April 18, 2026

ಗೋ ಕಳ್ಳರ ಬಾರಿಹೈಡ್ರಾಮ: ಗ್ರಾಮಸ್ಥರ ಜಾಗೃತಿಗೆ ಆರೋಪಿಗಳು ಪರಾರಿ

ಭಟ್ಕಳ: ತಾಲೂಕಿನ ಜಾಲಿ ತಲಗೇರಿಯ ವಿವೇಕಾನಂದ ನಗರದಲ್ಲಿ ಗೋ ಕಳ್ಳರ ತಂಡದ ಬಾರಿಹೈಡ್ರಾಮ ಮಧ್ಯರಾತ್ರಿ ಬೆಳಕಿಗೆ ಬಂದಿದ್ದು, ಗ್ರಾಮಸ್ಥರ ಎಚ್ಚರಿಕೆಯಿಂದ ಕಳ್ಳತನ ಯತ್ನ ವಿಫಲವಾಗಿದೆ.


ಮಧ್ಯರಾತ್ರಿ ಸುಮಾರು 3:45ರ ವೇಳೆ ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಗೋವನ್ನು ಕದ್ದೊಯ್ಯಲು ಯತ್ನಿಸುತ್ತಿದ್ದಾಗ ಸ್ಥಳೀಯರು ಅನುಮಾನಗೊಂಡು ತಡೆದಿದ್ದಾರೆ.
ಈ ವೇಳೆ ಆರೋಪಿಗಳು ಕಾರನ್ನು ಬಿಟ್ಟು ಪರಾರಿಯಾಗಿದ್ದು, ವಾಹನದಲ್ಲಿದ್ದ ಮೊಬೈಲ್ ಫೋನ್ ಸ್ಥಳದಲ್ಲೇ ಸಿಕ್ಕಿದೆ.


ಘಟನೆಯ ನಂತರ ಆರೋಪಿಗಳು ಸಮೀಪದ ಅರಣ್ಯ ಪ್ರದೇಶದಲ್ಲಿ ಅಡಗಿ, ಮತ್ತೊಂದು ತಂಡವನ್ನು ಕರೆಸಿಕೊಂಡಿರುವುದಾಗಿ ತಿಳಿದುಬಂದಿದೆ. ಬಳಿಕ ಕರಿಕಲ್ ರಸ್ತೆಯ ಖಾಸಗಿ ಬ್ಯಾಂಕ್ ಹಿಂಭಾಗದಲ್ಲಿ ಅವಿತುಕೊಂಡಿದ್ದ ಆರೋಪಿಗಳನ್ನು ಹಿಡಿಯಲು ಪೊಲೀಸರು ಹಾಗೂ ಗ್ರಾಮಸ್ಥರು ಮುಂದಾದಾಗ, ಬೈಕ್ ಬಿಟ್ಟು ಮತ್ತೆ ಪರಾರಿಯಾಗಿದ್ದಾರೆ.


ಗ್ರಾಮಸ್ಥರು ಆರೋಪಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದಿನನಿತ್ಯ ಸಾಕಿ ಬೆಳೆಸುತ್ತಿರುವ ಗೋವುಗಳನ್ನು ಕಳ್ಳತನ ಮಾಡಲು ಯತ್ನಿಸಿರುವುದು ಖಂಡನೀಯ ಎಂದು ತಿಳಿಸಿದ್ದಾರೆ. ಆರೋಪಿಗಳು ನಕಲಿ ನಂಬರ್ ಪ್ಲೇಟ್ ಬಳಸಿ ಗುರುತು ಮರೆಮಾಚಲು ಯತ್ನಿಸಿರುವುದು ಸಹ ಬೆಳಕಿಗೆ ಬಂದಿದೆ.
ಇದಲ್ಲದೆ, ಆರೋಪಿಗಳು ಚೂರಿ ಸೇರಿದಂತೆ ಅಪಾಯಕಾರಿ ಆಯುಧಗಳನ್ನು ಹಿಡಿದುಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಈ ಕುರಿತು ಭಟ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

About The Author

error: Content is protected !!