ಸಿರಸಿ: ಸೆಪ್ಟೆಂಬರ್ 21, 22 ಮತ್ತು 23 ರಂದು ಬೆಂಗಳೂರಿನಲ್ಲಿ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಉತ್ತರ ಕನ್ನಡ ಜಿಲ್ಲೆಯ ರೈತರ ಪರ 5 ಪ್ರಮುಖ ಅಂಶಗಳ ಮಾರ್ಗಸೂಚಿಗೆ ಧ್ವನಿಯಾಗುವಂತೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಜಿಲ್ಲೆಯ ಶಾಸಕರಲ್ಲಿ ಕೋರಿದ್ದಾರೆ. ಅವರು ಸೆಪ್ಟೆಂಬರ್ 19 ರಂದು ನಡೆದ ವೇದಿಕೆಯ ಕಾರ್ಯಾಕಾರಿ ಸಮಿತಿ ಸಭೆಯಲ್ಲಿ ಈ ಮಾರ್ಗಸೂಚಿ ಪಟ್ಟಿಯನ್ನು ಬಿಡುಗಡೆಗೊಳಿಸಿದರು.
ಹೋರಾಟಗಾರರ ವೇದಿಕೆಯ 5 ಪ್ರಮುಖ ಮಾರ್ಗಸೂಚಿಗಳು:
ಅರಣ್ಯ ಭೂಮಿ ಮಂಜೂರಾತಿ: ಜಿಲ್ಲೆಯ 80 ಸಾವಿರ ಕುಟುಂಬಗಳು ವಾಸ್ತವ್ಯ ಹಾಗೂ ಜೀವನೋಪಾಯಕ್ಕಾಗಿ ಅತಿಕ್ರಮಿಸಿರುವ ಸುಮಾರು 18 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ಸಾಗುವಳಿ ಭೂಮಿಯನ್ನಾಗಿ ನೀಡಬೇಕು.
1978ರ ಪೂರ್ವದ ಸಾಗುವಳಿದಾರರ ಹಕ್ಕು: 1978ರ ಪೂರ್ವದ ಅರಣ್ಯ ಭೂಮಿ ಸಾಗುವಳಿದಾರರಿಗೆ 1976 ರಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದರೂ, ಕಂದಾಯ ಭೂಮಿಯನ್ನು ಅರಣ್ಯಕ್ಕೆ ವರ್ಗಾಯಿಸದೇ ಇರುವ ಸಮಸ್ಯೆ ಬಗೆಹರಿಸುವುದು.

ಹಂಗಾಮಿ ಭೂಮಿ ಖಾಯಂ ಹಾಗೂ ತೆರಿಗೆ ರದ್ದು: ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಅರಣ್ಯ ಭೂಮಿ ಹಂಗಾಮಿ ಜಮೀನುಗಳನ್ನು ಖಾಯಂ ಲಾವಣಿ ಮಾಡದೇ ಇರುವುದು ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ಅನಧಿಕೃತ ಕಟ್ಟಡಗಳಿಗೆ ವಿಧಿಸುವ ತೆರಿಗೆಯನ್ನು ರದ್ದುಪಡಿಸುವ ಕುರಿತು ತೀರ್ಮಾನಿಸುವುದು.
ಅರ್ಜಿಗಳ ಮರುಪರಿಶೀಲನೆ: ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನದಲ್ಲಿ ಕಾನೂನುಬಾಹಿರವಾಗಿ ತಿರಸ್ಕರಿಸಲ್ಪಟ್ಟ ಅರ್ಜಿಗಳನ್ನು ಸಾಂದರ್ಭಿಕ ದಾಖಲೆಗಳ ಆಧಾರದ ಮೇಲೆ ಮರುಪರಿಶೀಲಿಸಬೇಕು. ಪಾರ್ಲಿಮೆಂಟ್ನಲ್ಲಿ ಸಲ್ಲಿಸಿದ ವರದಿಯಂತೆ ಜಿಲ್ಲೆಯಲ್ಲಿ ತಿರಸ್ಕರಿಸಲ್ಪಟ್ಟ 74,234 ಅರ್ಜಿಗಳನ್ನು ಪುನರ್ ಪರಿಶೀಲನೆಗೆ ಒಳಪಡಿಸುವುದು.
ಕಸ್ತೂರಿ ರಂಗನ್ ವರದಿ ವಿರೋಧ: ಕೇಂದ್ರ ಸರ್ಕಾರದ 7ನೇ ಅಧಿಸೂಚನೆಯಂತೆ ಉತ್ತರ ಕನ್ನಡದ 567 ಗ್ರಾಮಗಳು (132 ಗ್ರಾಮ ಪಂಚಾಯತ್ಗಳು) ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಸೇರ್ಪಡೆಯಾಗುವುದರಿಂದ ಅರಣ್ಯವಾಸಿಗಳ ಮೇಲಾಗುವ ಪರಿಣಾಮಗಳನ್ನು ಸರ್ಕಾರದ ಗಮನಕ್ಕೆ ತರುವುದು. ಈ ಅವೈಜ್ಞಾನಿಕ ವರದಿಯನ್ನು ಭೌಗೋಳಿಕ ಸಮೀಕ್ಷೆ (ಸರ್ವೇ) ಹಾಗೂ ಗ್ರಾಮ ಸಭೆಗಳ ಮೂಲಕ ತೀರ್ಮಾನಿಸುವಂತೆ ಒತ್ತಾಯಿಸುವುದು.
ಸಭೆಯಲ್ಲಿ ಸಂಚಾಲಕ ಇಬ್ರಾಹಿಂ ಸಾಬ ಗೌಡಳ್ಳಿ, ನೆಹರು ನಾಯ್ಕ ಬಿಳೂರು, ರಫೀಕ್ ಗೌಡಳ್ಳಿ, ಕೃಷ್ಣ ಮರಾರಿ ಸವಳೆ, ಪರಮೇಶ್ವರ ದೇಶಭಂಡಾರಿ ವಾನಳ್ಳಿ, ರಾಜು ಪೂಜಾರಿ, ನಾರಾಯಣ ನಾಯ್ಕ ನೆಗ್ಗು, ಸ್ವಾತಿ ಜೈನ್, ಯಶೋದಾ ನೌಟೂರು, ಈಶ್ವರ ನಾಯ್ಕ ಬಂಕನಾಳ, ಮಂಜು ಲಕ್ಷ್ಮಿ ನಾಯ್ಕ, ನಾರಾಯಣ ಉಮ್ಮಡಿ, ಪಂಪಾವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author


More Stories
ಹೆಣ್ಣಿನ ಮಾಂಗಲ್ಯದಲ್ಲಿ ಗಂಡನ ಜೀವ ಉಳಿಸುವ ಶಕ್ತಿಯಿದೆ: ಶಿರಸಿಯಲ್ಲಿ ಅರಿಶಿಣ ಕುಂಕುಮ ಕಾರ್ಯಕ್ರಮ
ಕಸ್ತೂರಿ ರಂಗನ್ ವರದಿ: ಸೂಕ್ಷ್ಮ ಪ್ರದೇಶ ಅಧ್ಯಯನಕ್ಕೆ ಸಮಿತಿ ರಚನೆ ಹಾಗೂ ಜನವಸತಿ ಪ್ರದೇಶ ಮುಕ್ತಗೊಳಿಸಲು ರವೀಂದ್ರ ನಾಯ್ಕ ಆಗ್ರಹ
ಶಿರಸಿಯಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ರ್ಯಾಲಿ: ವರದಿ ತಿರಸ್ಕರಿಸಲು ಹಕ್ಕು ಒತ್ತಾಯ