August 25, 2026

ಗ್ರಾಮ ಸಹಾಯಕರ ಬೇಡಿಕೆ ಈಡೇರಿಕೆಗೆ ಆಗ್ರಹ: ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ; 4-5 ದಿನಗಳಲ್ಲಿ ಸಿಎಂ ಜತೆ ಸಭೆ ಭರವಸೆ!

ಬೆಂಗಳೂರು: ಕಂದಾಯ ಇಲಾಖೆಯಲ್ಲಿ ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ‘ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘ’ದ ನೇತೃತ್ವದಲ್ಲಿ ಸೋಮವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಸಂಘದ ರಾಜ್ಯಾಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ಪ್ರತಾಪ್ ಮದಕರಿ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಗ್ರಾಮ ಸಹಾಯಕರು ಭಾಗವಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರಮುಖ ಬೇಡಿಕೆಗಳು:

ಸೇವಾ ಭದ್ರತೆ ಹಾಗೂ ಕನಿಷ್ಠ ವೇತನ: ಪ್ರಸ್ತುತ ನೀಡುತ್ತಿರುವ ಗೌರವಧನವನ್ನು ಪರಿಷ್ಕರಿಸಿ, ಜೀವನಾಧಾರಿತ ಕನಿಷ್ಠ ಮಾಸಿಕ ವೇತನ ಹಾಗೂ ಡಿ ಗ್ರೂಪ್‌ ದರ್ಜೆಯ ಗೌರವ ನೀಡಬೇಕು.

ಇಡಿಗಂಟು ಹಾಗೂ ಮೀಸಲಾತಿ: ಮಂಜೂರಾಗಿರುವ ₹5 ಲಕ್ಷ ಇಡಿಗಂಟನ್ನು ತಕ್ಷಣ ವಿತರಿಸಬೇಕು ಹಾಗೂ ಅದನ್ನು ₹10 ಲಕ್ಷಕ್ಕೆ ಹೆಚ್ಚಿಸಬೇಕು. ಜೊತೆಗೆ ಶೇ 30 ಮೀಸಲಾತಿ, ನಿವೃತ್ತಿ ಸೌಲಭ್ಯ ಹಾಗೂ ನಿವೇಶನ ಕಲ್ಪಿಸಬೇಕು.

ಅನುಕಂಪ ಆಧಾರಿತ ನೇಮಕಾತಿ: ಸೇವೆಯಲ್ಲಿರುವಾಗ ಗ್ರಾಮ ಸಹಾಯಕರು ಮೃತಪಟ್ಟರೆ ಅವರ ಅರ್ಹ ವಾರಸುದಾರರಿಗೆ ಅನುಕಂಪ ಆಧಾರಿತ ಉದ್ಯೋಗ ಮತ್ತು ಆರ್ಥಿಕ ಭದ್ರತೆ ನೀಡಬೇಕು.

    ಮಳೆಯಲ್ಲೇ ಆಗಮಿಸಿ ಸಚಿವರ ಭರವಸೆ:

    ಪ್ರತಿಭಟನಾ ಸ್ಥಳದಲ್ಲಿ ಭಾರಿ ಮಳೆ ಸುರಿಯುತ್ತಿದ್ದರೂ ಛತ್ರಿ ಹಿಡಿದು ಮಳೆಯಲ್ಲೇ ಪ್ರತಿಭಟನಾ ನಿರತರ ಬಳಿಗೆ ಆಗಮಿಸಿದ ಕಂದಾಯ ಸಚಿವ ಜಿ. ಪರಮೇಶ್ವರ ಅವರು ಸಂಘದ ಮುಖಂಡರಿಂದ ಮನವಿ ಸ್ವೀಕರಿಸಿದರು.

    “ಇನ್ನೂ 4-5 ದಿನಗಳಲ್ಲಿ ಗ್ರಾಮ ಸಹಾಯಕರ ಸಂಘದ ಪ್ರತಿನಿಧಿಗಳಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಲು ಅವಕಾಶ ಕಲ್ಪಿಸುತ್ತೇನೆ. ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದು, ಬಗೆಹರಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ,”ಜಿ. ಪರಮೇಶ್ವರ, ಕಂದಾಯ ಸಚಿವರು

    ಇದೇ ವೇಳೆ ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಹಾಗೂ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಸಹ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಗ್ರಾಮ ಸಹಾಯಕರ ಜವಾಬ್ದಾರಿಯನ್ನು ಶ್ಲಾಘಿಸಿ, ಸಂಪುಟ ಹಾಗೂ ಸಿಎಂ ಮಟ್ಟದಲ್ಲಿ ಚರ್ಚಿಸಿ ಬೇಡಿಕೆ ಈಡೇರಿಸುವ ಪ್ರಾಮಾಣಿಕ ಅಭಯ ನೀಡಿದರು.

    ಕಾರ್ಯಕ್ರಮ ಹಾಗೂ ಮನವಿ ಸಲ್ಲಿಕೆ ವೇಳೆ ಕಂದಾಯ ಇಲಾಖೆ ಉಪ ಕಾರ್ಯದರ್ಶಿ ಕಲಾವತಿ ಎಸ್.ಎನ್., ಶಿಗ್ಗಾಂವಿ ಶಾಸಕ ಪಠಾಣ್ ಯಾಸೀರ್ ಅಹ್ಮದ್ ಖಾನ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

    About The Author

    error: Content is protected !!