November 26, 2026

ಭಟ್ಕಳದ ಸುರೇಶ ಬಸವ ಖಾರ್ವಿಗೆ ಎರಡು ರಾಜ್ಯ ಮಟ್ಟದ ಪ್ರಶಸ್ತಿಗಳ ಗೌರವ!

ಮೀನುಗಾರಿಕೆ ವೃತ್ತಿಯ ಜೊತೆಗೆ ಜೀವ ರಕ್ಷಕ ಸೇವೆ, ರಕ್ತದಾನ ಚಳವಳಿ ಹಾಗೂ ಕನ್ನಡ ಸೇವೆಯಲ್ಲಿ ಸಾಧನೆ; ಮಾವಿನಕುರ್ವೆಗೆ ಮತ್ತೊಂದು ಹೆಮ್ಮೆ

ಭಟ್ಕಳ: ಮೀನುಗಾರಿಕೆ ವೃತ್ತಿಯ ನಡುವೆಯೂ ಸಮಾಜಸೇವೆ, ಜೀವ ರಕ್ಷಕ ಮುಳುಗು ತಜ್ಞರಾಗಿ ಸೇವೆ ಹಾಗೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸುತ್ತಿರುವ ತಾಲೂಕಿನ ಮಾವಿನಕುರ್ವೆ ನಿವಾಸಿ ಸುರೇಶ ಬಸವ ಖಾರ್ವಿ ಅವರು ಎರಡು ಪ್ರತಿಷ್ಠಿತ ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಮುಂಡಗೋಡಿನಲ್ಲಿ ನಡೆದ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ‘ಕನ್ನಡ ಸೇವಾ ಕಲ್ಪತರು ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.

ಶ್ರೀ ಆರ್ಯದುರ್ಗಾದೇವಿ ಪ್ರಕಾಶನ ಹಾಗೂ ಮಾಸ್ತಿನಾ ಸ್ಟುಡಿಯೋ, ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯೋತ್ಸವ ಸಂಭ್ರಮದ ಅಂಗವಾಗಿ ಧವಳ ಕಲ್ಯಾಣ ಮಂಟಪದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಮುಂಡಗೋಡಿನ ಕನ್ನಡ ಉಪನ್ಯಾಸಕಿ ಹಾಗೂ ವಿಮರ್ಶಕಿ ಡಾ. ನಾಗರತ್ನ ಎಸ್. ಶೆಟ್ಟಿ ಮತ್ತು ಶ್ರೀ ಆರ್ಯದುರ್ಗಾದೇವಿ ಪ್ರಕಾಶನದ ಸಂಸ್ಥಾಪಕ ಹಾಗೂ ಪ್ರಕಾಶಕ ನರೇಶ ಶೆಟ್ಟಿ ಅವರು ಸುರೇಶ ಖಾರ್ವಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಇದೇ ರೀತಿ ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಮತ್ತೊಂದು ರಾಜ್ಯ ಮಟ್ಟದ ಸಮಾರಂಭದಲ್ಲಿಯೂ ಅವರಿಗೆ ಗೌರವ ಸಂದಿದೆ. ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ದಾವಣಗೆರೆ ವತಿಯಿಂದ 71ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಕರುನಾಡು ಕನ್ನಡ ಕಣ್ಮಣಿ ರಾಜ್ಯ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.

ಚೆನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭವನ್ನು ಮಂಗಳೂರಿನ ಅನಂತ ಪ್ರಕಾಶ, ಕಿನ್ನಿಗೋಳಿ ಇದರ ಪ್ರಧಾನ ಸಂಪಾದಕ ಕೊಡತ್ತೂರು ಸಚ್ಚಿದಾನಂದ ಉಡುಪ ಉದ್ಘಾಟಿಸಿದ್ದರು. ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ವಾಸುದೇವ ಎಲ್. ರಾಯ್ಕರ್ ಅಧ್ಯಕ್ಷತೆ ವಹಿಸಿದ್ದರು.

ಮೀನುಗಾರಿಕೆ ವೃತ್ತಿಯನ್ನೇ ಜೀವನಾಧಾರವಾಗಿಸಿಕೊಂಡಿರುವ ಸುರೇಶ ಬಸವ ಖಾರ್ವಿ ಅವರು ಕೇವಲ ತಮ್ಮ ವೃತ್ತಿಗೆ ಸೀಮಿತವಾಗದೆ, ರಕ್ತದಾನ ಚಳವಳಿ, ಜೀವ ರಕ್ಷಕ ಸೇವೆ ಹಾಗೂ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಕಷ್ಟದಲ್ಲಿರುವವರಿಗೆ ನೆರವಾಗುವುದು, ಅಪಾಯದ ಸಂದರ್ಭಗಳಲ್ಲಿ ಜೀವ ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಸೇರಿದಂತೆ ಸಮಾಜದ ಹಿತಕ್ಕಾಗಿ ಸಲ್ಲಿಸುತ್ತಿರುವ ಅವರ ಸೇವೆ ಗುರುತಿಸಲ್ಪಟ್ಟಿರುವುದು ವಿಶೇಷವಾಗಿದೆ.

ಸಮುದ್ರದಲ್ಲಿ ಮೀನು ಹಿಡಿದು ಬದುಕು ಕಟ್ಟಿಕೊಳ್ಳುವ ಕೈಗಳು, ಅಪಾಯದಲ್ಲಿರುವ ಜೀವಗಳನ್ನು ಉಳಿಸುವ ಕಾಯಕದಲ್ಲಿಯೂ ತೊಡಗಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಅವರ ಇಂತಹ ಬಹುಮುಖ ಸೇವೆ ಹಾಗೂ ಕನ್ನಡದ ಮೇಲಿನ ಅಭಿಮಾನಕ್ಕೆ ಎರಡು ರಾಜ್ಯ ಮಟ್ಟದ ಪ್ರಶಸ್ತಿಗಳು ಸಂದಿರುವುದು ಮಾವಿನಕುರ್ವೆ ಮಾತ್ರವಲ್ಲದೆ ಇಡೀ ಭಟ್ಕಳ ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ.

ಸುರೇಶ ಬಸವ ಖಾರ್ವಿ ಅವರ ಈ ಸಾಧನೆಗೆ ಮಾವಿನಕುರ್ವೆ ಸೇರಿದಂತೆ ಭಟ್ಕಳ ತಾಲೂಕಿನ ವಿವಿಧ ಸಂಘ-ಸಂಸ್ಥೆಗಳು, ಮೀನುಗಾರ ಮುಖಂಡರು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಅವರ ಸಮಾಜಮುಖಿ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದ್ದಾರೆ.

About The Author

error: Content is protected !!