

ಗೋಕರ್ಣ: “ಔಷಧಿಯ ಅಂಗಡಿಯಲ್ಲಿ ಎಲ್ಲಾ ಔಷಧಗಳನ್ನೂ ಎಲ್ಲರಿಗೂ ಕೊಡುವುದಿಲ್ಲ. ಕೆಲವು ಔಷಧಗಳನ್ನು ವೈದ್ಯರ ಚೀಟಿಯಿದ್ದವರಿಗಷ್ಟೇ ನೀಡಲಾಗುತ್ತದೆ ಹಾಗೂ ಕೆಲವು ಔಷಧಗಳನ್ನು ಮಕ್ಕಳಿಗೆ ನೀಡಬಾರದು ಎಂಬ ನಿಯಮವಿರುತ್ತದೆ. ಅದೇ ರೀತಿ ಎಲ್ಲಾ ಯೋಗ-ಪ್ರಾಣಾಯಾಮಗಳನ್ನು ಎಲ್ಲರೂ ಮಾಡಬಾರದು. ಪ್ರತಿಯೊಂದಕ್ಕೂ ಅದರದ್ದೇ ಆದ ನಿಯಮಗಳಿವೆ,” ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ನುಡಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅಮೃತಾಹಾರವೆಂಬ ಯೋಗ ಸೂಕ್ಷ್ಮದ ಕುರಿತು ಅವರು ಪ್ರವಚನ ನೀಡಿದರು.

ಯೋಗ ಸೂಕ್ಷ್ಮ ಸಿದ್ಧಿಸಿಕೊಂಡವನಿಗೆ ಸರ್ಪದ ವಿಷವೂ ಏನೂ ಮಾಡದು:
ಪ್ರವಚನ ನೀಡಿದ ಶ್ರೀಗಳು, ಯೋಗ ಸೂಕ್ಷ್ಮವಾದ ಅಮೃತಪಾನವನ್ನು ಸಿದ್ಧಿಸಿಕೊಂಡವನಿಗೆ ತಕ್ಷಕ ಸರ್ಪದ ಮಹಾವಿಷದಿಂದಲೂ ಏನೂ ಆಗದು. ಒಮ್ಮೆ ಈ ಅಮೃತವನ್ನು ಆಸ್ವಾದಿಸಲು ಕಲಿತ ಯೋಗಿಯು ಮತ್ತೆ ಮತ್ತೆ ಅದನ್ನೇ ಬಯಸುತ್ತಾನೆ. ಈ ಅಮೃತದ ಆಸ್ವಾದನೆಗೆ ಸಮಾನವಾದದ್ದು ಬೇರೊಂದಿಲ್ಲ ಎಂದು ತಿಳಿಸುತ್ತಾ ಜಾಲಂಧರ ಬಂಧ, ಮೂಲಬಂಧ, ಖೇಚರಿ ಹಾಗೂ ವಿಪರೀತ ಕರಣಿಗಳ ಕುರಿತು ವಿವರಿಸಿದರು.

ಮೂಲಬಂಧದ ಮೂಲಕ ಕುಂಡಲಿನೀ ಶಕ್ತಿಯ ಜಾಗೃತಿ ಪ್ರಕ್ರಿಯೆಯ ಯೋಗ ಸೂಕ್ಷ್ಮಗಳು, ಜಾಗೃತಗೊಂಡಾಗ ಉಂಟಾಗುವ ಪ್ರಯೋಜನಗಳು ನಮ್ಮನ್ನು ಮೋಕ್ಷದೆಡೆಗೆ ಕರೆದೊಯ್ಯುತ್ತವೆ ಮತ್ತು ಮೋಕ್ಷವೇ ಜೀವಿಯ ಪರಮ ಗುರಿ ಎಂದು ಪ್ರತಿಪಾದಿಸಿದರು.


