November 22, 2026

ಶರಾಬಿ ನದಿ ದಡದ ಸ್ಮಶಾನಕ್ಕೆ ಸ್ಥಳೀಯರ ವಿರೋಧ; ಸ್ಥಳಾಂತರಕ್ಕೆ ಡೊಂಗರಪಳ್ಳಿ ನಿವಾಸಿಗಳ ಪಟ್ಟು

ಅಂತ್ಯಕ್ರಿಯೆ ಹೊಗೆ ಜನವಸತಿ ಪ್ರದೇಶಕ್ಕೆ ವ್ಯಾಪಿಸಿ ಆರೋಗ್ಯದ ಆತಂಕ; ಉಪವಿಭಾಗಾಧಿಕಾರಿ ಜೆ. ಮಹೇಶ್‌ಗೆ ಮನವಿ ಸಲ್ಲಿಕೆ

ಭಟ್ಕಳ (ಉತ್ತರ ಕನ್ನಡ): ಜನವಸತಿ ಪ್ರದೇಶದ ಸಮೀಪವೇ ಶರಾಬಿ ನದಿ ದಡದಲ್ಲಿ ನಿರ್ಮಿಸಲಾಗಿರುವ ಸ್ಮಶಾನದಿಂದ ಸ್ಥಳೀಯರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿರುವ ಡೊಂಗರಪಳ್ಳಿ ನಿವಾಸಿಗಳು, ಮುಂಡಳ್ಳಿ ಗ್ರಾಮದ ಈ ಸ್ಮಶಾನವನ್ನು ಸೂಕ್ತ ಪರ್ಯಾಯ ಸ್ಥಳಕ್ಕೆ ಸ್ಥಳಾಂತರಿಸುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿ (AC) ಜೆ. ಮಹೇಶ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ತಾಲೂಕಿನ ಸೂಸಗಡಿ ಹೋಬಳಿಯ ಮುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ. 51, ಹಿಸ್ಸಾ ನಂ. 5ರಲ್ಲಿ ಈ ಸ್ಮಶಾನ ನಿರ್ಮಿಸಲಾಗಿದೆ. ಶರಾಬಿ ನದಿಯ ಒಂದು ದಡದಲ್ಲಿ ಸ್ಮಶಾನವಿದ್ದರೆ, ಎದುರು ದಡದಲ್ಲಿರುವ ಡೊಂಗರಪಳ್ಳಿ ಸೇರಿದಂತೆ ಸುತ್ತಮುತ್ತಲಿನ ಜನವಸತಿ ಪ್ರದೇಶಗಳು ಭಟ್ಕಳ ಪುರಸಭೆ ವ್ಯಾಪ್ತಿಗೆ ಒಳಪಡುತ್ತವೆ. ಡೊಂಗರಪಳ್ಳಿಯಲ್ಲಿ 50ಕ್ಕೂ ಹೆಚ್ಚು ಮನೆಗಳಿದ್ದು, ಸಮೀಪದಲ್ಲೇ ಮಸೀದಿ, ದೇವಾಲಯ, ಶಾಲೆ ಹಾಗೂ ವಸತಿ ನಿಲಯಗಳೂ ಕಾರ್ಯನಿರ್ವಹಿಸುತ್ತಿವೆ.

ಮಕ್ಕಳು, ವೃದ್ಧರ ಆರೋಗ್ಯದ ಮೇಲೆ ದುಷ್ಪರಿಣಾಮ: ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯುವ ವೇಳೆ ಹೊರಹೊಮ್ಮುವ ದಟ್ಟ ಹೊಗೆ ನದಿಯನ್ನು ದಾಟಿ ನೇರವಾಗಿ ಡೊಂಗರಪಳ್ಳಿಯ ಮನೆಗಳಿಗೆ ವ್ಯಾಪಿಸುತ್ತಿದೆ. ಇದರಿಂದ ನಿವಾಸಿಗಳು ಉಸಿರಾಟ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದ್ದು, ವಿಶೇಷವಾಗಿ ಮಕ್ಕಳು ಮತ್ತು ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದೆ. ಜನವಸತಿ ಪ್ರದೇಶದ ಸನಿಹದಲ್ಲಿ ಸ್ಮಶಾನ ನಿರ್ಮಿಸುವ ಮುನ್ನ ಸ್ಥಳದ ಸೂಕ್ತತೆ ಹಾಗೂ ಪರಿಸರದ ಮೇಲಿನ ಪರಿಣಾಮಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಪರಿಶೀಲಿಸಬೇಕಿತ್ತು ಎಂಬುದು ಸ್ಥಳೀಯರ ಆಕ್ಷೇಪವಾಗಿದೆ.

