಲ್ಲಿ ನಿಗದಿಯಾಗಿದ್ದ ಚುನಾವಣೆಯಲ್ಲಿ ಕೆ.ಪಿಸಿ.ಸಿ ಸದಸ್ಯ ಕಿಕ್ಕೇರಿ ಸುರೇಶ್ ಅವರ ಮಾರ್ಗದರ್ಶನದಲ್ಲಿ ಕೆ.ಟಿ. ರಮೇಶ್ ಅವರು ಎರಡನೇ ಬಾರಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಕೆ.ಟಿ. ರಮೇಶ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ, ಚುನಾವಣಾಧಿಕಾರಿಗಳು ಅವರ ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.

ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿಗೆ ಶ್ರಮಿಸುವೆ – ನೂತನ ಅಧ್ಯಕ್ಷ ಕೆ.ಟಿ. ರಮೇಶ್:

ಆಯ್ಕೆಯ ನಂತರ ಮಾತನಾಡಿದ ನೂತನ ಅಧ್ಯಕ್ಷ ಕೆ.ಟಿ. ರಮೇಶ್: “ನನ್ನ ಮೇಲೆ ವಿಶ್ವಾಸವಿಟ್ಟು ಎರಡನೇ ಬಾರಿಗೆ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ ಕೆ.ಪಿ.ಸಿ.ಸಿ ಸದಸ್ಯ ಕಿಕ್ಕೇರಿ ಸುರೇಶ್, ಸಂಘದ ಎಲ್ಲಾ ನಿರ್ದೇಶಕರು ಹಾಗೂ ಸದಸ್ಯರಿಗೆ ಧನ್ಯವಾದಗಳು. ಈ ಹಿಂದೆ ನಮ್ಮ ತಂದೆ ತಿಮ್ಮೇಗೌಡರು 4 ಬಾರಿ ಅಧ್ಯಕ್ಷರಾಗಿ ಸಂಘದ ಕಟ್ಟಡ ನಿರ್ಮಿಸಿ ಅಭಿವೃದ್ಧಿಗೆ ಶ್ರಮಿಸಿದ್ದರು. ನಾನು 2015ರಲ್ಲಿ ಮೊದಲ ಬಾರಿಗೆ ಅಧ್ಯಕ್ಷನಾದಾಗ ಬಿ.ಎಂ.ಸಿ (BMC) ಘಟಕವನ್ನು ಸ್ಥಾಪಿಸಿದ್ದೆ. ಈಗ ಮತ್ತೆ ಸಿಕ್ಕಿರುವ ಈ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ಎಲ್ಲರ ಸಹಕಾರದೊಂದಿಗೆ ಸಂಘ ಹಾಗೂ ಹಾಲು ಉತ್ಪಾದಕರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತೇನೆ,” ಎಂದು ತಿಳಿಸಿದರು.

ರೈತರ ಅಭಿವೃದ್ಧಿಗೆ ಶ್ರಮಿಸಲು ಕಿಕ್ಕೇರಿ ಸುರೇಶ್ ಕರೆ:

ಕೆ.ಪಿ.ಸಿ.ಸಿ ಸದಸ್ಯ ಕಿಕ್ಕೇರಿ ಸುರೇಶ್ ಅವರು ನೂತನ ಅಧ್ಯಕ್ಷರಿಗೆ ಸಿಹಿ ತಿನ್ನಿಸಿ ಶುಭ ಹಾರೈಸಿ ಮಾತನಾಡಿ, “ಸಂಘವನ್ನು ಉನ್ನತ ಮಟ್ಟಕ್ಕೆ ಬೆಳೆಸುವುದರ ಜೊತೆಗೆ ಹಾಲು ಉತ್ಪಾದಕರಿಗೆ ಸಿಗಬೇಕಾದ ಎಲ್ಲಾ ಸರ್ಕಾರಿ ಹಾಗೂ ಇಲಾಖಾ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸಿ, ರೈತರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಬೇಕು,” ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರು ಹಾಗೂ ಮುಖಂಡರಾದ ಮಂಜೇಗೌಡ, ವಾಸುದೇವ್, ಕೆ.ಎಂ. ಮೋಹನ, ನಾಗರಾಜಶೆಟ್ಟಿ, ಕೆ.ಟಿ. ಪರಮೇಶ್, ಪುಟ್ಟಣ್ಣಯ್ಯ, ಕೆ.ಜಿ. ತಮ್ಮಣ್ಣ, ಸಿ.ಕೆ. ಪಲ್ಲವಿ, ಮೀನಾಕ್ಷಿ, ಪೂರ್ಣಿಮಾ, ಹೇಮಾ, ಪ್ರಭಾರ ಕಾರ್ಯದರ್ಶಿ ನಾಗೇಶ್, ಮುಖಂಡರಾದ ಕೆ.ಆರ್. ಕೃಷ್ಣ, ಪುಟ್ಟಣ್ಣ, ಅಣ್ಣಯ್ಯ, ಮಹದೇವ್, ನಾಗಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ: ಶಂಭು ಕಿಕ್ಕೇರಿ (ಕೃಷ್ಣರಾಜಪೇಟೆ)

About The Author

error: Content is protected !!