ಹೊನ್ನಾವರ: ಪಶ್ಚಿಮಘಟ್ಟ ಪ್ರದೇಶದಲ್ಲಿ ಪರಿಸರ ಸೂಕ್ಷ್ಮ ವಲಯ (ESZ) ಘೋಷಣೆ ಮಾಡುವ ಮೊದಲು ಅಲ್ಲಿನ ರೈತರು, ಅರಣ್ಯವಾಸಿಗಳು ಹಾಗೂ ಬುಡಕಟ್ಟು ಜನರ ಹಕ್ಕುಗಳನ್ನು ಸಂರಕ್ಷಿಸುವುದು ಸರ್ಕಾರದ ಆದ್ಯತೆಯಾಗಬೇಕು. 2015ರ ಪೂರ್ವದ ಅರಣ್ಯ ಭೂಮಿ ಸಾಗುವಳಿದಾರರು ಸೇರಿದಂತೆ ಸ್ಥಳೀಯರ ಜೀವನೋಪಾಯಕ್ಕೆ ತೊಂದರೆಯಾಗದಂತೆ ಅವರ ಹಕ್ಕುಗಳನ್ನು ಕಾನೂನುಬದ್ಧವಾಗಿ ESA ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ದಾಖಲಿಸಲು ರಾಜ್ಯ ಸರ್ಕಾರವು ಕೇಂದ್ರಕ್ಕೆ ಸೂಕ್ತ ಶಿಫಾರಸು ಮಾಡಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟ ಸಂಘಟನೆಗಳ ರಾಜ್ಯ ಸಮಿತಿ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಆಗ್ರಹಿಸಿದ್ದಾರೆ.
ಈ ಕುರಿತು ಅವರು ಮುಖ್ಯಮಂತ್ರಿಗಳು, ಅರಣ್ಯ ಸಚಿವರು ಹಾಗೂ ಪಶ್ಚಿಮಘಟ್ಟ ವ್ಯಾಪ್ತಿಯ ಉಸ್ತುವಾರಿ ಸಚಿವರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ.
ಅವೈಜ್ಞಾನಿಕ ಕರಡು ಅಧಿಸೂಚನೆ: ಯಾವುದೇ ಭೌತಿಕ ಸಮೀಕ್ಷೆ ನಡೆಸದೇ ಕೇಂದ್ರ ಸರ್ಕಾರವು ಜುಲೈ 27, 2026ರಂದು ಹೊರಡಿಸಿರುವ 7ನೇ ಕರಡು ಅಧಿಸೂಚನೆಯು ಜನವಿರೋಧಿಯಾಗಿದೆ. ಉತ್ತರ ಕನ್ನಡದ 567 ಹಾಗೂ ಶಿವಮೊಗ್ಗದ 447 ಹಳ್ಳಿಗಳು ಸೇರಿದಂತೆ ರಾಜ್ಯದ 10 ಜಿಲ್ಲೆಗಳ ಒಟ್ಟು 1502 ಹಳ್ಳಿಗಳ ದಟ್ಟ ಜನವಸತಿ ಹಾಗೂ ಕೃಷಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವ್ಯಾಪ್ತಿಗೆ ಸೇರಿಸಿ ನಿರ್ಬಂಧ ವಿಧಿಸಲು ಹೊರಟಿರುವುದು ತೀರ ಅವೈಜ್ಞಾನಿಕವಾಗಿದೆ.
ಅತಂತ್ರ ಸ್ಥಿತಿಯಲ್ಲಿ ಅರಣ್ಯವಾಸಿಗಳ ಬದುಕು: 2006ರ ಅರಣ್ಯ ಹಕ್ಕು ಕಾಯ್ದೆ ಹಾಗೂ 1980ರ ಅರಣ್ಯ ಸಂರಕ್ಷಣಾ ಕಾಯ್ದೆಯ ಅನುಷ್ಠಾನದಲ್ಲಿನ ವೈಫಲ್ಯದಿಂದಾಗಿ ತಲೆತಲಾಂತರದಿಂದ ಅರಣ್ಯ ಭೂಮಿಯನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಬಡ ಕುಟುಂಬಗಳ ಬದುಕು ಅತಂತ್ರವಾಗಿದೆ. ಈಗ ಮತ್ತೆ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸುವುದರಿಂದ ಕೃಷಿ, ತೋಟಗಾರಿಕೆ ಹಾಗೂ ಸ್ಥಳೀಯ ಅಭಿವೃದ್ಧಿ ಚಟುವಟಿಕೆಗಳು ಕುಂಠಿತಗೊಳ್ಳಲಿವೆ.

ಭೌತಿಕ ಸಮೀಕ್ಷೆಗೆ ಆಗ್ರಹ: ಕರಡು ಪ್ರಸ್ತಾವನೆಯನ್ನು ತಕ್ಷಣ ಮರುಪರಿಶೀಲಿಸಬೇಕು. ಸರ್ಕಾರ ಭೌತಿಕ ಸಮೀಕ್ಷೆ (ಸರ್ವೇ) ನಡೆಸಿ, ಖಾಸಗಿ, ಕಂದಾಯ ಹಾಗೂ ಅರಣ್ಯ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿರುವ ಜನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯದಿಂದ ಸಂಪೂರ್ಣವಾಗಿ ಹೊರತುಪಡಿಸಬೇಕು.
ಶಾಲಾ-ಕಾಲೇಜು, ರಸ್ತೆ, ಆಸ್ಪತ್ರೆಗಳಂತಹ ಮೂಲಸೌಕರ್ಯಗಳ ನಿರ್ಮಾಣ ಹಾಗೂ 2015 ಡಿಸೆಂಬರ್ 31ರ ಪೂರ್ವದ ಬಗರ ಹುಕುಂ ಸಾಗುವಳಿದಾರರ ಹಕ್ಕುಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೇಂದ್ರಕ್ಕೆ ತನ್ನ ನಿಖರ ಆಕ್ಷೇಪಣೆ ಹಾಗೂ ರಚನಾತ್ಮಕ ಸಲಹೆಗಳನ್ನು ಸಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
About The Author


More Stories
ಶರಾವತಿ ಪಂಪ್ಡ್ ಸ್ಟೋರೇಜ್ ಭೂಗತ ವಿದ್ಯುತ್ ಯೋಜನೆ ಕೈಬಿಡಲು ಚಂದ್ರಕಾಂತ ಕೊಚರೇಕರ ಆಗ್ರಹ
“ನೇತ್ರದಾನ ಶ್ರೇಷ್ಠ ದಾನ” – ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ
ಪರಿಸರ ಸೂಕ್ಷ್ಮ ವಲಯ (ESZ) ಅಧಿಸೂಚನೆ ವಿರೋಧಿಸಿ ಕೇಂದ್ರಕ್ಕೆ ಆಕ್ಷೇಪಣಾ ಪತ್ರ ಸಲ್ಲಿಸಲು ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿ ಕರೆ