ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ದಿನಗೂಲಿ ನೌಕರರು ಹಾಗೂ ಸಣ್ಣ ಶ್ರಮಿಕರು ಸಂಕಷ್ಟದಲ್ಲಿದ್ದರೆ, ಮತ್ತೊಂದೆಡೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಿ ಗೆದ್ದರೂ ಕಂದಾಯ ಇಲಾಖೆಯ ಅಲೆದಾಟದಿಂದ ಸಂತ್ರಸ್ತ ಮಹಿಳೆಯೊಬ್ಬರು ನ್ಯಾಯಕ್ಕಾಗಿ ಪರದಾಡುವಂತಾಗಿದೆ. ಈ ಎರಡೂ ಪ್ರಮುಖ ಸಮಸ್ಯೆಗಳ ಕುರಿತು ಎಸ್ಸಿ/ಎಸ್ಟಿ ಮಹಿಳಾ ಸಬಲೀಕರಣ ಹೋರಾಟ ಸಮಿತಿಯ ರಾಜ್ಯ ಮಾಧ್ಯಮ ವಕ್ತಾರ ಮಹೇಶ್ ಎಮ್. ಶರ್ಮಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
೧. ಶ್ರಮಿಕ ವರ್ಗದ ಮೇಲೆ ವಾಹನ ದಂಡದ ಗದಾಪ್ರಹಾರ:
ಮೋಟಾರು ವಾಹನ ಕಾಯ್ದೆಯಡಿ ವಿಧಿಸುತ್ತಿರುವ ಭಾರಿ ಪ್ರಮಾಣದ ದಂಡದ ಮೊತ್ತವು ದಿನಗೂಲಿ ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆಯುವಂತಾಗಿದೆ. ದಿನಕ್ಕೆ ನಗಣ್ಯ ಸಂಪಾದನೆ ಮಾಡುವ ಶ್ರಮಿಕರಿಗೆ ಸಾವಿರಾರು ರೂಪಾಯಿ ದಂಡ ಬಿದ್ದರೆ ಕುಟುಂಬದ ರೇಷನ್, ಮಕ್ಕಳ ಶಿಕ್ಷಣ ಹಾಗೂ ಆಸ್ಪತ್ರೆ ವೆಚ್ಚ ಭರಿಸುವುದು ಹೇಗೆ ಎಂದು ಸಮಿತಿ ಪ್ರಶ್ನಿಸಿದೆ. ಗ್ರಾಮೀಣ ಭಾಗದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವೇ ಇಂತಹ ಉಲ್ಲಂಘನೆಗಳಿಗೆ ಮೂಲ ಕಾರಣವಾಗಿದ್ದು, ಇದನ್ನು ತಡೆಯದೆ ಕೇವಲ ದಂಡ ವಸೂಲಿ ಮಾಡುವುದರಿಂದ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ.
ಸಮಿತಿಯ ಪ್ರಮುಖ ಬೇಡಿಕೆಗಳು:
- ದಂಡ ವಿಧಿಸುವ ಮುನ್ನ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ವ್ಯಾಪಕ ಜಾಗೃತಿ ಅಭಿಯಾನ ನಡೆಸಬೇಕು.
- ಪ್ರಥಮ ಬಾರಿಯ ಸಣ್ಣಪುಟ್ಟ ನಿಯಮ ಉಲ್ಲಂಘನೆಗಳಿಗೆ ದೊಡ್ಡ ಮೊತ್ತದ ದಂಡದ ಬದಲು ಎಚ್ಚರಿಕೆ ನೀಡುವುದು ಅಥವಾ ಕನಿಷ್ಠ ದಂಡ ವಿಧಿಸುವಂತೆ ನಿಯಮ ತಿದ್ದುಪಡಿ ತರಬೇಕು.
- ಅಥಣಿ ತಾಲೂಕಿನಲ್ಲಿ ಉಚಿತ ಸಮಾಲೋಚನೆ ಹಾಗೂ ವ್ಯಸನಮುಕ್ತ ಪುನರ್ವಸತಿ ಕೇಂದ್ರಗಳನ್ನು ತಕ್ಷಣ ಆರಂಭಿಸಬೇಕು.
- ಅಬಕಾರಿ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ಅಕ್ರಮ ಮದ್ಯ ಮಾರಾಟ ಜಾಲವನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು.
