September 20, 2026

ಬಿಗಿ ಪೊಲೀಸ್ ಭದ್ರತೆಯಲ್ಲಿ ಭಟ್ಕಳದಲ್ಲಿ ಅದ್ಧೂರಿ ಗಣೇಶ ವಿಸರ್ಜನೆ: ಚೌಥನಿ ಹೊಳೆಯಲ್ಲಿ ಜಲಸ್ತಂಭನ

ಭಟ್ಕಳ: ಮೂರು ದಿನಗಳ ಹಿಂದೆ ನಡೆದಿದ್ದ ಕಲ್ಲು ತೂರಾಟದ ಘಟನೆಯ ಹಿನ್ನೆಲೆಯಲ್ಲಿ, ಭಟ್ಕಳ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ತೀವ್ರ ಪೊಲೀಸ್ ಭದ್ರತೆ ಹಾಗೂ ಸೂಕ್ಷ್ಮ ಕಣ್ಣಾವಲಿನ ನಡುವೆ ಸಾರ್ವಜನಿಕ ಗಣೇಶ ಮೂರ್ತಿಗಳ ಅದ್ಧೂರಿ ವಿಸರ್ಜನಾ ಮೆರವಣಿಗೆ ಶಾಂತಿಯುತವಾಗಿ ನೆರವೇರಿತು.

ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ: ಯಾವುದೇ ಅಹಿತಕರ ಘಟನೆ ಮರುಕಳಿಸದಂತೆ ಆರ್‌ಎಎಫ್‌ನ ಒಂದು ಕಂಪನಿ, ಕೆಎಸ್‌ಆರ್‌ಪಿಯ ಮೂರು ತುಕಡಿಗಳು ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಬಂದ ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಮೆರವಣಿಗೆ ಮಾರ್ಗದುದ್ದಕ್ಕೂ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿರಂತರ ನಿಗಾ ವಹಿಸಲಾಗಿತ್ತು.

ಸಾವಿರಾರು ಭಕ್ತರ ಜಯಘೋಷ: ತಾಲೂಕು ರಿಕ್ಷಾ ಚಾಲಕ ಹಾಗೂ ಮಾಲಕರ ಸಂಘ, ವಿಎಚ್‌ಪಿ, ಕೆಎಸ್‌ಆರ್‌ಟಿಸಿ ಹಾಗೂ ಮಲ್ಕುಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮೂರ್ತಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಭಕ್ತರ ಜಯಕಾರ, ಡೊಳ್ಳು-ವಾದ್ಯ ಹಾಗೂ ಡಿಜೆ ಸಂಗೀತದ ನಡುವೆ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು.

ಕ್ರೇನ್ ಮೂಲಕ ಮೂರ್ತಿ ವಿಸರ್ಜನೆ: ತಾಲೂಕು ರಿಕ್ಷಾ ಚಾಲಕರ ಸಂಘದ ಗಣೇಶ ಮೂರ್ತಿ ಸೇರಿದಂತೆ ವಿವಿಧ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವಿಶೇಷ ವ್ಯವಸ್ಥೆಯೊಂದಿಗೆ ಕ್ರೇನ್ ಸಹಾಯದಿಂದ ಚೌಥನಿ ಹೊಳೆಯಲ್ಲಿ ಜಲಸ್ತಂಭನಗೊಳಿಸಲಾಯಿತು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಹಾಗೂ ಎಎಸ್‌ಪಿ ರಾನು ಗುಪ್ತ ಅವರ ಮಾರ್ಗದರ್ಶನದಲ್ಲಿ, ಸಿಪಿಐ ದಿವಾಕರ ಪಿ.ಎಂ. ಮತ್ತು ಪಿಎಸ್ಐ ನವೀನ ನಾಯ್ಕ ನೇತೃತ್ವದಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಗಣೇಶ ವಿಸರ್ಜನಾ ಕಾರ್ಯಕ್ರಮವು ಅತ್ಯಂತ ಶಾಂತಿಯುತವಾಗಿ ಮುಕ್ತಾಯಗೊಂಡಿತು.

    About The Author

    error: Content is protected !!