ಕೊಡಗಿನ ಮೂಲಭೂತ ಸಮಸ್ಯೆಗಳ ಕುರಿತು ಆಡಳಿತ-ಪ್ರತಿಪಕ್ಷದ ವಿದ್ಯಾರ್ಥಿಗಳಿಂದ ಭಾರಿ ಏಟು-ಎದುರೇಟು
ಮಡಿಕೇರಿ: ಕೊಡಗು ಜಿಲ್ಲೆಯ ಪ್ರಮುಖ ಕೃಷಿ ಸಂಕಷ್ಟಗಳು, ಮಾನವ-ವನ್ಯಮೃಗ ಸಂಘರ್ಷ, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಆರೋಗ್ಯ ಕ್ಷೇತ್ರದ ಸುಧಾರಣೆ ಮುಂತಾದ ಜ್ವಲಂತ ವಿಷಯಗಳ ಕುರಿತು ವಿದ್ಯಾರ್ಥಿಗಳು ಸಂಸದೀಯ ಮಾದರಿಯಲ್ಲಿ ಧ್ವನಿ ಎತ್ತಿದ ವಿಶಿಷ್ಟ ‘ಯುವ ಸಂಸತ್’ ಕಾರ್ಯಕ್ರಮ ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ಪ್ರೌಢಶಾಲೆ, ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಯ ಸುಮಾರು ೧೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಡಳಿತ ಹಾಗೂ ವಿರೋಧ ಪಕ್ಷಗಳ ಪಾತ್ರಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿ, ಜಿಲ್ಲೆಯ ಅಭಿವೃದ್ಧಿ ವಿಚಾರಗಳ ಮೇಲೆ ಬೆಳಕು ಚೆಲ್ಲಿದರು.

ಸಂಸದೀಯ ನಡಾವಳಿಗಳ ತದ್ರೂಪು ಪ್ರದರ್ಶನ: ಸಭಾಧ್ಯಕ್ಷರನ್ನು ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರು ಪೀಠಕ್ಕೆ ಕರೆತರುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ನಾಡಗೀತೆ, ವಂದೇಮಾತರಂ ಗಾಯನ ಹಾಗೂ ಸಂವಿಧಾನದ ಪ್ರಸ್ತಾವನೆ ವಾಚನದ ನಂತರ ನಡಾವಳಿಗಳು ಆರಂಭಗೊಂಡವು. ಸಭಾಧ್ಯಕ್ಷರ ಪಾತ್ರ ವಹಿಸಿದ್ದ ಮುತ್ತಪ್ಪ, “ಪ್ರಜಾಪ್ರಭುತ್ವದ ಶಕ್ತಿ ಜನರ ಧ್ವನಿಯಾಗಿದ್ದು, ಸಮಾಜಮುಖಿ ಅಭಿವೃದ್ಧಿಯೇ ಎಲ್ಲರ ಆಶಯವಾಗಬೇಕು” ಎಂದರು.
ಮುಖ್ಯಮಂತ್ರಿ ಪಾತ್ರದಲ್ಲಿದ್ದ ಪ್ರಭಾಕರ್ ಅವರು ಸಚಿವ ಸಂಪುಟ ಪರಿಚಯಿಸಿ, ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಮಂಡಿಸಿದರು. ಬಳಿಕ ನಡೆದ ಪ್ರಶ್ನೋತ್ತರ ವೇಳೆ, ಗಮನ ಸೆಳೆಯುವ ಸೂಚನೆ, ತುರ್ತು ವಿಷಯಗಳ ಚರ್ಚೆ ಹಾಗೂ ವಿಧೇಯಕಗಳ ಮಂಡನೆ ಕಾರ್ಯವಿಧಾನಗಳು ಅಚ್ಚುಕಟ್ಟಾಗಿ ಜರುಗಿದವು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್ಸಿಸಿ ಕೆಡೆಟ್ಗಳು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು.
ಸಮಸ್ಯೆಗಳ ಕುರಿತು ಕಾಯಂ ಚರ್ಚೆ: ವಿರೋಧ ಪಕ್ಷದ ಒತ್ತಾಯ: ಕನ್ನಡ ಶಾಲೆಗಳ ಅಭಿವೃದ್ಧಿ, ರಸ್ತೆ ಅಪಘಾತ ತಡೆಯಲು ಸಿಗ್ನಲ್ ಹಾಗೂ ಪಾರ್ಕಿಂಗ್ ವ್ಯವಸ್ಥೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ತಜ್ಞ ವೈದ್ಯರ ನಿಯೋಜನೆ ಮುಂತಾದ ವಿಷಯಗಳ ಕುರಿತು ವಿರೋಧ ಪಕ್ಷದ ನಾಯಕಿ ಅಸ್ಮಿತ ನೇತೃತ್ವದ ತಂಡ ಚುರುಕಿನ ಚರ್ಚೆ ನಡೆಸಿತು.
ಆಡಳಿತ ಪಕ್ಷದ ಉತ್ತರ: ಪ್ರವಾಸೋದ್ಯಮ ಹಾಗೂ ಸಣ್ಣ ಉದ್ಯಮಗಳ ಮೂಲಕ ಯುವಜನರಿಗೆ ಉದ್ಯೋಗ ಸೃಷ್ಟಿಸಲಾಗುವುದು. ಜೊತೆಗೆ ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ ಎಂದು ಆಡಳಿತ ಪಕ್ಷ ಸಮರ್ಥಿಸಿಕೊಂಡಿತು.
ನಾಯಕತ್ವದ ಗುಣ ಬೆಳೆಸಲು ಸಹಕಾರಿ: ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್, “ಯುವ ಸಂಸತ್ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸಲು ಅತ್ಯಂತ ಸಹಕಾರಿ” ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶ್ರೀಧರ, ತಾ.ಪಂ. ಇಒ ಶೇಖರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಬಿಇಒ ಮಹೇಶ್, ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ. ಬಿ. ರಾಘವ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಬಾಲಕೃಷ್ಣ ರೈ, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮಿಲನ ಭರತ್, ನಿವೃತ್ತ ಪ್ರಾಂಶುಪಾಲ ಕೆ.ಜಿ. ದಿವಾಕರ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ವರದಿ : ಪ್ರಿತುನ್ ಪೂವಣ್ಣ

More Stories
ಆಂಗ್ಲ ಭಾಷೆಯ ನಾಮಫಲಕ ಅಳವಡಿಕೆಗೆ ಕರವೇ ಆಕ್ರೋಶ; ನಗರಸಭೆ ವಿರುದ್ಧ ಕಿಡಿ
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ‘ಯುವ ಸಂಸತ್ತು’ ಉದ್ಘಾಟಿಸಿದ ಶಾಸಕ ಡಾ. ಮಂತರ್ ಗೌಡ
ಮಿತಿಮೀರಿದ ಪ್ರವಾಸಿಗರಿಂದ ಸೂಕ್ಷ್ಮ ಪರಿಸರದ ಮೇಲೆ ತೀವ್ರ ಒತ್ತಡ; ನಿವೃತ್ತ ಕರ್ನಲ್ ಮುತ್ತಣ್ಣ ಕಳವಳ