November 22, 2026

ಮಹಿಳೆಯರ ಸ್ವಾವಲಂಬನೆಗೆ ಧರ್ಮಸ್ಥಳ ಯೋಜನೆ ಬಲ: ಭಟ್ಕಳದಲ್ಲಿ ₹100 ಕೋಟಿ ಸಾಲ ವಿತರಣೆ, ಶೇ.100 ಮರುಪಾವತಿ ದಾಖಲೆ!

ಅಳ್ವೇಕೋಡಿಯಲ್ಲಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಬೆಂಗ್ರೆ ವಲಯದ ಸಾಧನ ಸಮಾವೇಶ; ‘ಸುಜ್ಞಾನ ನಿಧಿ’ ವಿದ್ಯಾರ್ಥಿವೇತನ ವಿತರಣೆ

ಭಟ್ಕಳ (ಉತ್ತರ ಕನ್ನಡ): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಕುಟುಂಬಗಳ ಸ್ವಾವಲಂಬಿ ಬದುಕಿಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಬೆಂಗ್ರೆ ವಲಯದ ‘ಸಾಧನ ಸಮಾವೇಶ’ವು ಅಳ್ವೇಕೋಡಿಯ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ದೇವಸ್ಥಾನದ ಧರ್ಮದರ್ಶಿ ನಾರಾಯಣ ದೈಮನೆ ಮಾತನಾಡಿ, “ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಷ್ಟ್ರಮಟ್ಟದಲ್ಲಿ ವಿಸ್ತರಿಸಿರುವುದು ಅತ್ಯಂತ ಸಂತಸದ ಸಂಗತಿ. ಲಕ್ಷಾಂತರ ಕುಟುಂಬಗಳು ಈ ಯೋಜನೆಯ ನೆರವಿನಿಂದ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಗೌರವಯುತ ಜೀವನ ನಡೆಸುತ್ತಿವೆ” ಎಂದರು.

ಕುಟುಂಬಗಳಲ್ಲಿ ನೆಮ್ಮದಿ ತಂದ ಯೋಜನೆ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿರಾಲಿ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಭಾಸ್ಕರ ಈಶ್ವರ ದೈಮನೆ ಮಾತನಾಡಿ, “ಸರ್ಕಾರದ ಹಲವು ಜನಪರ ಕಾರ್ಯಗಳನ್ನು ಯೋಜನೆಯು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ. ಮದ್ಯವರ್ಜನ ಶಿಬಿರಗಳ ಮೂಲಕ ಅನೇಕ ಕುಟುಂಬಗಳಲ್ಲಿ ನೆಮ್ಮದಿ ಮೂಡಿದೆ. ಮನೆ ನಿರ್ಮಾಣ, ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ಶುಭಕಾರ್ಯಗಳಿಗೆ ಯೋಜನೆ ಆಸರೆಯಾಗಿದೆ” ಎಂದು ಶ್ಲಾಘಿಸಿದರು.

ವಿದ್ಯಾರ್ಥಿಗಳಿಗೆ ‘ಸುಜ್ಞಾನ ನಿಧಿ’ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದ ಭಟ್ಕಳ ಗ್ರಾಮೀಣ ಠಾಣೆ ಪಿಎಸ್‌ಐ ಮಲ್ಲಿಕಾರ್ಜುನ, “ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವ ಇಂತಹ ಕಾರ್ಯಕ್ರಮಗಳು ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಸಹಕಾರಿಯಾಗಿವೆ. ವಿದ್ಯಾರ್ಥಿಗಳು ಇದರ ಮಹತ್ವ ಅರಿತು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು. ಪತ್ರಕರ್ತ ರಾಧಾಕೃಷ್ಣ ಭಟ್ಟ ಮಾತನಾಡಿ, ಯೋಜನೆಯ ಕಾರ್ಯಕ್ರಮಗಳಲ್ಲಿ ಪರಿಸರ ಸ್ನೇಹಿ ವಸ್ತುಗಳಿಗೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ಒಂದೇ ಒಂದು ರೂಪಾಯಿ ಬಾಕಿಯಿಲ್ಲದ ಶಿಸ್ತು: ಪ್ರಾಸ್ತಾವಿಕ ಹಾಗೂ ಪ್ರಗತಿ ವರದಿ ಕುರಿತು ಮಾತನಾಡಿದ ಯೋಜನಾಧಿಕಾರಿ ಲತಾ ಬಂಗೇರ, “44 ವರ್ಷಗಳ ಹಿಂದೆ ಆರಂಭವಾದ ಪ್ರಗತಿಬಂಧು ಸ್ವಸಹಾಯ ಸಂಘಗಳ ಚಳವಳಿ ಮಹಿಳೆಯರ ಬದುಕಿನಲ್ಲಿ ಮಹತ್ತರ ಬದಲಾವಣೆ ತಂದಿದೆ. ಭಟ್ಕಳ ತಾಲೂಕಿನಲ್ಲಿ ಯೋಜನೆಯ ಮೂಲಕ ಸುಮಾರು ₹100 ಕೋಟಿ ಸಾಲ ವಿತರಿಸಲಾಗಿದೆ. ವಿಶೇಷವೆಂದರೆ, ಒಂದೇ ಒಂದು ರೂಪಾಯಿ ಸಾಲದ ಕಂತು ಕೂಡ ಬಾಕಿ ಉಳಿದಿಲ್ಲ ಎನ್ನುವುದು ಸಂಘದ ಸದಸ್ಯರ ಶಿಸ್ತು, ಪ್ರಾಮಾಣಿಕತೆ ಮತ್ತು ಬದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದರು.

ಸಾಧಕ ಸಂಘಗಳು ಹಾಗೂ ಹಿರಿಯ ಸದಸ್ಯರಿಗೆ ಸನ್ಮಾನ: ಸಮಾವೇಶದಲ್ಲಿ ಉತ್ತಮ ಆರ್ಥಿಕ ವ್ಯವಹಾರ ನಡೆಸಿದ ಪ್ರತಿ ಒಕ್ಕೂಟದ ತಲಾ ಎರಡು ಸಂಘಗಳನ್ನು ಗುರುತಿಸಿ ಗೌರವಿಸಲಾಯಿತು ಹಾಗೂ ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ, ಮಲ್ಲಿಗೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಾತಯ್ಯ ನಾಯ್ಕ ಹಾಗೂ ಒಕ್ಕೂಟದ ಅಧ್ಯಕ್ಷೆ ಭವಾನಿ ರಾಜು ಮೊಗೇರ ಉಪಸ್ಥಿತರಿದ್ದರು. ಮೇಲ್ವಿಚಾರಕಿ ಜ್ಯೋತಿ ಆಚಾರ್ಯ ಸ್ವಾಗತಿಸಿದರು. ಸೇವಾ ಪ್ರತಿನಿಧಿ ನಯನಾ ವರದಿ ವಾಚಿಸಿದರು. ಪ್ರಭಾವತಿ ಕಾರ್ಯಕ್ರಮ ನಿರೂಪಿಸಿದರೆ, ಶ್ವೇತಾ ಮೊಗೇರ ವಂದನಾರ್ಪಣೆ ನೆರವೇರಿಸಿದರು.

About The Author

error: Content is protected !!