ಭಟ್ಕಳ: ಮನೆಗಳ ಮೇಲೆ ಹಾರಿ, ಕಿಟಕಿ ಗಾಜುಗಳನ್ನು ಒಡೆದು ಮಕ್ಕಳನ್ನು ಬೆನ್ನಟ್ಟುತ್ತಾ ಕಳೆದ 6–7 ತಿಂಗಳಿಂದ ಮುಂಡಳ್ಳಿ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದ್ದ ಕೋತಿಯೊಂದನ್ನು ಕೊನೆಗೂ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಸಂರಕ್ಷಣಾ ತಂಡದ ಸಹಕಾರದೊಂದಿಗೆ ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ.
ಮುಂಡಳ್ಳಿಯ ಆಚೆಹಿತ್ತಲು, ಅಂಬಾರಿತ್ತಲು ಹಾಗೂ ಶಾಲಾ ಆವರಣಗಳಲ್ಲಿ ಸಂಚರಿಸುತ್ತಿದ್ದ ಈ ಕೋತಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುತ್ತಾ, ಶಾಲಾ ಮಕ್ಕಳು ಹಾಗೂ ಹಾದಿಹೋಕರ ಮೇಲೆ ಎರಗುತ್ತಿತ್ತು. ಗ್ರಾಮಸ್ಥರ ದೂರಿನ ಮೇರೆಗೆ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಈ ಕಾರ್ಯಾಚರಣೆ ಹಮ್ಮಿಕೊಂಡಿತ್ತು.
ಎರಡೂವರೆ ಗಂಟೆಗಳ ಜಂಟಿ ಕಾರ್ಯಾಚರಣೆ: ಧಾರವಾಡದ ವನ್ಯಜೀವಿ ಸಂರಕ್ಷಣಾ ತಂಡದ ಅಡಿವೆಪ್ಪ ತಳವಾರ ಅವರ ನೇತೃತ್ವದಲ್ಲಿ ಆಗಮಿಸಿದ ತಂಡವು, ಸೂಕ್ತ ಸ್ಥಳದಲ್ಲಿ ಜೋಳವಿಟ್ಟ ಬೋನು ಅಳವಡಿಸಿ ಸುಮಾರು ಎರಡೂವರೆ ಗಂಟೆಗಳ ಕಾಲ ಶ್ರಮಿಸಿ ಕೋತಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಯಿತು.
ದಟ್ಟ ಅರಣ್ಯಕ್ಕೆ ರವಾನೆ: ಸೆರೆಸಿಕ್ಕ ಕೋತಿಯನ್ನು ಭಟ್ಕಳ ಅರಣ್ಯ ಇಲಾಖೆಯ ಸಿಬ್ಬಂದಿ ವಶಕ್ಕೆ ಪಡೆದು, ಜನವಸತಿ ಪ್ರದೇಶದಿಂದ ದೂರವಿರುವ ದಟ್ಟ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ. ಇದರಿಂದ ಮುಂಡಳ್ಳಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಕಾರ್ಯಾಚರಣೆಯಲ್ಲಿ ಮುಂಡಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಲೋಕೇಶ ಗೊಂಡ, ಪಂಚಾಯಿತಿ ಕಾರ್ಯದರ್ಶಿ ಉದಯ ಖಾರ್ವಿ, ಸಿಬ್ಬಂದಿ ವರ್ಗ ಹಾಗೂ ವನ್ಯಜೀವಿ ಸಂರಕ್ಷಣಾ ತಂಡದ ಸದಸ್ಯರು ಭಾಗವಹಿಸಿದ್ದರು.
About The Author


More Stories
ಮೈಸೂರು ದಸರಾ ಕ್ರೀಡಾಕೂಟ: ಕರಾಟೆಯಲ್ಲಿ ಕಂಚಿನ ಪದಕ ಗೆದ್ದ ಭಟ್ಕಳದ ಪ್ರವೀಣ್ ಹರಿಜನ್
ನಾಗ ಮಾಸ್ತಿ ಕ್ಷೇತ್ರದಲ್ಲಿ ವೈಭವದ ಮಹಿಳಾ ದಸರಾ; ಪ್ರತಿಭೆ ಅನಾವರಣಕ್ಕೆ ವೇದಿಕೆ
ನಾಗ ಮಾಸ್ತಿ ಕ್ಷೇತ್ರದಲ್ಲಿ ಸಾಂಸ್ಕೃತಿಕ ವೇದಿಕೆಗೆ ಚಾಲನೆ; ಸನಾತನ ಸಂಸ್ಕೃತಿ ರಕ್ಷಣೆಗೆ ಒತ್ತು