April 16, 2026

ರಾಜ್ಯ ಸರ್ಕಾರದ ನಡೆ ಖಂಡನೀಯ: ನವೀನ್ ನಾಯಕ್ ಆಕ್ರೋಶ


ಕಾರ್ಕಳ: ರಾಜ್ಯ

ಸರ್ಕಾರ ಆರ್ಥಿಕ ಸಂಕಷ್ಟದ ಹಿನ್ನಲೆಯಲ್ಲಿ ಜನಪರ ಯೋಜನೆಗಳನ್ನು ಸ್ಥಗಿತಗೊಳಿಸುವ ದಿಕ್ಕಿನಲ್ಲಿ ನಡೆದುಕೊಳ್ಳುತ್ತಿರುವುದು ಖಂಡನೀಯ ಎಂದು ಬಿಜೆಪಿ ಕಾರ್ಕಳ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಆರೋಪಿಸಿದ್ದಾರೆ.


ಈ ಕುರಿತು ಪ್ರಕಟಣೆ ನೀಡಿರುವ ಅವರು, ಸರ್ಕಾರ ದಿವಾಳಿ ಸ್ಥಿತಿಗೆ ತಲುಪಿದ್ದು ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ. ಈ ಆರ್ಥಿಕ ಬಿಕ್ಕಟ್ಟನ್ನು ಸರಿದೂಗಿಸುವ ನೆಪದಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂದ್ಯಾ ಸುರಕ್ಷಾ, ವಿಧವಾ ವೇತನ ಹಾಗೂ ಅಂಗವಿಕಲ ವೇತನಗಳಂತಹ ಪ್ರಮುಖ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ತಾಲ್ಲೂಕಿನಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ರದ್ದುಪಡಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.


ಇದೇ ವೇಳೆ, ಬಡವರು ಆರೋಗ್ಯ, ಮನೆ ನಿರ್ಮಾಣ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪಡೆದ ಬ್ಯಾಂಕ್ ಸಾಲದ ವಿವರಗಳನ್ನು ಆಧರಿಸಿ ಅವರ ಬಿಪಿಎಲ್ ಕಾರ್ಡ್‌ಗಳನ್ನು ಸಹ ರದ್ದುಪಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಕ್ರಮದಿಂದ ಬಡಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.


ಕಾರ್ಕಳ ತಾಲ್ಲೂಕಿನಲ್ಲಿ ಸಾವಿರಾರು ಕುಟುಂಬಗಳು ಇದರ ಪರಿಣಾಮವಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಬಿಪಿಎಲ್ ಕಾರ್ಡ್ ಇಲ್ಲದೆ ದುಬಾರಿ ಆರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯವಾಗದೆ ಪರದಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ನಿತ್ಯ ತಾಲ್ಲೂಕು ಕಚೇರಿಗೆ ಭೇಟಿ ನೀಡುತ್ತಿದ್ದರೂ ಜನರ ಅಹವಾಲುಗಳನ್ನು ಸರ್ಕಾರ ಗಮನಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.


ವಿಧವಾ ಹಾಗೂ ಅಂಗವಿಕಲ ವೇತನಗಳಂತಹ ಮೂಲಭೂತ ಸೌಲಭ್ಯಗಳು ಸಿಗದಿದ್ದರೆ ಈಗಾಗಲೇ ಸಂಕಷ್ಟದಲ್ಲಿರುವ ಕುಟುಂಬಗಳು ಇನ್ನಷ್ಟು ತೊಂದರೆಗೆ ಒಳಗಾಗಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.ಬಡವರ ಹಕ್ಕುಗಳನ್ನು ಕಸಿದುಕೊಳ್ಳುವಂತಹ ನಿರ್ಧಾರಗಳನ್ನು ರಾಜ್ಯ ಸರ್ಕಾರ ತಕ್ಷಣವೇ ಹಿಂಪಡೆಯಬೇಕು. ಉಡುಪಿ ಜಿಲ್ಲಾಡಳಿತವು ಸಹ ಬಡವರ ಮೇಲೆ ದಬ್ಬಾಳಿಕೆ ಮಾಡುವಂತಹ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಅವರು ಆಗ್ರಹಿಸಿದ್ದಾರೆ.


ಈ ಕ್ರಮಗಳನ್ನು ಕಾರ್ಕಳ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ನವೀನ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ : ಅರುಣ ಭಟ್ ಕಾರ್ಕಳ

About The Author

error: Content is protected !!