ಕುಮಟಾ : ಕನ್ನಡದ ಮಣ್ಣಿನಲ್ಲಿ ಹುಟ್ಟಿದ ಪ್ರತಿಯೊಬ್ಬನೂ ತಾನು ಕನ್ನಡಿಗ ಎಂದುಕೊಳ್ಳುವಲ್ಲಿ ಅಭಿಮಾನವನ್ನು ಪಡಲೇ ಬೇಕು. ಜೊತೆಯಲ್ಲಿ ಕನ್ನಡಕ್ಕೆ ಮಾತೃ ಸ್ಥಾನದಲ್ಲಿರುವ ಸಂಸ್ಕೃತವನ್ನು ಯಾವುದೇ ಕಾರಣಕ್ಕೂ ದೋಷಿಸಕೂಡದು. ಸಂಸ್ಕೃತವು ಕನ್ನಡಕ್ಕೆ ಪೂರಕವೇ ಹೊರತು ಬಾಧಕವಲ್ಲ. ಸಂಸ್ಕೃತದ ಅರಿವಿನಿಂದ ಸಶಕ್ತ ಕನ್ನಡಿಗನಾಗಿ ಅನಾವರಣಗೊಳ್ಳಲು ಸಾಧ್ಯ ಎಂದು ಕರ್ನಾಟಕ ರಣಧೀರ ವೇದಿಕೆಯ ಕುಮಟಾ ತಾಲ್ಲೂಕಾ ಘಟಕದ ಅಧ್ಯಕ್ಷರಾದ ಮಿರ್ಜಾನಿನ ಕನ್ನಡದ ಸಮೀರರು ನುಡಿದರು.
ಅವರು ತಾಲ್ಲೂಕಿನ ಬರ್ಗಿಯ ಗ್ರಾಮ ಪಂಚಾಯಿತಿಯಲ್ಲಿ ಸ್ಥಳೀಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠವು ನಾಗಮಲೆಯ ಕನ್ನಡ ಭಾರತೀ ಪರ್ಪಂಚ, ಕರ್ನಾಟಕ ಸಂಸ್ಕೃತ ಪರಿಷತ್, ತೊರ್ಕೆಯ ಆನಂದ ಕವರಿ ಪ್ರತಿಷ್ಠಾನ, ಕರ್ನಾಟಕ ರಣಧೀರದ ವೇದಿಕೆ, ಗಜಾನನ ನಾಯಕ ಅಭಿಮಾನಿ ಬಳಗ ಹಾಗೂ ಬರ್ಗಿ ಪ್ರೌಢ ಶಾಲೆಯ ಶ್ರೀ ಘಟಬೀರ ಪ್ರಸಾದಿತ ಹಳೆಯ ವಿದ್ಯಾರ್ಥಿಗಳ ಸಂಘಗಳ ಸಯೋಗದಲ್ಲಿ ಆಯೋಜಿಸಿದ “ಬರ್ಗಿ ಸಂಸ್ಕೃತೋತ್ಸವ – 2026” ನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತವು ಜಗತ್ತಿಗೆ ಭರತವರ್ಷದ ಅತ್ಯಮೂಲ್ಯವಾದ ಕೊಡುಗೆಯಾಗಿದ್ದು, ಸಂಸ್ಕೃತ ಸಾಹಿತ್ಯದಲ್ಲಿನ ಅಪಾರವಾದ ವಿಶೇಷತೆಗೆ ವಿದೇಶಿಯರೇ ಬೆರಗಾಗಿದ್ದು, ಅವರಿವರೆನ್ನದೇ ಸಂಸ್ಕೃತದ ಅರಿವನ್ನು ಹೊಂದುವ ಮೂಲಕ ತಮ್ಮ ಜ್ಞಾನದ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಲು ಸಾಧ್ಯವೆಂದ ಅವರು, ಗ್ರಾಮೀಣ ಪ್ರದೇಶವಾದ ಬರ್ಗಿಯಲ್ಲಿ ಬಡ ಹಿಂದುಳಿದ ವಿದ್ಯಾರ್ಥಿಗಳ ಸಂಸ್ಕೃತ ಕಲಿಕೆಗೆ ಒತ್ತು ನೀಡಿ ಸಂಸ್ಕೃತಮಯ ವಾತಾವರಣವನ್ನು ಸೃಷ್ಟಿಸಿದ ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವ್ಕರ್ ಬರ್ಗಿಯವರನ್ನು ಎದೆದುಂಬಿ ಶ್ಲಾಘಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ “ಸಂಸ್ಕೃತ ಪ್ರದೀಪ ಪುರಸ್ಕಾರ” ಎಂಬ ಶೀರ್ಷಿಕೆಯಲ್ಲಿ ಬರ್ಗಿ ಪ್ರೌಢ ಶಾಲೆಯಲ್ಲಿ ಸಂಸ್ಕೃತವನ್ನು ಆಯ್ದು ಅಭ್ಯಸಿಸುತ್ತಿರುವ ಹಾಗೂ ಬರ್ಗಿ ಪ್ರೌಢ ಶಾಲೆಯಲ್ಲಿ ಸಂಸ್ಕೃತವನ್ನು ಕಲಿತು ಕಾಲೇಜಿನಲ್ಲಿ ಸಂಸ್ಕೃತ ಕಲಿಕೆಯನ್ನು ಮುಂದುವರಿಸಿರುವ ವಿದ್ಯಾರ್ಥಿಗಳಿಗೆ ಪದಕ, ಫಲಕ, ಪೇಟ, ಪ್ರಶಸ್ತಿ ಪತ್ರ, ಸ್ಮರಣಿಕೆ, ಶಾಲು ಹಾಗೂ ನಗದನ್ನಿತ್ತು ” ಸಂಸ್ಕೃತ ಸಿಂಧೂರ ” ಎಂಬ ಅಭಿದಾನದೊಂದಿಗೆ ವಿಶೇಷವಾಗಿ ಮಾನಿಸಿದ ಉತ್ತರ ಕನ್ನಡ ಜಿಲ್ಲಾ ಪಂಚಾಯತದ ನಿಕಟಪೂರ್ವ ಜನಪ್ರಿಯ ಸದಸ್ಯರಾದ ಪ್ರದೀಪ ನಾಯಕ ದೇವರಬಾವಿಯವರು ಮಾತನಾಡಿ, ಮಂಜುನಾಥ ಬರ್ಗಿಯವರು ಬರ್ಗಿ ಪ್ರೌಢ ಶಾಲೆಗೆ ಬಂದಲ್ಲಿಂದ ಶಾಲೆಗಾಗಿ ತಮ್ಮನ್ನು ಸಮರ್ಪಿಸಿಕೊಂಡು ಒಂದಲ್ಲೊಂದು ವಿದ್ಯಾರ್ಥಿ ಪರವಾದ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡು, ಬರ್ಗಿ ಪ್ರೌಢ ಶಾಲೆಯ ಚಿತ್ರಣವನ್ನೇ ಬದಲಿಸಿದ್ದು, ಬರ್ಗಿ ಪ್ರೌಢ ಶಾಲೆಯನ್ನು ನಾಡಿಗೆ ನಾಡೇ ಗಮನ ಸೆಳೆಯುವಂತೆ ಮಾಡಿರುವುದು ಪ್ರಶಂಸನೀಯ ಎಂದರು. ತಾನೂ ಗೋಕರ್ಣದ ಭದ್ರಕಾಳಿ ಪ್ರೌಢ ಶಾಲೆಯಲ್ಲಿ ಹೆಚ್ಚಿನ ಅಂಕಗಳಿಕೆಯ ವಿಷಯವೆಂದು ಸಂಸ್ಕೃತವನ್ನು ಆಯ್ದುಕೊಂಡಿದ್ದು, ಅದರಿಂದ ಪಡೆದ ಸಂಸ್ಕಾರ ಹಾಗೂ ಬದುಕಿನ ಪಾಠವು ದೊಡ್ಡದಿದೆ. ಜಾತಿ ಮತದ ಬೇಲಿಯನ್ನು ದಾಟಿ ಮನುಷ್ಯನಾಗಲು ಸಂಸ್ಕೃತವನ್ನು ಪ್ರತಿಯೊಬ್ಬರೂ ಓದಬೇಕು ಎಂದು ಅವರು ಹೇಳಿದರು.
