ಕುಮಟಾ: ಪ್ರಶಸ್ತಿ, ಪುರಸ್ಕಾರ ಹಾಗೂ ಸಮ್ಮಾನಗಳು ಅಪಾರ ಸಂತಸವನ್ನು ನೀಡುವುದರ ಜೊತೆಗೆ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ ಎಂದು ಜಾಗತಿಕ ಮಟ್ಟದ ಪ್ರಶಸ್ತಿ ಪುರಸ್ಕೃತ ಯುವ ಸಹಕಾರಿ ಧುರೀಣ ಹಾಗೂ ಗೋದಾವರಿ ಸಮೂಹ ಸಂಸ್ಥೆಗಳ ಒಡೆಯ ರಾಘವೇಂದ್ರ ನಾಯಕ ಹೇಳಿದರು.
ತಾಲೂಕಿನ ಬರ್ಗಿಯ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಹನುಮ ಜಯಂತಿ ಅಂಗವಾಗಿ ಆಯೋಜಿಸಿದ್ದ “ಪ್ರಚಂಡ ಶನೀಶ್ವರ – ಗಂಡುಗಲಿ ಅಂಜನೇಯ” ಯಕ್ಷಗಾನದ ವೇದಿಕೆಯಲ್ಲಿ “ವರದ ರಾಘವ” ಉಪಾದಿಯೊಂದಿಗೆ “ವರ್ಷದ ಶ್ರೀ ವೀರಾಂಜನೇಯ ಪುರಸ್ಕಾರ” ಸ್ವೀಕರಿಸಿ ಅವರು ಮಾತನಾಡಿದರು.
ತಮ್ಮ ಸಾಧನೆಯ ಹಾದಿಯಲ್ಲಿ ಹೆತ್ತವರ ಆಶೀರ್ವಾದ, ದೇವರ ಕೃಪೆ ಹಾಗೂ ಹಿತೈಷಿಗಳ ಬೆಂಬಲವನ್ನು ಸ್ಮರಿಸಿದ ಅವರು, ಈ ಪುರಸ್ಕಾರವು ಮುಂದಿನ ಸಾಧನೆಗೆ ಅಭಿಪ್ರೇರಕವಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ವಿಶ್ರಾಂತ ಉಪನ್ಯಾಸಕರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಭಾಗವತ “ಗಾನ ನಿಧಿ” ಬೊಮ್ಮಯ್ಯ ಗಾಂವಕರ್ ಹಿತ್ತಲಮಕ್ಕಿಯವರು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಮಾಜಮುಖಿ ಸಾಧಕರನ್ನು ಗುರುತಿಸಿ ಗೌರವಿಸುವುದು ನಿಜವಾದ ಧರ್ಮಕಾರ್ಯ ಎಂದು ಅಭಿಪ್ರಾಯಪಟ್ಟರು. ಬರ್ಗಿಯ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯವು ಈ ದಿಕ್ಕಿನಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯ ಕೋಶಾಧ್ಯಕ್ಷರು ಹಾಗೂ ಮಾಸೂರಿನ ಶ್ರೀ ಬಬ್ರುಲಿಂಗೇಶ್ವರ ಪ್ರೌಢ ಶಾಲೆಯ ಮುಖ್ಯಾಧ್ಯಾಪಕರಾದ ಶಿವಚಂದ್ರ ಅವರಿಗೆ “ಹನುಮಾನುಗೃಹ ಸಿಂಧು” ಉಪಾದಿಯೊಂದಿಗೆ “ಶ್ರೀ ವೀರಾಂಜನೇಯ ಪುರಸ್ಕಾರ” ನೀಡಿ ಗೌರವಿಸಲಾಯಿತು.
ಪುರಸ್ಕಾರ ಸ್ವೀಕರಿಸಿದ ಶಿವಚಂದ್ರ ಅವರು, ತಮ್ಮ ಸ್ನೇಹಿತ ಕೀರ್ತಿಶೇಷ ಶಿವಾನಂದ ಪೈರವರಿಗೆ ದೊರೆತಿದ್ದ ಈ ಪುರಸ್ಕಾರ ತಮಗೂ ಲಭಿಸಿರುವುದು ದೇವರ ಮಹಾಪ್ರಸಾದವೆಂದು ಭಾವುಕರಾಗಿ ಹೇಳಿದರು.
ಶೈಕ್ಷಣಿಕ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದ ವಿದ್ಯಾರ್ಥಿನಿ ಎನ್. ನಾಗಲಕ್ಷ್ಮಿ (ನಾಗನೆಲೆ) ಅವರು ಪ್ರಥಮ ಪಿಯುಸಿಯಲ್ಲಿ 600ರಲ್ಲಿ 591 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮಳಾಗಿದ್ದಕ್ಕಾಗಿ ದೇವಸ್ಥಾನದಿಂದ ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮಕ್ಕೆ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ನ್ಯಾಯವಾದಿ ಹರಿಶ್ಚಂದ್ರ ಗಾಂವಕರ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ವ್ಯವಸ್ಥಾಪಕ ದೇವದಾಸ ಜಾಧವ, ಅರ್ಚಕ ದಯಾನಂದ ಭಟ್, ಮಹದೇವ್ ಆಗೇರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಂತರ ನುರಿತ ಕಲಾವಿದರಿಂದ ನಡೆದ ಯಕ್ಷಗಾನದಲ್ಲಿ ಮಂಜುನಾಥ ಗಾಂವಕರ್ ಶನೀಶ್ವರನಾಗಿ, ಡಾ. ಎಂ.ಆರ್. ನಾಯಕರು ಹನುಮಂತನಾಗಿ, ಮಾಸ್ಟರ್ ಪುನೀತ್ ವಿಷ್ಣುವಾಗಿ ಹಾಗೂ ಅರುಣ ಚಂದಾವರ ನಾರದನಾಗಿ ಅಭಿನಯಿಸಿ, ಆಖ್ಯಾನವನ್ನು ಭಾವಪೂರ್ಣವಾಗಿ ಪ್ರೇಕ್ಷಕರ ಮನಗೆದ್ದರು.

More Stories
ಬರ್ಗಿ ಸಂಸ್ಕೃತೋತ್ಸವದಲ್ಲಿ ರಾಮಾಯಣ ಪರೀಕ್ಷೆಯ ಸಾಧಕಿಯರಿಗೆ ಗೌರವ
ಹಿರೇಗುತ್ತಿ ಹೈಸ್ಕೂಲಿನಲ್ಲಿ ಅಂಬೇಡ್ಕರ್ ಜನ್ಮ ಜಯಂತಿ ಆಚರಣೆ
ಸ್ಪೋಕನ್ ಇಂಗ್ಲೀಷ್ ಅನಿವಾರ್ಯಮಾಸೂರಿನ ಬೇಸಿಗೆ ಶಿಬಿರದಲ್ಲಿ ಮಂಜುನಾಥ ಬರ್ಗಿ ಅಭಿಮತ