

ಹೊನ್ನಾವರ: ತಾಲೂಕಿನ ಕೊಂಕಣಿ ಸಂಘಟನೆಯಾದ ‘ಕೊಂಕಣಿ ಕಲಾ ಕುಟಮ್’ (ರಿ) ವತಿಯಿಂದ ನಗರದ ಸೋಷಿಯಲ್ ಕ್ಲಬ್ ಸಭಾಭವನದಲ್ಲಿ 34ನೇ ರಾಷ್ಟ್ರೀಯ ಕೊಂಕಣಿ ಮಾನ್ಯತಾ ದಿನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಸುಪ್ರೀತ್ ಸೌಹಾರ್ದ ಸಹಕಾರಿಯ ಸಲಹೆಗಾರ ಸಂತ್ಯಾಗ್ ಹೊರ್ಟಾ ಅವರು ಉದ್ಘಾಟಿಸಿ, ಕೊಂಕಣಿ ಭಾಷಿಕರಿಗೆ ಮಾನ್ಯತಾ ದಿನದ ಶುಭಾಶಯಗಳನ್ನು ಕೋರಿದರು.



ರೋಟರಿ ಕ್ಲಬ್ ಅಧ್ಯಕ್ಷ ಹೆನ್ರಿ ಲೀಮಾಗೆ ಸನ್ಮಾನ:
ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಹೆನ್ರಿ ಲೀಮಾ ಅವರನ್ನು ಸಂಘಟನೆಯ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, “ಸಂವಿಧಾನದ 8ನೇ ಪರಿಚ್ಛೇದದಲ್ಲಿ ಕೊಂಕಣಿ ಭಾಷೆಗೆ ರಾಷ್ಟ್ರೀಯ ಮಾನ್ಯತೆ ದೊರೆತಿರುವುದು ನಮ್ಮೆಲ್ಲಾ ಕೊಂಕಣಿ ಭಾಷಿಕರ ಸೌಭಾಗ್ಯ ಹಾಗೂ ಹೆಮ್ಮೆಯ ವಿಷಯ,” ಎಂದು ಸಂತಸ ವ್ಯಕ್ತಪಡಿಸಿದರು.

ಭಾಷೆ-ಸಂಸ್ಕೃತಿ ಉಳಿವಿಗೆ ಕರೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಅಧ್ಯಕ್ಷ ಸ್ಟೀಫನ್ ರೋಡ್ರಿಗೀಸ್ ಮಾತನಾಡಿ, “ನಮ್ಮ ಮಾತೃಭಾಷೆಯಾದ ಕೊಂಕಣಿ ಹಾಗೂ ನಮ್ಮ ವಿಶಿಷ್ಟ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಯಶಸ್ವಿಯಾಗಿ ಹಸ್ತಾಂತರಿಸುವ ಕಾಯಕದಲ್ಲಿ ಪ್ರತಿಯೊಬ್ಬ ಕೊಂಕಣಿ ಭಾಷಿಕನೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು,” ಎಂದು ಕರೆ ನೀಡಿದರು.


ಸಭೆಯ ನಂತರ ಕಲಾವಿದ ಸಾಮ್ಸನ್ ಲೋಪೀಸ್ ಅವರ ನೇತೃತ್ವದ ಸಿಂಫೋನಿ ತಂಡ, ಬ್ಲೂಮ್ ಮೆಲೋಡಿ, ಪ್ರಭಾತನಗರದ ಇನ್ಫಾಂಟ್ ಜೀಸಸ್ ಚರ್ಚ್ ಕಲಾವಿದರು ಹಾಗೂ ಸಂಘದ ಸದಸ್ಯರಿಂದ ವಿವಿಧ ರೀತಿಯ ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.
ಕಾರ್ಯಕ್ರಮದ ಆರಂಭದಲ್ಲಿ ಸಂಘದ ಸದಸ್ಯ ಅಫೀಫನ್ ಫರ್ನಾಂಡಿಸ್ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಜೇಕಬ್ ಫರ್ನಾಂಡಿಸ್ ಸ್ವಾಗತಿಸಿದರೆ, ಕಾರ್ಯಕ್ರಮದ ಸಂಚಾಲಕಿ ಸ್ಟೆಲಾ ಡಿ. ಲೀಮಾ ಧನ್ಯವಾದ ಸಮರ್ಪಿಸಿದರು.
About The Author




More Stories
ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಪ್ರಥಮ, ರಾಜ್ಯ ಮಟ್ಟಕ್ಕೆ ಆಯ್ಕೆ!
ಡಿ. ದೇವರಾಜ ಅರಸು 111ನೇ ಜನ್ಮದಿನಾಚರಣೆ: ಸಾಧಕರ ಸ್ವಗೃಹದಲ್ಲೇ ಸನ್ಮಾನಿಸಿ ಗೌರವಿಸಿದ ಅರಸು ವಿಚಾರ ವೇದಿಕೆ.
ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ: ಹೊನ್ನಾವರದಲ್ಲಿ ಮಾಜಿ ಸಿಎಂ ಜನ್ಮದಿನಾಚರಣೆ.