ಧಾರ್ಮಿಕ ವಿಚಾರವಲ್ಲ, ಜನರ ಆರೋಗ್ಯದ ಪ್ರಶ್ನೆ: “ಯಾವುದೇ ಸಮುದಾಯದ ಧಾರ್ಮಿಕ ನಂಬಿಕೆ ಅಥವಾ ಅಂತ್ಯಕ್ರಿಯೆ ಸಂಪ್ರದಾಯಗಳಿಗೆ ನಮ್ಮ ವಿರೋಧವಿಲ್ಲ. ಎಲ್ಲ ಸಮುದಾಯಗಳ ಧಾರ್ಮಿಕ ಹಕ್ಕುಗಳನ್ನು ಗೌರವಿಸುವುದರ ಜೊತೆಗೆ, ಸುತ್ತಮುತ್ತಲಿನ ನಾಗರಿಕರ ಆರೋಗ್ಯ, ಪರಿಸರ ಹಾಗೂ ನೆಮ್ಮದಿಯನ್ನೂ ಆಡಳಿತ ವ್ಯವಸ್ಥೆ ಗಮನದಲ್ಲಿಟ್ಟುಕೊಳ್ಳಬೇಕು” ಎಂದು ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಪ್ರಮುಖ ಬೇಡಿಕೆಗಳು:

ಆರೋಗ್ಯ ಮತ್ತು ಪರಿಸರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಯುಮಾಲಿನ್ಯ ಹಾಗೂ ಶರಾಬಿ ನದಿಯ ನೀರಿನ ಗುಣಮಟ್ಟವನ್ನು ವೈಜ್ಞಾನಿಕವಾಗಿ ಪರೀಕ್ಷಿಸಬೇಕು.

ಪರಿಶೀಲನೆ ಪೂರ್ಣಗೊಳ್ಳುವವರೆಗೆ ಸ್ಮಶಾನದ ಬಳಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು.

ಜನವಸತಿ ಪ್ರದೇಶ, ಧಾರ್ಮಿಕ ಕೇಂದ್ರ ಹಾಗೂ ಶಾಲೆಗಳಿಂದ ಸೂಕ್ತ ಅಂತರದಲ್ಲಿರುವ ಪರ್ಯಾಯ ಜಾಗವನ್ನು ಗುರುತಿಸಿ, ಸ್ಥಳೀಯರ ಅಭಿಪ್ರಾಯ ಆಲಿಸಿ ಸ್ಮಶಾನ ಸ್ಥಳಾಂತರಕ್ಕೆ ಪಾರದರ್ಶಕ ಕ್ರಮ ಕೈಗೊಳ್ಳಬೇಕು.

    ಸಾರ್ವಜನಿಕ ಆರೋಗ್ಯ ಮತ್ತು ಪರಿಸರಕ್ಕೆ ಸಂಬಂಧಿಸಿದ ಈ ಗಂಭೀರ ಸಮಸ್ಯೆಯನ್ನು ಜಿಲ್ಲಾಡಳಿತ ತಕ್ಷಣ ಪರಿಗಣಿಸಿ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಡೊಂಗರಪಳ್ಳಿ ನಿವಾಸಿಗಳು ಒತ್ತಾಯಿಸಿದ್ದಾರೆ.

    About The Author

    error: Content is protected !!