September 22, 2026

ಯಂತ್ರಗಳಿಂದ ತುಪ್ಪದ ಸಮಗ್ರ ಶಕ್ತಿಯನ್ನು ಅರಿಯಲು ಸಾಧ್ಯವಿಲ್ಲ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ

ಗೋಕರ್ಣ: ಯಂತ್ರಗಳಿಂದ ಪರೀಕ್ಷಿಸಿದರೆ ತುಪ್ಪದ ಸಮಗ್ರ ಶಕ್ತಿಯನ್ನು ಗ್ರಹಿಸಲು ಸಾಧ್ಯವಿಲ್ಲ. ತುಪ್ಪ ಕೇವಲ ಭೌತಿಕ ಗುಣಗಳನ್ನು ಹೊಂದಿರುವ ದ್ರವ್ಯವಲ್ಲ, ಅದರಲ್ಲಿ ಕಣ್ಣು ಮತ್ತು ಮನಸ್ಸಿಗೆ ನಿಲುಕದ ದೈವಿಕ ಶಕ್ತಿಯಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋ ಘೃತದ ಕುರಿತಾಗಿ ನಡೆಯುತ್ತಿದ್ದ ಪ್ರವಚನವನ್ನು ಆಲಿಸುತ್ತಿರುವ ಗೋವು.

ಗೋಕರ್ಣದ ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಸೆಪ್ಟೆಂಬರ್ 22, 2026 ರಂದು ನಡೆದ ‘ಅನ್ನಂ ಬ್ರಹ್ಮ’ ಸರಣಿ ಪ್ರವಚನದಲ್ಲಿ ಅವರು ತುಪ್ಪದ ದಿವ್ಯ ಗುಣಗಳನ್ನು ಹಂಚಿಕೊಂಡರು.

ಆರೋಗ್ಯಕ್ಕೆ ಅಮೃತೋಪಮ ದಿವ್ಯೌಷಧ: ದೇಶಿ ಗೋವಿನ ನೈಜ ತುಪ್ಪವು ಸ್ಮೃತಿ, ಬುದ್ಧಿ ಮತ್ತು ದೇಹದ ಓಜಸ್ಸನ್ನು ಹೆಚ್ಚಿಸುತ್ತದೆ. ದೇಹ ಶುದ್ಧೀಕರಣಕ್ಕೆ (detoxification) ತುಪ್ಪ ಅತ್ಯುತ್ತಮ ವಸ್ತುವಾಗಿದ್ದು, ವಾತ, ಪಿತ್ತ, ಉನ್ಮಾದ, ಅಪಸ್ಮಾರ ಸೇರಿದಂತೆ ನೂರಾರು ಕಾಯಿಲೆಗಳಿಗೆ ಪರಮೌಷಧವಾಗಿದೆ.

ಕಣ್ಣಿನ ಆರೋಗ್ಯಕ್ಕೆ ಶ್ರೇಷ್ಠ ಹಾಗೂ ದೇಹಕ್ಕೆ ಬಲ: ಪ್ರಪಂಚದಲ್ಲೇ ಕಣ್ಣಿನ ದೃಷ್ಟಿ ಹೆಚ್ಚಿಸಲು ಗೋವಿನ ತುಪ್ಪಕ್ಕಿಂತ ಶ್ರೇಷ್ಠವಾದದ್ದು ಯಾವುದೂ ಇಲ್ಲ ಎಂದು ಆಯುರ್ವೇದ ತಿಳಿಸುತ್ತದೆ. ಸುಶ್ರುತರು ವಿವಿಧ ಪ್ರಾಣಿಗಳ ಹಾಲಿನಿಂದ ತಯಾರಿಸಿದ ತುಪ್ಪಗಳನ್ನು ವಿಶ್ಲೇಷಿಸಿ, ಗೋವಿನ ತುಪ್ಪವೇ ಸರ್ವಶ್ರೇಷ್ಠ ಎಂದು ಸ್ಪಷ್ಟಪಡಿಸಿದ್ದಾರೆ. ಇದು ದೇಹಕ್ಕೆ ಬಲದ ಜೊತೆಗೆ ಮೃದುತ್ವವನ್ನೂ ನೀಡುತ್ತದೆ.

ಪರಾನ್ನದ ದೋಷ ನಿವಾರಕ: ಬೇರೆಯವರ ಮನೆಯಲ್ಲಿ ಊಟ ಮಾಡುವ ಪರಿಸ್ಥಿತಿ ಬಂದಾಗ, ತುಪ್ಪವನ್ನು ಅಭಿಗಾರವಾಗಿ (ಊಟಕ್ಕೆ ಮೇಲೋಗರವಾಗಿ) ಬಳಸಿದರೆ ಅನ್ನದಲ್ಲಿರಬಹುದಾದ ದೋಷ ಹಾಗೂ ಅಶುಚಿತ್ವ ನಿವಾರಣೆಯಾಗುತ್ತದೆ ಎಂದು ಶ್ರೀರಂಗ ಮಹಾಗುರುಗಳ ಮಾತನ್ನು ಶ್ರೀಗಳು ಸ್ಮರಿಸಿದರು.

ವಿಶೇಷ ಭೇಟಿ ಹಾಗೂ ಉಪಸ್ಥಿತಿ: ಕುಮಟಾದ ಮಾಜಿ ಶಾಸಕಿ ಶಾರದಾ ಶೆಟ್ಟಿ ಶ್ರೀಗಳ ದರ್ಶನ ಪಡೆದು ಆಶೀರ್ವಾದ ಪಡೆದರು. ಶ್ರೀಗಳು ಕೃಷ್ಣಯಜುರ್ವೇದ ಘನಪಾರಾಯಣದಲ್ಲಿ ಪಾಲ್ಗೊಂಡು ವೇದ ವಿದ್ವಾಂಸರನ್ನು ಆಶೀರ್ವದಿಸಿದರು.

ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ತೋಟಿಮನೆ ಗಣಪತಿ ಹೆಗಡೆ ಹಾಗೂ ದಿನಪ್ರಧಾನರಾಗಿ ಮಂಜುನಾಥ ಹೆಗಡೆ ಮಗೇಗಾರು ದಂಪತಿಗಳು ಉಪಸ್ಥಿತರಿದ್ದರು.

About The Author

error: Content is protected !!