ಮಹಿಳೆಯರು ಎಲ್ಲಾ ಯೋಗ ಪ್ರಕ್ರಿಯೆಗಳನ್ನು ಮಾಡಬಾರದು ಏಕೆ?
“ಮಹಿಳೆಯರು ಉಸಿರಾಟದ ವ್ಯಾಯಾಮಗಳನ್ನು ಮಾಡಬಹುದು. ಆದರೆ ಮೂಲಬಂಧ ಸಹಿತವಾದ ಪ್ರಾಣಾಯಾಮಗಳನ್ನು ಹಾಗೂ ಕೆಲವು ಯೋಗ ಪ್ರಕ್ರಿಯೆಗಳನ್ನು ಮಾಡಬಾರದು. ಯೋಗಶಾಸ್ತ್ರವು ಮಹಿಳೆಯರ ಕುರಿತಾಗಿ ಪಕ್ಷಪಾತವನ್ನು ಹೊಂದಿಲ್ಲ, ಬದಲಾಗಿ ಕಾಳಜಿಯನ್ನು ಹೊಂದಿದೆ. ಕೆಲವು ಯೋಗ ಪ್ರಕ್ರಿಯೆಗಳಿಂದ ಮಹಿಳೆಯರ ದೇಹದ ಮೇಲೆ ವಿಪರೀತ ಪರಿಣಾಮಗಳು ಉಂಟಾಗಿ, ಅವರ ಹೆಣ್ಣುತನಕ್ಕೆ ಸಂಚಕಾರ ತರಬಹುದು. ಹಾಗಾಗಿ ಮಹಿಳೆಯರು ಈ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು.” — ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು
UK ವಲಯದಿಂದ ಭಿಕ್ಷಾಸೇವೆ & ಖಾರ್ವಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ:
ಗುರುಭಿಕ್ಷಾ ಸೇವೆ: ಯುನೈಟೆಡ್ ಕಿಂಗ್ಡಮ್ (UK) ಹವ್ಯಕ ವಲಯದ ಪರವಾಗಿ ವಿವೇಕ ಭಟ್ ಮತ್ತು ಕುಟುಂಬದವರು ಗುರುಭಿಕ್ಷಾ ಸೇವೆಯನ್ನು ಸಮರ್ಪಿಸಿದರು. ಭಾರತೀಯ ಗ್ರಾನೈಟ್ ಮತ್ತು ಕಲ್ಲು ಕೈಗಾರಿಕೆಗಳ ಒಕ್ಕೂಟದ ಉಪಾಧ್ಯಕ್ಷ ಜಿ.ಎಂ. ಹೆಗಡೆ, ನಿವೃತ್ತ ಪೊಲೀಸ್ ಆಯುಕ್ತ ಟಿ.ಜಿ. ಕೃಷ್ಣ ಭಟ್ IPS ಉಪಸ್ಥಿತರಿದ್ದು ಶ್ರೀಗಳ ಆಶೀರ್ವಾದ ಪಡೆದರು.
ಸ್ವರ್ಣಪಾದುಕಾ ಪೂಜೆ: ಪಾರಂಪರಿಕವಾಗಿ ಶ್ರೀಮಠಕ್ಕೆ ನಡೆದುಕೊಳ್ಳುತ್ತಿರುವ ಖಾರ್ವಿ ಸಮಾಜ ಹಾಗೂ ಕೊಂಕಣ ಖಾರ್ವಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನೆರವೇರಿತು. ಶ್ರೀಮಠಕ್ಕೆ ಖಾರ್ವಿ ಸಮಾಜದ ಕುರಿತಾಗಿ ಸದಾ ಕಳಕಳಿಯಿದ್ದು, ಸಮಾಜದ ಸುಖದುಃಖಗಳಲ್ಲಿ ಶ್ರೀಮಠ ಸದಾ ಜೊತೆಗಿರಲಿದೆ ಎಂದು ಶ್ರೀಗಳು ಹಾರೈಸಿದರು.
ಕಾರ್ಯಕ್ರಮದಲ್ಲಿ ದಿನಪ್ರಧಾನರಾದ ರಮಾನಂದ ಹೊಸ್ಮನೆ ದಂಪತಿಗಳು, ಸುರೇಶ್ ಭಟ್ ಆಡುಗೋಡಿ, ದಿನೇಶ್ ಹೆಗಡೆ, ನರಸಿಂಹ ಭಟ್ಟ ಬಡಗು, ಡಾ. ರವಿ ಪಾಂಡವಪುರ, ಸುಧನ್ವ ಶಾಸ್ತ್ರಿ ಹಾಗೂ ಖಾರ್ವಿ ಸಮಾಜದ ಮುಖಂಡರಾದ ಚಂದ್ರು ಖಾರ್ವಿ ಮರವಂತೆ, ವಾಸು ಖಾರ್ವಿ, ಸುರೇಶ್ ಖಾರ್ವಿ, ಚರಣ ಖಾರ್ವಿ, ಉಮಾಕಾಂತ ಖಾರ್ವಿ, ಗೋಪಾಲ ಖಾರ್ವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author




More Stories
ಆಹಾರದ ರಸಗಳಿಗೂ ಭಾವಕ್ಕೂ ನಿಕಟ ಸಂಬಂಧ: ರಾಘವೇಶ್ವರ ಶ್ರೀ ಪ್ರತಿಪಾದನೆ
ಮಹಾಪ್ರಾಣದ ಉಚ್ಚಾರಣೆಯಿಂದ ದೇಹದಲ್ಲಿ ಅಗ್ನಿ ಜಾಗೃತಿ: ರಾಘವೇಶ್ವರ ಶ್ರೀ
ಹಸಿವು ಮತ್ತು ಆಹಾರವೇ ಜೀವಿಯ ಸರ್ವಸ್ವ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