March 31, 2026

ಹಿಲ್ಲೂರು ಯಕ್ಷ ಮಿತ್ರ ಪ್ರಶಸ್ತಿ ಪ್ರದಾನ, ಯಕ್ಷಗಾನ, ಗಾನ ವೈಭವ

ಶಿರಸಿ: ಇಲ್ಲಿನ ಹಿಲ್ಲೂರು ಯಕ್ಷಮಿತ್ರ ಬಳಗ ಹಮ್ಮಿಕೊಂಡ ಕಾರ್ಯಕ್ರಮವು ಗಾನ ವೈಭವ, ಪ್ರಶಸ್ತಿ ಪ್ರದಾನ, ಯಕ್ಷಗಾನ ಪ್ರದರ್ಶನದ ಮೂಲಕ ಅರ್ಥಪೂರ್ಣವಾಗಿ ನಡೆಯಿತು. ಇಡೀ ಸಮಾರಂಭ ಈ ನೆಲದ ಕಲೆಯ ಉಳಿವು, ಜಾಗೃತಿ, ಅಭಿನಂದನೆ, ಮುಂದಿನ ಪೀಳಿಗೆಗೆಗ ಹಸ್ತಾಂತರಿಸುವ ಕುರಿತು ಸಮಾಲೋಚನೆಯ ವೇದಿಕೆಯಾಗಿಯೂ ಗಮನ ಸೆಳೆಯಿತು.
ನಗರದ ಟಿಎಂಎಸ್ ಸಭಾಂಗದಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಲ್ಲೂರು ಯಕ್ಷ ಮಿತ್ರ ಪ್ರಶಸ್ತಿಯನ್ನು ಯಕ್ಷಗಾನದ‌ ಮೇರು ಭಾಗವತ ಸುರೇಶ ಶೆಟ್ಟಿ ಶಂಕರನಾರಾಯಣ ಅವರಿಗೆ ಪ್ರದಾನ ಮಾಡಲಾಯಿತು. ಸ್ಮರಣಿಕೆ, ಹತ್ತು ಸಾವಿರ ರೂ. ನಗದು, ಶಾಲು, ಸನ್ಮಾನ ಪತ್ರ ಒಳಗೊಂಡ ಗೌರವವನ್ನು ನೀಡಿ ಅಭಿನಂದಿಸಲಾಯಿತು.
ಗೌರವ ಸಮ್ಮಾನವನ್ನು ಹಿರಿಯ ಕಲಾವಿದ ಕೃಷ್ಣ ಯಾಜಿ ಬಳಕೂರು ಹಾಗೂ ಅವರ ಪತ್ನಿ ಶಾಂತಾ ಯಾಜಿ ಅವರಿಗೆ ೧೦ ಸಾವಿರ ರೂ. ನಗದು ಸನ್ಮಾನ ಪತ್ರ ನೀಡುವ ಮೂಲಕ ಗೌರವಿಸಲಾಯಿತು. ಇದೇ ವೇಳೆ ಪ್ರಾಣಿ ಪ್ರಿಯ, ಅನಾಥ ಪ್ರಾಣಿಗಳ ರಕ್ಷಕ ರಾಜೇಂದ್ರ ಶಿರಸಿಕರ್ ಅವರಿಗೆ ೫ ಸಾವಿರ ರೂ. ಪ್ರೋತ್ಸಾಹಕ ಬಹುಮಾನ ನೀಡಿ ಪುರಸ್ಕರಿಸಲಾಯಿತು.


ಪ್ರಶಸ್ತಿ ಪ್ರದಾನದಲ್ಲಿ ಭಾಗವಹಿಸಿದ
ಎಂಇಎಸ್ ಅಧ್ಯಕ್ಷ‌ ಜಿ.ಎಂ.ಹೆಗಡೆ‌ ಮುಳಖಂಡ, ಯಕ್ಷಗಾನ ದಂಥ ಕಲೆಯ‌ಉಳಿವಿಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಧಾರವಾಡ ಹಾಲು ಒಕ್ಕೂಟ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಹಿಲ್ಲೂರು ಭಾಗವತರು ಯಕ್ಷಗಾನ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಶ್ಲಾಘಿಸಿದರು.


ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ,
ಯಲ್ಲಾಪುರ ಟಿಎಂಎಸ್ ಉಪಾಧ್ಯಕ್ಷ
ನರಸಿಂಹ ಕೋಣೆಮನೆ, ಕೆಡಿಸಿಸಿ ಮಾಜಿ ಆರ್.ಜಿ.ಭಾಗವತ, ಚೈತನ್ಯ ಪಿಯು ಅಧ್ಯಕ್ಷ
ಕೆ.ಬಿ.ಲೋಕೇಶ ಹೆಗಡೆ ಪ್ರಶಸ್ತಿ‌ ಪ್ರದಾನ‌ ಸಮಾರಂಭದಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ವಿದ್ವಾನ್ ದತ್ತಮೂರ್ತಿ ಭಟ್ಟ ಶಿವಮೊಗ್ಗ, ಪತ್ರಕರ್ತ ಗಿರಿಧರ‌ ಕಬ್ನಳ್ಳಿ ಮಾತನಾಡಿದರು. ಅಭಿನಂದನಾ‌ ನುಡಿ ಆಡಿದ ವಿ.ದತ್ತಮೂರ್ತಿ ಭಟ್ಟ, ಶಾಸಕರ ಅನುದಾನದಲ್ಲಿ ಶಾಲಾ‌ ಮಕ್ಕಳಿಗೆ ಯಕ್ಷಗಾನ ಕಲಿಕೆ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿದೆ. ಯಕ್ಷಗಾನದಿಂದ ಆಂಗಿಕ, ಸಾತ್ವಿಕ, ಪೌರಾಣಿಕ ಎಲ್ಲ‌ ಸಂಗತಿಗಳು ಇವೆ. ಉತ್ತರ ಕನ್ನಡದಲ್ಲೂ ಶಾಸಕರ ಅನುದಾನ ಅಡಿಯಲ್ಲಿ ಮಕ್ಕಳಿಗೆ ಶಾಲೆಯಲ್ಲಿ ಯಕ್ಷಗಾನ ಪಾಠದ ಕಾರ್ಯ ಆಗಬೇಕು ಎಂದರು.
ಅಕಾಡೆಮಿಗಳು ಕಲಾವಿದರ ಜೊತೆ‌ ಕೈ ಜೋಡಿಸಬೇಕು. ಯಕ್ಷಗಾನದ‌ ಕಲೆ, ಕಲಾವಿದರ ಜೊತೆ ನಿಲ್ಲಬೇಕು ಎಂದರು.


ಬಳಗದ ರಮ್ಯ ರಾಮಕೃಷ್ಣ, ಗುರುಪಾದ ಭಟ್ಟ, ಚಿತ್ರಾ ಹೆಗಡೆ, ರವಿ‌ ಮುರೂರು, ಯಾಜಿ ಅವರ ಪತ್ನಿ ಶಾಂತಾ ಯಾಜಿ ಇತರರು ಇದ್ದರು.
ವಿವೇಕ ಹೆಗಡೆ ಸ್ವಾಗತಿಸಿದರು. ರಾಮಕೃಷ್ಣ‌ ಹೆಗಡೆ ಹಿಲ್ಲೂರು ಪ್ರಸ್ತಾವಿಕ ಮಾತನಾಡಿದರು. ನಾಗರಾಜ‌ ಕವಲಕ್ಕಿ ನಿರ್ವಹಿಸಿದರು.

ಮನತಣಿಸಿದ ಗಾನ ವೈಭವ;
ಗಮನ ಸೆಳೆದ ಯಕ್ಷಗಾನ:
ಇದೇ ಸಂದರ್ಭದಲ್ಲಿ ಸಂಘಟಿಸಲಾಗಿದ್ದ ಪೌರಾಣಿಕ ಪ್ರಸಂಗ ಕವಿ ಹಳೇಮಕ್ಕಿ ರಾಮ ವಿರಚಿತ ಕೃಷ್ಣಾರ್ಜುನ ಕಾಳಗ ಯಕ್ಷಗಾನ ಕಲಾಸಕ್ತರ‌ಮನ ತಣಿಸಿತು. ಹಿರಿಯ ಕಲಾವಿದ ಬಳಕೂರು ಕೃಷ್ಣಯಾಜಿ 70 ಇಳಿ ವಯಸ್ಸಿನಲ್ಲೂ ಅರ್ಜುನ ಪಾತ್ರಧಾರಿಯಾಗಿ ಗಂಭೀರವಾಗಿ ರಂಗವೇರಿದರೆ, ವಿನಯ ಬೇರೊಳ್ಳಿ ಕೃಷ್ಣನಾಗಿ‌ ಮಿಂಚಿದರು. ಸುಭದ್ರೆಯಾಗಿ ಅಶ್ವಿನಿ ಕೊಂಡದಕುಳಿ, ದಾರುಕನಾಗಿ ಶ್ರೀಧರ ಹೆಗಡೆ ಚಪ್ಪರಮನೆ, ಭೀಮನಾಗಿ ಹಿಲ್ಲೂರು ಮಂಜುನಾಥ
ಅಭಿನಯದಲ್ಲಿ‌‌ ಮಿಂಚಿದರು. ಅಭಿಮನ್ಯುವಾಗಿದ್ದ ಯಕ್ಷಕುವರಿ ಸನ್ನಿಧಿ ಭಟ್ಟ ಹುತ್ಗಾರ ಬಾಲ ಅಭಿನಯದ ಮೂಲಕ ಕಿಕ್ಕಿರಿದ ಸಭೆಯ ಕರತಾಡನಕ್ಕೆ ಭಾಜನರಾದಳು.
ಹಿರಿಯ ಭಾಗವತ ಸುರೇಶ ಶೆಟ್ಟಿ.ಎಸ್ ಮತ್ತು ಪ್ರಸಿದ್ಧ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರು ಭಾಗವತಿಕೆಯಲ್ಲಿ, ಮದ್ದಲೆಯಲ್ಲಿ ನಾದಶಂಕರ ಶಂಕರ ಭಾಗವತ ಯಲ್ಲಾಪುರ, ಚಂಡೆ ವಾದನದಲ್ಲಿ ಪ್ರಸನ್ನ ಭಟ್ಟ ಹೆಗ್ಗಾರ, ಸಾಂತೂರು ಗಜಾನನ ಸಹಕಾರ ನೀಡಿದರು.
ಪ್ರಶಸ್ತಿ ಕಾರ್ಯಕ್ರಮದ ಪೂರ್ವದಲ್ಲಿ ನಡೆದ ಗಾನ ವೈಭವದಲ್ಲಿ ಶ್ರೀಪಾದ ಹೆಗಡೆ ಬಾಳೆಗದ್ದೆ, ಗಜಾನನ ಭಟ್ಟ ತುಳಗೇರಿ, ಸೃಜನ ಹೆಗಡೆ ಸಾಗರ ದ್ವಂದ್ವವಾಗಿ ಹಾಗೂ ಏಕ ವ್ಯಕ್ತಿಯಾಗಿ ಯಕ್ಷಗಾನದ ಶೃಂಗಾರರಸ, ವೀರರಸ, ಹಾಸ್ಯ, ಪಿಠೀಕೆ ಹೀಗೆ ವಿವಿಧ ಪ್ರಸಂಗದ ಪದ್ಯಗಳನ್ನು ಹಾಡಿದರೆ, ಮದ್ದಲೆಯಲ್ಲಿ ಶಂಕರ ಭಾಗವತ ಯಲ್ಲಾಪುರ, ಮಂಜುನಾಥ ಗುಡ್ಡೆದಿಂಬ, ಚಂಡೆ ವಾದನದಲ್ಲಿ ಪ್ರಸನ್ನ ಹೆಗ್ಗಾರ, ಗಜಾನನ ಸಾಂತೂರು ಪಾಲ್ಗೊಂಡು ವಾದನದ ಮೇಲಿನ ಕೈಚಳಕ ತೋರಿದರು. ನಾಗರಾಜ ಜೋಶಿ ಪ್ರಸಂಗ ಹಾಗೂ ಪದ್ಯಗಳ ವಿವರಣೆ ನೀಡಿದರು.


*ಯಕ್ಷಗಾನಕ್ಕೆ ಇನ್ನಷ್ಟು ಸೇವೆ ನೀಡಬೇಕು‌ ಎಂಬ ಕಾರಣಕ್ಕೆ ಸಂಸ್ಥೆ ಸ್ಥಾಪಿಸಲಾಗಿದೆ. ಈ ಸಂಸ್ಥೆ ಗೆ ಮುಂದೆ‌ ನಿಧಿ ಸಂಗ್ರಹಿಸುವ ಬಗ್ಗೆ ತೀರ್ಮಾನಿಸಲಾಗಿದೆ. ದಾನಿಗಳು ನೀಡುವ ಒಂದು ರೂಪಾಯಿ ಕೂಡ ಸದ್ಭಳಕೆ ಆಗಲಿದೆ.
ರಾಮಕೃಷ್ಣ ಹೆಗಡೆ ಹಿಲ್ಲೂರು, ಭಾಗವತ*

ಅಭಿಮನ್ಯುವಾಗಿ ಮಿಂಚಿದ‌ ಬಾಲೆ!
ಇಲ್ಲಿನ ಹುತಗಾರ ಸನ್ನಿಧಿ ಭಟ್ ಕೃಷ್ಣಾರ್ಜುನದ ಅಭಿಮನ್ಯುವಾಗಿ‌ ಮಿಂಚಿದಳು. ಆಟವಾಡುತ್ತಿದ್ದ ಅಭಿಮನ್ಯುವನ್ನು ತಾಯಿ ಕರೆದು ಅಪ್ಪ ಅರ್ಜುನನಲ್ಲಿಗೆ ಕರೆದೋಯ್ದು ಗಯನ ಬಿಡುಗಡೆಗೆ ಕೇಳಿಕೊಳ್ಳುವಳು. ಆದರೆ ಅಭಿಮನ್ಯು‌ ಗಯನನ್ನು ರಕ್ಷಿಸುವಂತೆ ಹೇಳುವನು. ಅಪ್ಪನ ನಲ್ಲಿ ಲಾಲಿಸಿ ಕೇಳೆನ್ನ‌ ಮಾತ ಪದ್ಯದಿಂದಲೇ ತನ್ನ ಲಾಲಿತ್ಯ ಪೂರ್ಣ ಅಭಿನಯದ ಮೂಲಕ ಈಕೆ ಹೊಸ ಭರವಸೆ ಮೂಡಿಸಿದಳು.

About The Author

error: Content is protected !!