ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ವಕೀಲರ ಸಂಘದಿಂದ ಹಕ್ಕೊತ್ತಾಯ ಪತ್ರ ಸಲ್ಲಿಕೆ
ಕೂಡ್ಲಿಗಿ (ವಿಜಯನಗರ): ರಾಜ್ಯದ ವಿವಿಧೆಡೆ ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ಕೊಲೆ ಹಾಗೂ ಕೊಲೆಯತ್ನ ಕೃತ್ಯಗಳನ್ನು ತೀವ್ರವಾಗಿ ಖಂಡಿಸಿರುವ ಕೂಡ್ಲಿಗಿ ತಾಲೂಕು ವಕೀಲರ ಸಂಘವು, ವಕೀಲರ ಮೇಲಿನ ದೌರ್ಜನ್ಯ ತಡೆಯಲು ಶೀಘ್ರವೇ ಬಲವಾದ ವಕೀಲರ ಹಿತರಕ್ಷಣಾ ಕಾಯ್ದೆಯನ್ನು ಜಾರಿಗೆ ತರುವಂತೆ ಆಗ್ರಹಿಸಿದೆ.

ಸಂಘದ ಅಧ್ಯಕ್ಷ ಜಿ. ಹೊನ್ನೂರಪ್ಪ ಅವರ ನೇತೃತ್ವದಲ್ಲಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ರವಾನಿಸಿದ ವಕೀಲರು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಜಿ. ಹೊನ್ನೂರಪ್ಪ, “ಇತ್ತೀಚೆಗೆ ಬೆಂಗಳೂರಿನ ವೈಟ್‌ಫೀಲ್ಡ್‌ನ ವಕೀಲ ಮಂಜುನಾಥ್ ಹಾಗೂ ಅನ್ನಪೂರ್ಣೇಶ್ವರಿ ನಗರದ ವಕೀಲ ಶ್ರೀರಾಮ್ ಅವರ ಬರ್ಬರ ಹತ್ಯೆ ಮತ್ತು ಗೌರಿಬಿದನೂರಿನ ವಕೀಲ ವೆಂಕಟರಮಣ ಸಣ್ಣಕಿ ಅವರ ಮೇಲಿನ ಕೊಲೆಯತ್ನ ಕೃತ್ಯಗಳು ವಕೀಲ ಸಮುದಾಯವನ್ನು ಬೆಚ್ಚಿಬೀಳಿಸಿವೆ. ನ್ಯಾಯಾಲಯ ಹಾಗೂ ಕಚೇರಿಗಳಲ್ಲಿ ವಕೀಲರು ಭಯಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗದಂತಹ ದುಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸರ್ಕಾರ ತಕ್ಷಣವೇ ಸಮಗ್ರ ವಕೀಲರ ಹಿತರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕು” ಎಂದು ಒತ್ತಾಯಿಸಿದರು.
ಹಿರಿಯ ವಕೀಲ ಹೆಚ್.ಎಂ. ಪಂಡಿತರಾಧ್ಯ ಹಾಗೂ ಸಂಘದ ಪ್ರಮುಖರು ಪ್ರತಿಭಟನೆಯಲ್ಲಿ ಮಾತನಾಡಿದರು.
ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷ ಬಿ. ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಸಿ. ವಿರುಪಾಕ್ಷಪ್ಪ, ಸಹ ಕಾರ್ಯದರ್ಶಿ ಡಿ.ಹೆಚ್. ದುರುಗೇಶ್, ಖಜಾಂಚಿ ಕೆ.ಜಿ. ಸಾವಿತ್ರಿಬಾಯಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಡಿ. ಲಕ್ಷ್ಮೀದೇವಿ, ಎಂ. ರಾಮಪ್ಪ ಸೇರಿದಂತೆ ತಾಲೂಕು ವಕೀಲರ ಸಂಘದ ಸರ್ವ ಸದಸ್ಯರು ಪಾಲ್ಗೊಂಡಿದ್ದರು.
– ವರದಿ: ವಿ.ಜಿ. ವೃಷಭೇಂದ್ರ, ಕೂಡ್ಲಿಗಿ

More Stories
ಬೆಲೆ ಏರಿಕೆ, ಅವೈಜ್ಞಾನಿಕ ಕಾಮಗಾರಿ ಖಂಡಿಸಿ ಸಿಪಿಐ(ಎಂ) ಬೃಹತ್ ಪ್ರತಿಭಟನೆ
ಮೌಲಾನಾ ಅಬುಲ್ ಕಲಾಂ ಆಜಾದ್ ಜಯಂತಿ ಹಾಗೂ ರಾಷ್ಟ್ರೀಯ ಶಿಕ್ಷಣ ದಿನಾಚರಣೆ
ಚಂದ್ರಶೇಖರಪುರ: ಜನರ ಬಳಿಗೆ ಆಡಳಿತ; ಪ್ರಜಾ ಸೇವೆ ಆಂದೋಲನದಲ್ಲಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅಭಯ