March 4, 2026

ಮಧ್ಯಪ್ರಾಚ್ಯ ಉದ್ವಿಗ್ನತೆ ಭೀತಿ: ಭಟ್ಕಳದಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ ದೀರ್ಘ ಸಾಲು

ಭಟ್ಕಳ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಇಂಧನ ಕೊರತೆ ಹಾಗೂ ಬೆಲೆ ಏರಿಕೆಯ ಭೀತಿಯಿಂದ ಭಟ್ಕಳದ ಹಲವು ಪೆಟ್ರೋಲ್ ಬಂಕ್‌ಗಳಲ್ಲಿ ವಾಹನಗಳ ದೀರ್ಘ ಸಾಲು ಕಂಡುಬಂತು.
ಸ್ಥಳೀಯರು ತಮ್ಮ ವಾಹನಗಳಿಗೆ ಪೆಟ್ರೋಲ್ ತುಂಬಿಸುವುದರ ಜೊತೆಗೆ ಮುನ್ನೆಚ್ಚರಿಕೆಯಾಗಿ ಬಾಟಲಿಗಳಲ್ಲಿಯೂ ಪೆಟ್ರೋಲ್ ಸಂಗ್ರಹಿಸುತ್ತಿರುವ ದೃಶ್ಯಗಳು ಕಂಡುಬಂದವು. ಕೆಲವು ಕಡೆಗಳಲ್ಲಿ ರಾತ್ರಿ ಹೊತ್ತಿಗೂ ವಾಹನಗಳ ಸಂಚಾರ ಹಾಗೂ ಪೆಟ್ರೋಲ್ ತುಂಬಿಸಿಕೊಳ್ಳಲು ಆಗಮಿಸಿದವರ ಸಂಖ್ಯೆ ಹೆಚ್ಚಾಗಿರುವುದು ಗಮನ ಸೆಳೆಯಿತು.


ಅಮೆರಿಕಾ ಮತ್ತು ಇಸ್ರೇಲ್ ದೇಶಗಳು ಇರಾನ್ ಮೇಲೆ ನಡೆಸಿದ ದಾಳಿಗಳು ಹಾಗೂ ಅದಕ್ಕೆ ಪ್ರತಿಯಾಗಿ ಇರಾನ್ ಕೈಗೊಂಡ ಕ್ರಮಗಳ ಪರಿಣಾಮವಾಗಿ ಜಾಗತಿಕ ಕಚ್ಚಾ ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಅಂತರರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ, ಪರ್ಶಿಯನ್ ಕೊಲ್ಲಿಯನ್ನು ಓಮಾನ್ ಕೊಲ್ಲಿಯೊಂದಿಗೆ ಸಂಪರ್ಕಿಸುವ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹೋರ್ಮುಜ್ ಕಣಿವೆಯ ಸಮುದ್ರ ಮಾರ್ಗ ಸಂಚಾರಕ್ಕೆ ಇರಾನ್ ನಿರ್ಬಂಧ ಹೇರಿರುವುದಾಗಿ ತಿಳಿದುಬಂದಿದೆ. ಜಗತ್ತಿನ ದೊಡ್ಡ ಪ್ರಮಾಣದ ಕಚ್ಚಾ ತೈಲ ಸಾಗಣೆ ಇದೇ ಕಿರಿದಾದ ಸಮುದ್ರ ಮಾರ್ಗದ ಮೂಲಕ ಸಾಗುವುದರಿಂದ ಇಲ್ಲಿ ಉಂಟಾಗುವ ಯಾವುದೇ ಅಡಚಣೆ ಜಾಗತಿಕ ಇಂಧನ ಮಾರುಕಟ್ಟೆಗೆ ತಕ್ಷಣದ ಪರಿಣಾಮ ಬೀರುವ ಸಾಧ್ಯತೆ ಇದೆ.


ಈ ಬೆಳವಣಿಗೆಯ ಬಳಿಕ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 85 ಡಾಲರ್ ಮೀರಿದ್ದು, ಇದು ಸತತ ಮೂರನೇ ದಿನದ ಏರಿಕೆಯಾಗಿರುವುದಾಗಿ ವರದಿಯಾಗಿದೆ.
ಇಂಧನ ತಜ್ಞರ ಪ್ರಕಾರ, ಆತಂಕದಿಂದ ಜನರು ಹೆಚ್ಚಾಗಿ ಪೆಟ್ರೋಲ್ ಖರೀದಿಸುವುದು ಅಥವಾ ಸಂಗ್ರಹಿಸುವುದು ಸ್ಥಳೀಯ ಮಟ್ಟದಲ್ಲಿ ಕೃತಕ ಕೊರತೆಯನ್ನು ಉಂಟುಮಾಡುವ ಸಾಧ್ಯತೆ ಇದೆ. ಸದ್ಯಕ್ಕೆ ಇಂಧನ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಕಂಡುಬಂದಿಲ್ಲದಿದ್ದರೂ ಮಧ್ಯಪ್ರಾಚ್ಯದ ಬೆಳವಣಿಗೆಗಳು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕದ ವಾತಾವರಣ ಸೃಷ್ಟಿಸಿವೆ.

About The Author

error: Content is protected !!