August 21, 2026

ಅಕ್ರಮ ಗ್ಯಾಸ್ ಸಿಲಿಂಡರ್ ಬಳಕೆ: ಹೋಟೆಲ್, ಢಾಬಾಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ; 29 ಸಿಲಿಂಡರ್ ಜಪ್ತಿ!

ಚಿಕ್ಕೋಡಿ: ಪಟ್ಟಣದ ವಿವಿಧ ಹೋಟೆಲ್‌ ಹಾಗೂ ಢಾಬಾಗಳಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಅನಧಿಕೃತವಾಗಿ ಬಳಸಲಾಗುತ್ತಿದ್ದ ಗೃಹಬಳಕೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳ ವಿರುದ್ಧ ಚಿಕ್ಕೋಡಿ ತಹಶೀಲ್ದಾರ್ ರಾಜೇಶ ಬುರ್ಲಿ ಅವರ ನೇತೃತ್ವದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿ, ಒಟ್ಟು 29 ಸಿಲಿಂಡರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ:

ಸಬ್ಸಿಡಿಯುಕ್ತ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳನ್ನು ನಿಯಮ ಉಲ್ಲಂಘಿಸಿ ವ್ಯಾಪಾರೀ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ಕೈಗೊಂಡಿದೆ. ದಾಳಿ ವೇಳೆ ಕೆಲ ಪ್ರತಿಷ್ಠಿತ ಹೋಟೆಲ್ ಹಾಗೂ ಢಾಬಾಗಳಲ್ಲಿ ಅಕ್ರಮವಾಗಿ ಗೃಹಬಳಕೆ ಸಿಲಿಂಡರ್‌ಗಳನ್ನು ಬಳಸುತ್ತಿರುವುದು ಪತ್ತೆಯಾಗಿದ್ದು, ಸ್ಥಳದಲ್ಲೇ ಅವುಗಳನ್ನು ಜಪ್ತಿ ಮಾಡಲಾಗಿದೆ.

ಕಠಿಣ ಕಾನೂನು ಕ್ರಮದ ಎಚ್ಚರಿಕೆ:

ತಹಶೀಲ್ದಾರ್ ರಾಜೇಶ ಬುರ್ಲಿ ಅವರು ಮಾತನಾಡಿ “ಸರ್ಕಾರದ ನಿಯಮಗಳ ಪ್ರಕಾರ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವುದು ಕಾನೂನುಬಾಹಿರ ಅಪರಾಧ. ಇಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಮುಂದಿನ ದಿನಗಳಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪಟ್ಟಣದ ಎಲ್ಲಾ ಹೋಟೆಲ್ ಮತ್ತು ಢಾಬಾ ಮಾಲೀಕರು ಕಡ್ಡಾಯವಾಗಿ ಅಧಿಕೃತ ವಾಣಿಜ್ಯ ಸಿಲಿಂಡರ್‌ಗಳನ್ನೇ (Commercial Cylinders) ಬಳಸಬೇಕು,” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿದ್ದ ಅಧಿಕಾರಿಗಳು:

ಈ ದಾಳಿಯ ಕಾರ್ಯಾಚರಣೆಯಲ್ಲಿ ಆಹಾರ ಇಲಾಖೆಯ ಶಿರಸ್ತೆದಾರರಾದ ಹಣಮಂತ ಕಾಂಡೆಕರ ಹಾಗೂ ಆಹಾರ ನಿರೀಕ್ಷಕರಾದ ಐಶ್ವರ್ಯ ದಿವಟೆ ಅವರು ಉಪಸ್ಥಿತರಿದ್ದು ಪ್ರಮುಖ ಪಾತ್ರ ವಹಿಸಿದ್ದರು.

ವರದಿ: ಮಹೇಶ್ ಶರ್ಮಾ

About The Author

error: Content is protected !!