ಅಥಣಿ: ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಕಳೆದ 9 ವರ್ಷಗಳಿಂದ ವಾಸಿಸುತ್ತಿರುವ ಮಂಗಳಮುಖಿ (ತೃತೀಯ ಲಿಂಗಿ) ರಮಜಾನ್ ದಾದು ಮುಲ್ಲಾ ಅವರು, ತಮಗೆ ನಿವೇಶನ ಹಾಗೂ ವಸತಿ ಮಂಜೂರು ಮಾಡುವಂತೆ ಕೋರಿ ಆಡಳಿತ ಯಂತ್ರದ ಬಾಗಿಲು ತಟ್ಟುತ್ತಿದ್ದರೂ ಸೂಕ್ತ ನ್ಯಾಯ ಸಿಗದೆ ತೀವ್ರ ಸಂಕಷ್ಟದಲ್ಲಿದ್ದಾರೆ.
ಗ್ರಾಮ ಪಂಚಾಯಿತಿ ಠರಾವಿದ್ದರೂ ಸಿಗದ ಆದೇಶ: ಮದಭಾವಿ ಗ್ರಾಮ ಪಂಚಾಯಿತಿ ಸಭೆಯಲ್ಲಿ ರಮಜಾನ್ ಅವರಿಗೆ ಜಾಗ ಮಂಜೂರು ಮಾಡುವ ಕುರಿತು ಈ ಹಿಂದೆ ಸರ್ವಾನುಮತದ ಠರಾವು ಪಾಸ್ ಮಾಡಲಾಗಿದೆ. ಆದರೆ ಠರಾವು ಆಗಿ ವರ್ಷಗಳೇ ಕಳೆದರೂ ಅಧಿಕಾರಿಗಳು ಅಧಿಕೃತ ಆದೇಶ ಪತ್ರ ಅಥವಾ ಹಕ್ಕುಪತ್ರ ನೀಡದೆ ಕೇವಲ ಆಶ್ವಾಸನೆ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಕಚೇರಿಗಳಿಗೆ ಅಲೆದಾಟ: ನಿವೇಶನ ಹಾಗೂ ಮನೆಗಾಗಿ ಗ್ರಾಮ ಪಂಚಾಯಿತಿಯಿಂದ ಹಿಡಿದು ತಾಲೂಕು ಪಂಚಾಯಿತಿ, ತಹಶೀಲ್ದಾರ್ ಕಚೇರಿ, ಚಿಕ್ಕೋಡಿ ಎಸಿ ಕಚೇರಿ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾಧಿಕಾರಿ ಕಚೇರಿಯವರೆಗೆ ಸಾಲು ಸಾಲು ಮನವಿ ಸಲ್ಲಿಸಿದರೂ ಅಧಿಕಾರಿಗಳ ಉದಾಸೀನತೆಯಿಂದಾಗಿ ತಮ್ಮ ಬದುಕು ಶೋಚನೀಯವಾಗಿದೆ ಎಂದು ಅವರು ಕಣ್ಣೀರಿಟ್ಟಿದ್ದಾರೆ.
ಸರ್ಕಾರಕ್ಕೆ ನೇರ ಮನವಿ ಹಾಗೂ ಎಚ್ಚರಿಕೆ: ತೃತೀಯ ಲಿಂಗಿಗಳಿಗೆ ಸರ್ಕಾರ ನಾನಾ ಯೋಜನೆ ಘೋಷಿಸುತ್ತಿದ್ದರೂ ತಳಮಟ್ಟದಲ್ಲಿ ಸೌಲಭ್ಯ ಸಿಗುತ್ತಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಬೆಳಗಾವಿ ಜಿಲ್ಲಾಧಿಕಾರಿಗಳು, ತಾಲೂಕಾಡಳಿತ, ಸಚಿವರು ಹಾಗೂ ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ತಮಗೆ ವಾಸಿಸಲು ಖುಲ್ಲಾ ಜಾಗ ಗುರುತಿಸಿ, ವಸತಿ ಯೋಜನೆಯಡಿ ಮನೆ ಮಂಜೂರು ಮಾಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ರಮಜಾನ್ ದಾದು ಮುಲ್ಲಾ ಎಚ್ಚರಿಸಿದ್ದಾರೆ.

About The Author


More Stories
ಕಾಗವಾಡದಲ್ಲಿ ವಸತಿಗೆ ಅಲೆಯುತ್ತಿರುವ ಮಂಗಳಮುಖಿ: ತಕ್ಷಣದ ಪರಿಹಾರಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಸೂಚನೆ
ವಿದ್ಯಾರ್ಥಿ ಗೌತಮ್ ಅನುಮಾನಾಸ್ಪದ ಸಾವು: ಆರೋಪಿಗಳ ಬಂಧನಕ್ಕೆ ಹಾಗೂ ನಿಷ್ಪಕ್ಷಪಾತ ತನಿಖೆಗೆ ಆಗ್ರಹ
ಚಿಕ್ಕಬಳ್ಳಾಪುರ ಅಗ್ನಿಶಾಮಕ ಇಲಾಖೆಯ ಸಮಯಪ್ರಜ್ಞೆ: ಆಳವಾದ ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಸಿಬ್ಬಂದಿ