August 25, 2026

ಅಡಿಕೆ ಕೊಯ್ಯುವಾಗ ಆಕಸ್ಮಿಕ ವಿದ್ಯುತ್ ಸ್ಪರ್ಶ: 11 ಕೆ.ವಿ. ತಂತಿಗೆ ಏಣಿ ತಾಗಿ ಕೃಷಿಕ ದಾರುಣ ಸಾವು!

ಭಟ್ಕಳ: ಅಡಿಕೆ ಕೊಯ್ಯುತ್ತಿದ್ದ ವೇಳೆ ಅಲ್ಯೂಮಿನಿಯಂ ಏಣಿ 11 ಕೆ.ವಿ. ವಿದ್ಯುತ್ ತಂತಿಗೆ ಆಕಸ್ಮಿಕವಾಗಿ ತಾಗಿ ವಿದ್ಯುತ್ ಸ್ಪರ್ಶಗೊಂಡ ಪರಿಣಾಮ ಕೃಷಿಕರೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಭಟ್ಕಳ ತಾಲೂಕಿನ ಕುಂಟವಾಣಿ ಗ್ರಾಮದಲ್ಲಿ ನಡೆದಿದೆ.

ಕುಂಟವಾಣಿ ಗ್ರಾಮದ ನಿವಾಸಿ, ಕೃಷಿಕ ಶ್ರೀನಿವಾಸ ಚಿಕ್ಕಯ್ಯ ಶೆಟ್ಟಿ (62) ಮೃತಪಟ್ಟ ದುರ್ದೈವಿ.

ಶ್ರೀನಿವಾಸ ಶೆಟ್ಟಿ ಅವರು ತಮ್ಮ ಮನೆಯ ಸಮೀಪದಲ್ಲಿದ್ದ ಅಡಿಕೆ ತೋಟದಲ್ಲಿ ಅಡಿಕೆ ಕೊಯ್ಯುವ ಕೆಲಸದಲ್ಲಿ ತೊಡಗಿದ್ದರು. ಮರಕ್ಕೆ ಏರಲು ಅಲ್ಯೂಮಿನಿಯಂ ಏಣಿಯನ್ನು ಬಳಸುತ್ತಿದ್ದ ವೇಳೆ, ಏಣಿಯು ಹೆದ್ದಾರಿ/ತೋಟದ ಬಳಿ ಹಾದುಹೋಗಿದ್ದ 11 ಕೆ.ವಿ. ವಿದ್ಯುತ್ ಮಾರ್ಗದ ಸಮೀಪಕ್ಕೆ ತೆರಳಿ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಾಗಿದೆ.

ಏಣಿ ತಂತಿಗೆ ತಾಗುತ್ತಿದ್ದಂತೆ ತೀವ್ರ ಸ್ವರೂಪದ ವಿದ್ಯುತ್ ಹರಿದು ಶ್ರೀನಿವಾಸ ಶೆಟ್ಟಿ ಅವರು ಕೆಳಗೆ ಬಿದ್ದು ಗಂಭೀರವಾಗಿ ಅಸ್ವಸ್ಥರಾಗಿದ್ದರು. ಘಟನೆಯನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅವರ ನೆರವಿಗೆ ಧಾವಿಸಿದರಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಈ ಘಟನೆಯಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಶೋಕ ಹಾಗೂ ಆಘಾತ ಆವರಿಸಿದೆ.

ಅಡಿಕೆ ತೋಟಗಳಲ್ಲಿ ಮರಗಳನ್ನು ಏರುವಾಗ ಹಾಗೂ ಅಲ್ಯೂಮಿನಿಯಂ ಏಣಿಗಳನ್ನು ಬಳಸುವಾಗ ವಿದ್ಯುತ್ ಮಾರ್ಗಗಳ ಬಗ್ಗೆ ಕೃಷಿಕರು ಹೆಚ್ಚಿನ ಜಾಗ್ರತೆ ಹಾಗೂ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ದುರಂತಕ್ಕೆ ಸಂಬಂಧಿಸಿದಂತೆ ಮೃತರ ಪುತ್ರ ಪ್ರಶಾಂತ ಶ್ರೀನಿವಾಸ ಶೆಟ್ಟಿ (38) ನೀಡಿದ ದೂರಿನ ಆಧಾರದ ಮೇಲೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖಾ ಕ್ರಮ ಕೈಗೊಂಡಿದ್ದಾರೆ.

About The Author

error: Content is protected !!