ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ಸೆಸ್ಕ್ ಕಚೇರಿ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ
ಕುಶಾಲನಗರ (ಕೊಡಗು): ಪಟ್ಟಣದ ಸೋಮೇಶ್ವರ ದೇವಸ್ಥಾನದ ಮುಖ್ಯರಸ್ತೆಯಲ್ಲಿರುವ ಶಿವಣ್ಣ ಅವರ ಬ್ಯಾಟರಿ ಅಂಗಡಿಯ ಮುಂಭಾಗದ ವಿದ್ಯುತ್ ಕಂಬವೊಂದು ಬೀಳುವ ಅಪಾಯದ ಹಂತದಲ್ಲಿದ್ದು, ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಎಚ್. ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೀವ್ರ ಅಪಾಯ ತಂದೊಡ್ಡುತ್ತಿರುವ ಈ ವಿದ್ಯುತ್ ಕಂಬವನ್ನು ಕೂಡಲೇ ಬದಲಾಯಿಸುವಂತೆ ಕರವೇ ಜಿಲ್ಲಾಧ್ಯಕ್ಷ ಬಿ.ಎ. ದಿನೇಶ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಸಂಬಂಧಪಟ್ಟ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಸೆಸ್ಕ್) ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಒತ್ತಾಯಿಸಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಧಿಕಾರಿಗಳು, ಒಂದು ವಾರದೊಳಗೆ ಅಪಾಯಕಾರಿ ವಿದ್ಯುತ್ ಕಂಬವನ್ನು ತೆರವುಗೊಳಿಸಿ ನೂತನ ಕಂಬ ಅಳವಡಿಸುವ ಭರವಸೆ ನೀಡಿದ್ದಾರೆ. ನಿಗದಿತ ಗಡುವಿನೊಳಗೆ ಕಂಬ ಬದಲಾಯಿಸದಿದ್ದಲ್ಲಿ ಕುಶಾಲನಗರದ ಸೆಸ್ಕ್ ಕಚೇರಿ ಎದುರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರವೇ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಬಿ.ಎ. ದಿನೇಶ್ ಶೆಟ್ಟಿ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಕೆ. ಚಂದ್ರು, ಮಹಿಳಾ ತಾಲೂಕು ಗೌರವಾಧ್ಯಕ್ಷೆ ಪುಟ್ಟಮ್ಮ, ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿ, ತಾಲೂಕು ಉಪಾಧ್ಯಕ್ಷ ರಂಗಸ್ವಾಮಿ, ಜಿಲ್ಲಾ ಮಹಿಳಾ ಸಹಕಾರ್ಯದರ್ಶಿ ಪ್ರೇಮ, ಜಿಲ್ಲಾ ಕಾರ್ಯದರ್ಶಿ ಎಂ.ಎಸ್. ಸತೀಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ಕಾರ್ತಿಕ್ ಹಾಗೂ ಮೀನಾಕ್ಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವರದಿ: ಪ್ರಿತುನ್ ಪೂವಣ್ಣ, ಕುಶಾಲನಗರ

More Stories
ಬಸ್ ತಂಗುದಾಣವೋ ಅಥವಾ ವಿಷಜಂತುಗಳ ಆವಾಸಸ್ಥಾನವೋ? ಕಾಡು ಪೊದೆ ತೆರವಿಗೆ ಕರವೇ ಸ್ವಾಭಿಮಾನಿ ಸೇನೆ ಆಗ್ರಹ
ಶೇ. 60ರಷ್ಟು ಕನ್ನಡ ಕಡ್ಡಾಯ ನಿಯಮ ಉಲ್ಲಂಘನೆ: ಒಂದು ವಾರದೊಳಗೆ ಫಲಕ ಬದಲಾಯಿಸಲು ಪುರಸಭೆ ಎಚ್ಚರಿಕೆ
ಕುಶಾಲನಗರದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ: ಕರವೇ ಭಾಗಿ, ಕಣ್ಣುಸೆಳೆದ ಭವ್ಯ ಮೆರವಣಿಗೆ