ಭಟ್ಕಳ: ಮುರ್ಡೇಶ್ವರ ಮತ್ತು ಭಟ್ಕಳ ಭಾಗದಲ್ಲಿ ಅಕ್ರಮ ಗಾಂಜಾ ಮಾರಾಟ, ಗಾಂಜಾ ಸೇವನೆ ಹಾಗೂ ಗೋ ಕಳವು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಉದ್ಯಮಿ ಹಾಗೂ ಸಮಾಜಸೇವಕರಾದ ಮಾಸ್ತಪ್ಪ ನಾಯ್ಕ (ಬಲಸೆ) ಅವರು ಡಿವೈಎಸ್ಪಿ ಗಿರೀಶ ಅವರ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇತ್ತೀಚೆಗೆ ಮುರ್ಡೇಶ್ವರ ಭಾಗದ ಬೈಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಗಾಂಜಾ ಸೇವಿಸಿದ್ದ ಅಪ್ರಾಪ್ತ ವಯಸ್ಸಿನ ಕೆಲವು ಬಾಲಕರು ಹಿಂದೂ ಮನೆಗಳ ಮೇಲೆ ಕಲ್ಲೆಸೆದು ಕಿಟಕಿ–ಬಾಗಿಲುಗಳನ್ನು ಒಡೆದು ನಷ್ಟಪಡಿಸಿದ ಘಟನೆ ನಡೆದಿತ್ತು. ಸ್ಥಳೀಯ ಯುವಕರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ಈ ರೀತಿಯ ಘಟನೆಗಳು ಕೋಮು ಭಾವನೆಗಳನ್ನು ಕೆರಳಿಸಿ ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಗಾಂಜಾ ಸೇವನೆಗೆ ಅಪ್ರಾಪ್ತ ವಿದ್ಯಾರ್ಥಿಗಳು ಒಳಗಾಗುತ್ತಿರುವುದು ಆತಂಕಕಾರಿಯಾಗಿದೆ. ಅವರಿಗೆ ಗಾಂಜಾ ಎಲ್ಲಿಂದ ದೊರೆಯುತ್ತಿದೆ? ಅಪ್ರಾಪ್ತರಿಗೆ ಬೈಕ್ ಓಡಿಸಲು ಪ್ರೇರೇಪಿಸಿದವರು ಯಾರು? ವಾಹನ ನೀಡಿದವರ ಮೇಲೂ ಪ್ರಕರಣ ದಾಖಲಿಸಬೇಕು. ಕೋಮುಗಲಭೆಗೆ ಪಿತೂರಿ ನಡೆಸಿ ಉತ್ತೇಜನ ನೀಡಿದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಇದಲ್ಲದೆ, ಭಟ್ಕಳ ತಾಲೂಕಿನ ಸಮುದ್ರತೀರ, ನಿರ್ಜನ ಪ್ರದೇಶಗಳು ಹಾಗೂ ಕಾಲೇಜು ಕ್ಯಾಂಪಸ್‌ಗಳಲ್ಲಿ ಗಾಂಜಾ ಸೇವನೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಇದನ್ನು ಸಂಪೂರ್ಣ ತಡೆಗಟ್ಟಲು ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ಕೈಗೊಳ್ಳಬೇಕು. ತಾಲೂಕಿನಾದ್ಯಂತ ರಾತ್ರಿ ವೇಳೆ ಗೋ ಕಳವು ಮತ್ತು ಅಕ್ರಮ ಗೋಸಾಗಾಟ ಪ್ರಕರಣಗಳು ದಿನನಿತ್ಯ ಬೆಳಕಿಗೆ ಬರುತ್ತಿದ್ದು, ಸಂಬಂಧಪಟ್ಟವರ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವ ನಾಯ್ಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

More Stories
ಎಐಟಿಎಂನಲ್ಲಿ ವಿಟಿಯು ಅಂತರ ಕಾಲೇಜು ಫುಟ್ಬಾಲ್ ಪಂದ್ಯಾವಳಿ ಚಾಲನೆ
ತೇಜಸ್ವಿ ನಾಯ್ಕರಿಗೆ ಕೇಂದ್ರದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಪದೋನ್ನತಿ
ಬೈಲೂರಿನಲ್ಲಿ ಭಗವದ್ಗೀತೆಯ 3ನೇ ಅಧ್ಯಾಯ ಸಮರ್ಪಣೆ, ಮಾತೃವಂದನೆ ಕಾರ್ಯಕ್ರಮ ಯಶಸ್ವಿ