ಜಿಲ್ಲೆ ಘೋಷಣೆ, ಕಂದಾಯ ಇಲಾಖೆ ಸತಾಯಾಟ ಹಾಗೂ ಮೂಲಸೌಕರ್ಯ ಬೇಡಿಕೆಗಳ ಮಂಡನೆ; ಸದನದಲ್ಲಿ ಮೌನ ಮುರಿಯಲು ಮಹೇಶ್ ಎಮ್. ಶರ್ಮಾ ಒತ್ತಾಯ
ಅಥಣಿ (ಬೆಳಗಾವಿ): ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 2ರಿಂದ ಆರಂಭವಾಗಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಅಥಣಿ ತಾಲೂಕಿನ ಜ್ವಲಂತ ಸಮಸ್ಯೆಗಳು, ಪ್ರತ್ಯೇಕ ಜಿಲ್ಲೆ ಘೋಷಣೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ಕಂದಾಯ ಇಲಾಖೆಯಲ್ಲಿ ಜನರು ಎದುರಿಸುತ್ತಿರುವ ಪರದಾಟದ ಕುರಿತು ಸದನದಲ್ಲಿ ಚರ್ಚಿಸಿ ಪರಿಹಾರ ಒದಗಿಸಬೇಕು ಎಂದು ಕರ್ನಾಟಕ SC-ST ಮಹಿಳಾ ಸಬಲೀಕರಣ ಹೋರಾಟ ಸಮಿತಿ (ರಿ.), ಅಥಣಿ ಇದರ ರಾಜ್ಯ ಮಾಧ್ಯಮ ವಕ್ತಾರ ಮಹೇಶ್ ಎಮ್. ಶರ್ಮಾ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಮೂಲಕ ಹೇಳಿಕೆ ನೀಡಿರುವ ಅವರು, “ಅಥಣಿ ತಾಲೂಕಿನ ಸಮಸ್ಯೆಗಳ ಬಗ್ಗೆ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ನಿರಂತರವಾಗಿ ವರದಿಯಾಗುತ್ತಿದ್ದರೂ, ಅಧಿವೇಶನದ ವೇಳೆ ಚರ್ಚಿಸದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಾದರೂ ಸರ್ಕಾರ, ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ಗಂಭೀರವಾಗಿ ಸ್ಪಂದಿಸಬೇಕು” ಎಂದು ಆಗ್ರಹಿಸಿದ್ದಾರೆ.

ಅಧಿವೇಶನದಲ್ಲಿ ಚರ್ಚೆಯಾಗಬೇಕಾದ ಪ್ರಮುಖ ವಿಷಯಗಳು:
ಕಂದಾಯ ಇಲಾಖೆ ಸತಾಯಾಟ ಮತ್ತು ನ್ಯಾಯಾಲಯ ಆದೇಶ: ತಂದೆಯ ಆಸ್ತಿಯಲ್ಲಿ ಕಾನೂನುಬದ್ಧ ಪಾಲಿಗಾಗಿ ಹೋರಾಡಿ ನ್ಯಾಯಾಲಯದಿಂದ ಅಂತಿಮ ಆದೇಶ (Decree & Final Decree) ಹಾಗೂ ಜಮೀನಿನ ಕಬ್ಜಾ ಪಡೆದಿದ್ದರೂ, ಆರ್ಟಿಸಿ (RTC/ಉತಾರ)ಯಲ್ಲಿ ಹೆಸರು ದಾಖಲಿಸಲು ಕಂದಾಯ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಜಮೀನಿನ ವಿಸ್ತೀರ್ಣದ ವ್ಯತ್ಯಾಸ ಸರಿಪಡಿಸಲು ತೆಲಸಂಗ ನೆಮ್ಮದಿ ಕೇಂದ್ರಕ್ಕೆ ಹೋದರೆ ‘ಪೋಡಿ ಮುಗಿಯದೆ 11E ಸ್ಕೆಚ್ ನೀಡುವುದಿಲ್ಲ’ ಎನ್ನುತ್ತಾರೆ; ಇನ್ನೊಂದೆಡೆ ‘ಮೊದಲು 11E ಸ್ಕೆಚ್ ತನ್ನಿ’ ಎಂದು ಅಲೆದಾಡಿಸಲಾಗುತ್ತಿದೆ. ನ್ಯಾಯಾಲಯದ ಆದೇಶವಿರುವಾಗ ಇಲಾಖೆಯೇ ತಾಂತ್ರಿಕ ದೋಷ ಸರಿಪಡಿಸಿ ಉತಾರ ನೀಡಬೇಕು. ಚಿಕ್ಕೋಡಿ ಉಪವಿಭಾಗಾಧಿಕಾರಿ (AC) ಹಾಗೂ ಅಥಣಿ ತಹಶೀಲ್ದಾರರು ತಕ್ಷಣ ಮಧ್ಯಪ್ರವೇಶಿಸಿ ಇಲಾಖಾ ಹಂತದಲ್ಲೇ ಪೋಡಿ ಪೂರ್ಣಗೊಳಿಸಿ ಸಂತ್ರಸ್ತ ಮಹಿಳೆಯ ಹೆಸರನ್ನು ಆರ್ಟಿಸಿಯಲ್ಲಿ ದಾಖಲಿಸಬೇಕು.
ಜಿಲ್ಲೆ ಘೋಷಣೆ ಮತ್ತು ನಗರಸಭೆ ಮೇಲ್ದರ್ಜೆ: ಆಡಳಿತಾತ್ಮಕ ಅನುಕೂಲಕ್ಕಾಗಿ ಅಥಣಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸಬೇಕು ಹಾಗೂ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಬೇಕು. ಅಥಣಿಯಲ್ಲಿ ಜಿಲ್ಲಾ ಮಟ್ಟದ ಕಚೇರಿಗಳು, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗಳನ್ನು ನಿರ್ಮಿಸಬೇಕು.
ಸಂಚಾರ ಮತ್ತು ಸಂಪರ್ಕ ವ್ಯವಸ್ಥೆ: ಸಂಚಾರ ದಟ್ಟಣೆ ನಿವಾರಿಸಲು ಬೈಪಾಸ್ ರಸ್ತೆ ಮತ್ತು ಅಗತ್ಯ ಕಡೆ ಓವರ್ ಬ್ರಿಡ್ಜ್ ನಿರ್ಮಿಸಬೇಕು. ಪ್ರತ್ಯೇಕ ಟ್ರಾಫಿಕ್ ಪೊಲೀಸ್ ಠಾಣೆ ಮಂಜೂರು ಮಾಡಿ, ವೃತ್ತಗಳಲ್ಲಿರುವ ಟ್ರಾಫಿಕ್ ಸಿಗ್ನಲ್ಗಳನ್ನು ಚಾಲನೆಗೊಳಿಸಬೇಕು ಹಾಗೂ ಉಳಿದ ಕಡೆ ಹೊಸ ಸಿಗ್ನಲ್ ಅಳವಡಿಸಬೇಕು. ಅಥಣಿ ಮುರುಗೇಂದ್ರ ಶಿವಯೋಗಿಗಳ ರೈಲ್ವೆ ನಿಲ್ದಾಣ ಮತ್ತು ಸಿದ್ಧೇಶ್ವರ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಬೇಕು.
