September 22, 2026

ವಿಧಾನಸೌಧದಲ್ಲಿ ರವೀಂದ್ರ ನಾಯ್ಕ ಹೋರಾಟಕ್ಕೆ ಎಚ್‌ಕೆಪಿ ಪ್ರಶಂಸೆ: ಕಸ್ತೂರಿರಂಗನ್ ವರದಿಗೆ ವೇದಿಕೆಯ ಶಿಫಾರಸು ಪರಿಗಣಿಸಲು ಎಚ್.ಕೆ. ಪಾಟೀಲ್ ಆಗ್ರಹ

ಶಿರಸಿ: ಕಸ್ತೂರಿರಂಗನ್ ವರದಿ ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ರವೀಂದ್ರ ನಾಯ್ಕ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಅರಣ್ಯ ಭೂಮಿ ಹಕ್ಕು ಹೋರಾಟದ ಕಾರ್ಯ ಪ್ರಶಂಸನೀಯವಾಗಿದ್ದು, ಈ ಹೋರಾಟಗಾರರ ವೇದಿಕೆಯು ಸರ್ಕಾರಕ್ಕೆ ಸಲ್ಲಿಸಿದ ಶಿಫಾರಸುಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಒತ್ತಾಯಿಸಿದ್ದಾರೆ.

ವಿಧಾನಸೌಧದಲ್ಲಿ ಕಸ್ತೂರಿರಂಗನ್ ವರದಿ ಕುರಿತು ನಡೆದ ವಿಶೇಷ ಅಧಿವೇಶನದಲ್ಲಿ ಅವರು ಮಾತನಾಡಿದರು.

35 ವರ್ಷಗಳ ನಿರಂತರ ಹೋರಾಟ ಹಾಗೂ ಶಾಪರ್‌ ಗ್ರಂಥ ಸಲ್ಲಿಕೆ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಕಳೆದ 35 ವರ್ಷಗಳಿಂದ ನಿರಂತರವಾಗಿ ನಡೆಸುತ್ತಿರುವ ಹೋರಾಟ ಇಂದು ಜನಚಳವಳಿಯಾಗಿ ರೂಪುಗೊಂಡಿದೆ. ವರದಿಯನ್ನು ವಿರೋಧಿಸಿ ಮನೆ ಮನೆಯಿಂದ ಕೇಂದ್ರ ಸರ್ಕಾರಕ್ಕೆ ಲಿಖಿತ ಆಕ್ಷೇಪಣೆ ಸಲ್ಲಿಸಿರುವುದು ಗಮನಾರ್ಹವಾಗಿದೆ. ಈ ಹೋರಾಟದ ಯಶಸ್ಸಿನ ಹಿಂದೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಹಾಗೂ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರ ಬೆಂಬಲ ಪ್ರಮುಖವಾಗಿದೆ.

ಕಾಗೋಡು ತಿಮ್ಮಪ್ಪ ನಿರ್ಣಯ ಪರಿಗಣಿಸಲು ಮನವಿ: ಅರಣ್ಯವಾಸಿಗಳ ಹಕ್ಕಿಗಾಗಿ ಅನೇಕ ಕಾನೂನು ಹಾಗೂ ಸಾಮಾಜಿಕ ಹೋರಾಟಗಳು ನಡೆದಿದ್ದರೂ ಪೂರ್ಣ ಯಶಸ್ಸು ಸಿಕ್ಕಿಲ್ಲ. ಈ ಹಿಂದೆ ಕಾಗೋಡು ತಿಮ್ಮಪ್ಪನವರು ಸ್ಪೀಕರ್ ಆಗಿದ್ದಾಗ ತೆಗೆದುಕೊಂಡಿದ್ದ ನಿರ್ಣಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟರು.

80 ಸಾವಿರ ಅರಣ್ಯವಾಸಿ ಕುಟುಂಬಗಳಿಗೆ ಕಂಟಕ: ಕಸ್ತೂರಿರಂಗನ್ ವರದಿಯು ಉತ್ತರ ಕನ್ನಡ ಜಿಲ್ಲೆಯ ಸುಮಾರು 80 ಸಾವಿರ ಅರಣ್ಯವಾಸಿ ಕುಟುಂಬಗಳ ಸಾಂಸ್ಕೃತಿಕ ಹಾಗೂ ದಿನನಿತ್ಯದ ಬದುಕಿಗೆ ಮಾರಕವಾಗಿದೆ. ವರದಿಯಲ್ಲಿರುವ ನ್ಯೂನತೆಗಳು ಹಾಗೂ ತೊಂದರೆಗಳನ್ನು ಸರ್ಕಾರ ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದರು.

    About The Author

    error: Content is protected !!