ಕಾರವಾರ: ಪಶ್ಚಿಮಘಟ್ಟದಲ್ಲಿ ಪರಿಸರ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಾರದರ್ಶಕ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟ ಸಂಘಟನೆಗಳ ರಾಜ್ಯ ಸಮಿತಿ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಒತ್ತಾಯಿಸಿದ್ದಾರೆ. ಜುಲೈ 27ರಂದು ಕೇಂದ್ರ ಸರ್ಕಾರ ಹೊರಡಿಸಿದ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಿ, ಅವರು ಈ ಕುರಿತು ಅರಣ್ಯ ಹಾಗೂ ಪರಿಸರ ಸಚಿವರಿಗೆ ಪತ್ರ ಬರೆದಿದ್ದಾರೆ.
ಜನವಸತಿ ಹಾಗೂ ಕೃಷಿ ಭೂಮಿಗೆ ವಿನಾಯಿತಿ ನೀಡಲಿ: ಜನವಸತಿ ಪ್ರದೇಶಗಳು, ಕಂದಾಯ, ಅರಣ್ಯ ಭೂಮಿ ಹಾಗೂ ಪಟ್ಟಾ ಭೂಮಿಯಲ್ಲಿನ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಗಳನ್ನು ಪರಿಸರ ಸೂಕ್ಷ್ಮ ವಲಯದ (ESA) ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರತುಪಡಿಸಬೇಕು.
ಬೃಹತ್ ಯೋಜನೆಗಳಿಗೆ ಕಡಿವಾಣ: ಅತೀ ಸೂಕ್ಷ್ಮ ಪರಿಸರ ವಲಯಗಳಲ್ಲಿ ದೇಶದ ರಕ್ಷಣೆಯ ಹೊರತಾಗಿ ಯಾವುದೇ ಬೃಹತ್ ಯೋಜನೆಗಳಿಗೆ ಅನುಮತಿ ನೀಡುವ ವಿವೇಚನಾಧಿಕಾರ ಸರ್ಕಾರಗಳಿಗೆ ಇರಬಾರದು.
ಕೇರಳ ಮಾದರಿಯ ವಿನಾಯಿತಿ ಅಗತ್ಯ: ಕೇರಳಕ್ಕೆ ನೀಡಿದಂತೆ ಕರ್ನಾಟಕಕ್ಕೂ ವಿನಾಯಿತಿ ನೀಡಬೇಕು. ಉತ್ತರ ಕನ್ನಡ ಜಿಲ್ಲೆಯ 350ಕ್ಕೂ ಹೆಚ್ಚು ಜನವಸತಿ ಪ್ರದೇಶಗಳು ಸೇರಿದಂತೆ 567 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಿರುವುದು ಜನರ ಬದುಕಿಗೆ ಮಾರಕವಾಗಲಿದೆ.

ವಿಜ್ಞಾನಾಧಾರಿತ ಸಮೀಕ್ಷೆಗೆ ಮನವಿ: ಶೇ. 80ರಷ್ಟು ಅರಣ್ಯ ಭೂಮಿ ಹೊಂದಿರುವ ಉತ್ತರ ಕನ್ನಡದಲ್ಲಿ ಶೇ. 30ರಷ್ಟು ಜನರು ತಲೆತಲಾಂತರದಿಂದ ಅರಣ್ಯ ಭೂಮಿಯನ್ನೇ ನಂಬಿ ಬದುಕುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಕಸ್ತೂರಿ ರಂಗನ್ ವರದಿಯ ಯಥಾವತ್ ಅನುಷ್ಠಾನದ ಬದಲಿಗೆ ಪಾರದರ್ಶಕ ಹಾಗೂ ವೈಜ್ಞಾನಿಕ ಸಮೀಕ್ಷೆ ನಡೆಸಲು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು.
ಜಿಲ್ಲೆಯ ಹಲವು ಗ್ರಾಮ ಪಂಚಾಯತಿ ಹಾಗೂ ಗ್ರಾಮಸಭೆಗಳು ಕಸ್ತೂರಿ ರಂಗನ್ ವರದಿ ಮತ್ತು ಕೇಂದ್ರದ 6ನೇ ಕರಡು ಅಧಿಸೂಚನೆಗೆ ಈಗಾಗಲೇ ತೀವ್ರ ವಿರೋಧ ವ್ಯಕ್ತಪಡಿಸಿ ಆಕ್ಷೇಪಣೆ ಸಲ್ಲಿಸಿವೆ ಎಂದು ಅವರು ತಿಳಿಸಿದ್ದಾರೆ.
About The Author


More Stories
“ನೇತ್ರದಾನ ಶ್ರೇಷ್ಠ ದಾನ” – ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ
ಪರಿಸರ ಸೂಕ್ಷ್ಮ ವಲಯ (ESZ) ಅಧಿಸೂಚನೆ ವಿರೋಧಿಸಿ ಕೇಂದ್ರಕ್ಕೆ ಆಕ್ಷೇಪಣಾ ಪತ್ರ ಸಲ್ಲಿಸಲು ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿ ಕರೆ
ಸರ್ವೇ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ರಾಮಚಂದ್ರ ಎನ್. ಶೆಟ್ಟಿ ನಿಧನ