October 26, 2026

ಸರ್ಪನಕಟ್ಟೆಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ; 51 ವಿದ್ಯಾರ್ಥಿಗಳಿಗೆ ‘ಸುಜ್ಞಾನ ನಿಧಿ’ ವಿತರಣೆ

ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಭಟ್ಕಳ ತಾಲೂಕು, ಸರ್ಪನಕಟ್ಟೆ ವಲಯ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಭಾ ಕಾರ್ಯಕ್ರಮ ಅತ್ಯಂತ ಭಕ್ತಿಭಾವದಿಂದ ಜರುಗಿತು.

ಸಮಿತಿಯ ಅಧ್ಯಕ್ಷ ಆನಂದ ರಾಮಾ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ೧೦೦ಕ್ಕೂ ಹೆಚ್ಚು ಶ್ರದ್ಧಾಳುಗಳು ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿಸಿದರು.

ಮಾಜಿ ಶಾಸಕ ಸುನಿಲ್ ನಾಯ್ಕ್ ಚಾಲನೆ: ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಸರ್ಪನಕಟ್ಟೆ ವಲಯದ ೫೧ ವಿದ್ಯಾರ್ಥಿಗಳಿಗೆ ‘ಸುಜ್ಞಾನ ನಿಧಿ’ ಶಿಷ್ಯವೇತನ ವಿತರಿಸಿ ಮಾತನಾಡಿದ ಮಾಜಿ ಶಾಸಕ ಸುನಿಲ್ ಬಿ. ನಾಯ್ಕ್, “ಸಾಮೂಹಿಕ ಸತ್ಯನಾರಾಯಣ ಪೂಜೆ ಅತ್ಯಂತ ಶ್ರೇಷ್ಠ ಹಾಗೂ ಸೌಹಾರ್ದತೆಯ ಪ್ರತೀಕ. ಡಾ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಧರ್ಮಸ್ಥಳ ಕ್ಷೇತ್ರವು ರಾಜ್ಯದ ಧಾರ್ಮಿಕ ಹಾಗೂ ಸಾಂಸ್ಥಿಕ ಸಬಲೀಕರಣಕ್ಕೆ ನೀಡಿದ ಕೊಡುಗೆ ಅಪಾರ. ಸ್ವಸಹಾಯ ಸಂಘಗಳು ಮಹಿಳೆಯರು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಮುನ್ನಡೆಯಲು ಪ್ರಮುಖ ಪ್ರೇರಣೆಯಾಗಿವೆ” ಎಂದು ಶ್ಲಾಘಿಸಿದರು.

ಉತ್ತರ ಕನ್ನಡ ಜಿಲ್ಲಾ ನಿರ್ದೇಶಕಿ ನಾಗರತ್ನಾ ಹೆಗಡೆ ಮಾತನಾಡಿ, “ಧರ್ಮಾಚರಣೆ ಮತ್ತು ಒಗ್ಗಟ್ಟಿಗೆ ಸಾಮೂಹಿಕ ಪ್ರಾರ್ಥನೆಗಳು ಸಹಕಾರಿ. ಕಳೆದೆರಡು ದಶಕಗಳಲ್ಲಿ ಯೋಜನೆ ಮೂಲಕ ಜಿಲ್ಲೆಯ ಮಹಿಳೆಯರು ಬ್ಯಾಂಕಿಂಗ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಬಲರಾಗಿದ್ದಾರೆ. ಯುವಜನತೆಯು ಇಂತಹ ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕು” ಎಂದು ಕರೆ ನೀಡಿದರು.

ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟ ಹಾಗೂ ಶಿಕ್ಷಕ ಸುರೇಶ ಮುರ್ಡೇಶ್ವರ ಧಾರ್ಮಿಕ ಉಪನ್ಯಾಸ ನೀಡಿ, ಮಕ್ಕಳಿಗೆ ಬಾಲ್ಯದಲ್ಲೇ ಧಾರ್ಮಿಕ ಸಂಸ್ಕಾರ ಮತ್ತು ಧರ್ಮದ ಅರಿವು ಮೂಡಿಸುವ ಅಗತ್ಯತೆಯನ್ನು ಪ್ರತಿಪಾದಿಸಿದರು.

ಉಪಸ್ಥಿತಿ ಮತ್ತು ನಿರ್ವಹಣೆ: ಕಾರ್ಯಕ್ರಮದಲ್ಲಿ ಕಿರುಹೊಳೆ ದೇವಸ್ಥಾನದ ಅಧ್ಯಕ್ಷ ಸುಭಾಷ ಕಾಮತ್, ಉಪಾಧ್ಯಕ್ಷ ಈಶ್ವರ ಮೊಗೇರ, ನ್ಯಾಯವಾದಿ ಪಾಂಡು ನಾಯ್ಕ, ಯೋಜನಾಧಿಕಾರಿ ಲತಾ ಬಂಗೇರ ಹಾಗೂ ಗೊರಟೆ ಒಕ್ಕೂಟದ ಅಧ್ಯಕ್ಷೆ ಯಮುನಾ ಮಾದೇವ ನಾಯ್ಕ ಉಪಸ್ಥಿತರಿದ್ದರು.

ಜ್ಯೋತಿ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಸೇವಾ ಪ್ರತಿನಿಧಿ ಪ್ರೇಮ ಸ್ವಾಗತಿಸಿದರು. ಸರ್ಪನಕಟ್ಟೆ ವಲಯದ ಮೇಲ್ವಿಚಾರಕ ಹರೀಶ ಖಾರ್ವಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

About The Author

error: Content is protected !!