ಕೆರೆ ಅಭಿವೃದ್ಧಿ ಮತ್ತು ಮಾರುಕಟ್ಟೆ ಶಿಸ್ತು: ಅಥಣಿ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ಕೆರೆಯ ಮಧ್ಯಭಾಗದಲ್ಲಿ ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ಎಂ.ಜಿ. ಮಾರುಕಟ್ಟೆಯಲ್ಲಿ ಸಾರ್ವಜನಿಕರು ಮತ್ತು ಮಹಿಳೆಯರಿಗೆ ಶೌಚಾಲಯ ನಿರ್ಮಿಸಬೇಕು. ಬೀದಿಬದಿ ವ್ಯಾಪಾರಸ್ಥರು ಹಾಗೂ ಬೈಕ್ ನಿಲುಗಡೆಗೆ ಪ್ರತ್ಯೇಕ ಗೆರೆ ಗುರುತಿಸಿ, ನಿಯಮ ಮೀರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ಶಿವಯೋಗಿ ನಗರ ಮತ್ತು ಗ್ರಾಮೀಣ ಅಭಿವೃದ್ಧಿ: ಶಿವಯೋಗಿ ನಗರವನ್ನು ಅಧಿಕೃತವಾಗಿ ಪುರಸಭೆ ವ್ಯಾಪ್ತಿಗೆ ಸೇರಿಸಬೇಕು. ಅಲ್ಲಿನ ಮೋಟಗಿ ತೋಟ ಶಾಲೆಯಲ್ಲಿ 9 ಮತ್ತು 10ನೇ ತರಗತಿ ಆರಂಭಿಸಬೇಕು, ಶಾಲೆಯ ಬಳಿ ರಸ್ತೆ ಬ್ರೇಕ್ (Road Breaker) ಅಳವಡಿಸಬೇಕು ಹಾಗೂ ಅಗತ್ಯ ಕಡೆ ಬೀದಿದೀಪ ಮತ್ತು ರಸ್ತೆ ನಿರ್ಮಿಸಬೇಕು. ಯಲಡಗಿ ಗ್ರಾಮದಿಂದ ಮುಖ್ಯ ರಸ್ತೆಯವರೆಗೆ, ಅಡಹಳಟ್ಟಿ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮಗಳು ಹಾಗೂ ಅಥಣಿ ಪಟ್ಟಣದ ಗಲ್ಲಿಗಳಲ್ಲಿ ರಸ್ತೆ ಮತ್ತು ಗಟರ್ (ಚರಂಡಿ) ವ್ಯವಸ್ಥೆ ಕಲ್ಪಿಸಬೇಕು.
ಈ ಬೇಡಿಕೆಗಳನ್ನು ಡಿಸೆಂಬರ್ 2ರಿಂದ ಆರಂಭವಾಗುವ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರು, ಮುಖ್ಯಮಂತ್ರಿ, ಕಂದಾಯ ಸಚಿವರು, ಕೇಂದ್ರ ಮತ್ತು ರಾಜ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಚಿಕ್ಕೋಡಿ ಸಂಸದರು, ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರರಿಗೆ ಮನವಿ ಮಾಡಲಾಗುತ್ತಿದೆ ಎಂದು ಮಹೇಶ್ ಎಮ್. ಶರ್ಮಾ ತಿಳಿಸಿದ್ದಾರೆ.

More Stories
ರೇಷನ್ ವಿತರಣೆಯ ಅವಧಿ ಅಂತ್ಯದ ಹಂತದಲ್ಲಿದ್ದರೂ ಸರ್ವರ್ ಸ್ಲೋ; ಫಲಾನುಭವಿಗಳ ಪರದಾಟ
ಅಂಗವೈಕಲ್ಯವನ್ನು ಮೆಟ್ಟಿ ನಿಂತು ರಾಜ್ಯಮಟ್ಟಕ್ಕೆ ಆಯ್ಕೆಯಾದ ಸಿದ್ದೇವಾಡಿ ವಿದ್ಯಾರ್ಥಿನಿ ಸೃಷ್ಟಿ ನಂದಗಾಂವೆ: ಶಾಸಕ ರಾಜು ಕಾಗೆ ಅವರಿಂದ ಸನ್ಮಾನ
ಅಥಣಿ: ಉರ್ದು ಕ್ಲಸ್ಟರ್ ಪ್ರತಿಭಾ ಕಾರಂಜಿಯಲ್ಲಿ ಅಬುಲ್ ಕಲಾಂ ಶಾಲೆಗೆ ಸತತ ಎರಡನೇ ಬಾರಿ ಪ್ರಥಮ ಸ್ಥಾನ