November 22, 2026

ಅಥಣಿ: ಎಂ.ಜಿ. ಮಾರ್ಕೆಟ್‌ನಲ್ಲಿ ಅರ್ಧಕ್ಕೆ ನಿಂತ ಶೌಚಾಲಯ ಕಾಮಗಾರಿ; ವ್ಯಾಪಾರಸ್ಥರು, ಸಾರ್ವಜನಿಕರಿಂದ ಆಕ್ರೋಶ

ಗಬ್ಬು ವಾಸನೆಯಿಂದ ಪರದಾಡುತ್ತಿರುವ ಮಹಿಳಾ ವ್ಯಾಪಾರಸ್ಥರು: ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಬೇಸರ

ಅಥಣಿ (ಬೆಳಗಾವಿ ಜಿಲ್ಲೆ): ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾದ ಅಥಣಿಯ ಎಂ.ಜಿ. ಮಾರ್ಕೆಟ್ (ಮಹಾತ್ಮ ಗಾಂಧಿ ಮಾರ್ಕೆಟ್), ಶಿವಣಗಿ ಕಾಂಪ್ಲೆಕ್ಸ್ ಹಿಂಭಾಗ ಹಾಗೂ ಜಿ-ಮಾರ್ಟ್ ಎದುರು ನಿರ್ಮಿಸುತ್ತಿರುವ ಸಾರ್ವಜನಿಕ ಶೌಚಾಲಯ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಉಂಟಾಗಿರುವ ತೀವ್ರ ದುರ್ವಾಸನೆಯಿಂದ ಸಾರ್ವಜನಿಕರು ಹಾಗೂ ಸಣ್ಣ ವ್ಯಾಪಾರಸ್ಥರು ಹೈರಾಣಾಗಿದ್ದಾರೆ.

ಮಾರ್ಕೆಟ್‌ಗೆ ಆಗಮಿಸುವ ಗ್ರಾಹಘಕರು ಮತ್ತು ಪ್ರತಿದಿನ ತರಕಾರಿ, ಬಜ್ಜಿ ಮತ್ತಿತರ ಸಣ್ಣಪುಟ್ಟ ವ್ಯಾಪಾರ ಮಾಡಿ ಜೀವನ ಸಾಗಿಸುವ ನೂರಾರು ಮಹಿಳೆಯರು ಶೌಚಾಲಯದ ಕೊರತೆ ಹಾಗೂ ಅಸಹನೀಯ ಗಬ್ಬು ವಾಸನೆಯಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಕುರಿತು ಸ್ಥಳೀಯ ಮುಖಂಡರು ಮತ್ತು ವ್ಯಾಪಾರಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖಂಡರ ಹಾಗೂ ಹೋರಾಟಗಾರರ ಆಕ್ರೋಶ:

ಕರ್ನಾಟಕ SC-ST ಮಹಿಳಾ ಸಬಲೀಕರಣ ಹೋರಾಟ ಸಮಿತಿಯ ರಾಜ್ಯ ಮಾಧ್ಯಮ ವಕ್ತಾರ ಮಹೇಶ್ ಎಮ್. ಶರ್ಮಾ ಮಾತನಾಡಿ, “ಅರ್ಧಕ್ಕೆ ನಿಂತಿರುವ ಶೌಚಾಲಯದಿಂದ ಹೊರಹೊಮ್ಮುವ ದುರ್ವಾಸನೆಯಿಂದ ಜನರು ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಚುನಾವಣೆ ಬಂದಾಗ ಮಾತ್ರ ಮತ ಕೇಳುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸಾರ್ವಜನಿಕರ ಸಮಸ್ಯೆ ಕಾಣುತ್ತಿಲ್ಲವೇ?” ಎಂದು ಪ್ರಶ್ನಿಸಿದರು.

ಸಾಮಾಜಿಕ ಹೋರಾಟಗಾರ ರಾಜು ಡವರಿ ಮಾತನಾಡಿ, “ಮಾರುಕಟ್ಟೆಯಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯವಿಲ್ಲದೆ ಒಂದೇ ಕಡೆ ಅಸ್ತವ್ಯಸ್ತವಾಗಿರುವುದು ಮರ್ಯಾದೆಯ ಪ್ರಶ್ನೆಯಾಗಿದೆ. ಲಕ್ಷ್ಮಣ ವೇದಿಕೆ ಹಾಗೂ ಗಾಂಧೀಜಿ ರಿಕ್ಷಾ ನಿಲ್ದಾಣವಿರುವ ಈ ಜನದಟ್ಟಣೆ ಪ್ರದೇಶದಲ್ಲಿ ತ್ಯಾಜ್ಯದಿಂದ ರೋಗರುಜಿನಗಳು ಹರಡುವ ಭೀತಿಯಿದೆ” ಎಂದರು.

    ಜಕಾತಿ ವಸೂಲಿ ಮಾಡುತ್ತಿದ್ದರೂ ಮೂಲಭೂತ ಸೌಕರ್ಯವಿಲ್ಲ: ಮಹಿಳಾ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿ, “ಪುರಸಭೆಯವರು ದಿನನಿತ್ಯ ನಮ್ಮ ಬಳಿ ಬಂದು ಜಕಾತಿ (ತೆರಿಗೆ) ವಸೂಲಿ ಮಾಡಿಕೊಂಡು ಹೋಗುತ್ತಾರೆ. ಆದರೆ, ನಮಗೆ ಒಂದು ಶೌಚಾಲಯ ನಿರ್ಮಿಸಿಕೊಡಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲವೇ? ಕಳೆದ ೧-೨ ವರ್ಷಗಳಿಂದ ಈ ಸಮಸ್ಯೆಯಿದ್ದರೂ ಯಾರೂ ತಿರುಗಿ ನೋಡಿಲ್ಲ” ಎಂದು ಅಳಲು ತೋಡಿಕೊಂಡರು.

    ಕೂಡಲೇ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಆಡಳಿತ ಮಧ್ಯಪ್ರವೇಶಿಸಿ, ಅರ್ಧಕ್ಕೆ ನಿಂತಿsರುವ ಶೌಚಾಲಯ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು ಎಂದು ಸಂತ್ರಸ್ತರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

    – ವರದಿ: ಮಹೇಶ್ ಶರ್ಮಾ, ಅಥಣಿ

    About The Author

    error: Content is protected !!