November 22, 2026

ಅಳ್ಳಂಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಡಗರದ ಮಕ್ಕಳ ದಿನಾಚರಣೆ

ವಿದ್ಯಾರ್ಥಿಗಳದ್ದೇ ಸಾರಥ್ಯದಲ್ಲಿ ನಡೆದ ಸಭಾ ಕಾರ್ಯಕ್ರಮ; ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ

ಹೊನ್ನಾವರ (ಉತ್ತರ ಕನ್ನಡ): ತಾಲೂಕಿನ ಅಳ್ಳಂಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಕ್ಕಳ ದಿನಾಚರಣೆಯನ್ನು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ವಿಶೇಷವೆಂದರೆ, ಈ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯನ್ನು ವಿದ್ಯಾರ್ಥಿಗಳೇ ಯಶಸ್ವಿಯಾಗಿ ನಡೆಸಿಕೊಟ್ಟರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿಜ್ಯ ವಿಭಾಗದ ವಿದ್ಯಾರ್ಥಿ ನಾಯಕ ಗಣೇಶ ಭಟ್ಟ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾರ್ಥಿ ನಾಯಕರಾದ ಅಕ್ಷಯ ಗೌಡ, ಅಕ್ಷತಾ ನಾಯ್ಕ, ಲಿಖಿತಾ ನಾಯ್ಕ, ಜಹಿದಾನ್ ಖಾನ್, ಗಗನ್ ನಾಯ್ಕ, ಪ್ರವೀಣ ನಾಯ್ಕ, ಪೂರ್ಣಿಮಾ ನಾಯ್ಕ, ಭಾವನಾ ನಾಯ್ಕ, ಉದಯ ನಾಯ್ಕ, ಖುಷಿ ನಾಯ್ಕ ಹಾಗೂ ಶ್ರೇಯಸ್ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಸಮಿಯಬಾನು ಜೆ. ಖಾನ್ ಅವರು ಮಕ್ಕಳ ದಿನಾಚರಣೆಯ ಮಹತ್ವ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾಲೇಜಿನ ಪ್ರಾಚಾರ್ಯ ಕಿಶೋರ್ ನಾಯ್ಕ ಅವರು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನುಡಿಗಳನ್ನಾಡಿದರು.

ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿ ದೀಪ್ತಿ ಸ್ವಾಗತಿಸಿದರು. ಅಮೂಲ್ಯ ಕಾರ್ಯಕ್ರಮ ನಿರೂಪಿಸಿದರೆ, ಕು. ಗಗನಾ ನಾಯ್ಕ ವಂದನಾರ್ಪಣೆ ನೆರವೇರಿಸಿದರು.

About The Author

error: Content is protected !!