೨. ನ್ಯಾಯಾಲಯದ ಆದೇಶವಿದ್ದರೂ ಉತಾರದಲ್ಲಿ ಹೆಸರಿಲ್ಲದೆ ಸಂತ್ರಂತೆ ಪರದಾಟ:
ತಂದೆಯ ಆಸ್ತಿಯಲ್ಲಿ ಕಾನೂನುಬದ್ಧವಾಗಿ ಬರಬೇಕಾದ ಪಾಲಿಗಾಗಿ ಸುದೀರ್ಘ ಕಾನೂನು ಹೋರಾಟ ನಡೆಸಿ ನ್ಯಾಯಾಲಯದಲ್ಲಿ ಜಯಗಳಿಸಿ, ಅಂತಿಮ ಆದೇಶ (Final Decree) ಹಾಗೂ ಕಬ್ಜಾ ಪಡೆದುಕೊಂಡಿದ್ದರೂ, ಕಂದಾಯ ದಾಖಲೆಗಳಲ್ಲಿ (RTC) ಹೆಸರು ಬದಲಾವಣೆಗಾಗಿ ಚಿಕ್ಕೋಡಿ ಉಪವಿಭಾಗಾಧಿಕಾರಿ (AC) ಹಾಗೂ ತಹಶೀಲ್ದಾರ್ ಕಚೇರಿಗೆ ಅಲೆಯುವಂತಾಗಿದೆ.

ನ್ಯಾಯಾಲಯದ ಆದೇಶವಿದ್ದರೂ ‘೧೧ಇ ಸ್ಕೆಚ್’ ಅಥವಾ ಫೋಡಿ ತಿದ್ದುಪಡಿ ತರುವಂತೆ ಅಧಿಕಾರಿಗಳು ಅರ್ಜಿದಾರರ ಮೇಲೆಯೇ ಜವಾಬ್ದಾರಿ ಹಾಕಿ ಅಲೆದಾಡಿಸುತ್ತಿದ್ದಾರೆ. ಕಂದಾಯ ಮತ್ತು ಭೂಮಾಪನ ಇಲಾಖೆಯೇ ಜವಾಬ್ದಾರಿ ತೆಗೆದುಕೊಂಡು ತಾಂತ್ರಿಕ ತೊಂದರೆಗಳನ್ನು ನಿವಾರಿಸಿ, ಕೂಡಲೇ ಆರ್ಟಿಸಿಯಲ್ಲಿ ಸಂತ್ರಸ್ತ ಮಹಿಳೆಯ ಹೆಸರನ್ನು ದಾಖಲಿಸಬೇಕು ಎಂದು ಸಮಿತಿ ಆಗ್ರಹಿಸಿದೆ.
ಇನ್ನಾದರೂ ಜಿಲ್ಲಾ ಹಾಗೂ ತಾಲೂಕು ಆಡಳಿತ, ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡು ಶ್ರಮಿಕರ ಮೇಲಿನ ದಂಡದ ಸುಳಿಗೆ ಕಡಿವಾಣ ಹಾಕಿ ಹಾಗೂ ಸಂತ್ರಸ್ತ ಮಹಿತ್ರೆಗೆ ನ್ಯಾಯ ಒದಗಿಸುತ್ತವೆಯೆ ಅಥವಾ ಯಥಾಸ್ಥಿತಿ ಮುಂದುವರಿಯಲಿದೆಯೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಮಹೇಶ್ ಎಮ್. ಶರ್ಮಾ, ರಾಜ್ಯ ಮಾಧ್ಯಮ ವಕ್ತಾರರು, ಎಸ್ಸಿ/ಎಸ್ಟಿ ಮಹಿಳಾ ಸಬಲೀಕರಣ ಹೋರಾಟ ಸಮಿತಿ (ರಿ.), ಅಥಣಿ.
About The Author


More Stories
ನೂತನ ಡಿವೈಎಸ್ಪಿ ವೀರೇಂದ್ರ ಕುಮಾರ್ ಪಿ. ಅವರಿಗೆ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಆಯೋಗದಿಂದ ಅಭಿನಂದನೆ
‘ಕಣ್ಣಾಮುಚ್ಚಾಲೆ’ ಆಟ: ಜಿ-ಮಾರ್ಟ್ ಎದುರು ಅರ್ಧಕ್ಕೇ ನಿಂತ ಶೌಚಾಲಯ, ಮಹಿಳೆಯರ ಪರದಾಟ
ಅಥಣಿಯ ಶಿವಯೋಗಿ ನಗರದಲ್ಲಿ ಮೂಲಭೂತ ಸೌಕರ್ಯಗಳ ಅಭಾವ: ಹೆದ್ದಾರಿಯಲ್ಲಿ ‘ಸ್ಪೀಡ್ ಬ್ರೇಕರ್’, ಶಾಲಾ ಮೇಲ್ದರ್ಜೆಗೆ ಸ್ಥಳೀಯರ ಉಗ್ರ ಆಗ್ರಹ.