ಬರ್ಗಿ ಸಂಸ್ಕೃತೋತ್ಸವದಲ್ಲಿ ಸನ್ಮಾನಗೊಂಡ ಬರ್ಗಿ ಪ್ರೌಢ ಶಾಲೆಗೆ ಸಂಸ್ಕೃತ ಹುದ್ದೆಯು ಮಂಜೂರಾಗುವಲ್ಲಿ ಬಹು ಮುಖ್ಯವಾದ ಪಾತ್ರವನ್ನು ವಹಿಸಿದ್ದ ಜಿಲ್ಲಾ ಪಂಚಾಯತದ ಮಾಜಿ ಸದಸ್ಯರಾದ ಗಾಯತ್ರಿ ಗೌಡರವರು ಮಾತನಾಡಿ, ಮಂಜುನಾಥ ಗಾಂವಕರ ಬರ್ಗಿಯವರಂತಹ ಅನುಪಮ ವಿದ್ಯಾರ್ಹತೆಯ, ಪ್ರತಿಭಾ ಸಂಪನ್ನ, ವಿಷಯ ಶೃದ್ಧೆಯ, ಅಪ್ರತಿಮ ಸಂಘಟನಾ ಸಾಮರ್ಥ್ಯದ, ವಿದ್ಯಾರ್ಥಿಗಳ ಬಗೆಗಿನ ಅಪಾರವಾದ ಕಳಕಳಿಯ, ಸೃಜನಶೀಲ – ಕ್ರಿಯಾಶೀಲ ಅಧ್ಯಾಪಕರಂತವರು ರಾಜ್ಯದ ಪ್ರತಿಯೊಂದು ಶಾಲೆಯಲ್ಲೂ ಒಬ್ಬರಾದರೂ ಇದ್ದಲ್ಲಿ, ಕೇವಲ ಅಂಕ ಗಳಿಕೆಗಾಗಿ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ಬದಲು, ಬಹುಮುಖ ವ್ಯಕ್ತಿತ್ವವಾಗಿ ಬೆಳಕುಗೊಳ್ಳಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಟಾಕೇಶ್ವರ ಪಟಗಾರ, ವಿ.ಡಿ. ನಾಯಕ್, ಸದಾಶಿವ ನಾಯ್ಕ, ಮಹಾದೇವ ನಾಯ್ಕ, ಜಿ.ಡಿ. ಶಾನಭಾಗ, ಆರಾಧ್ಯ ನಾಯಕ, ರಾಜಂ ಹಿಚಕಡ್, ಮೋಹನ ಭಂಡಾರಿ,ಎನ್. ನಾಗಲಕ್ಷ್ಮಿ, ನಾಗಶ್ರೀ ಹರಿಕಾಂತ್, ನವ್ಯ ಗಾವಡಿ, ಶೃದ್ಧಾ ಪಟಗಾರ, ಧನ್ಯ ಪಟಗಾರ, ನಂದನ ನಾಯಕ, ಕಾವ್ಯ ಗಾವಡಿ, ಕಾಂಚನ ಗಾವಡಿ, ಆಶಿತಾ ಅರ್ವಣಕರ್, ರಮ್ಯಾ ಪಟಗಾರ, ಗೌತಮಿ ಹರಿಕಂತ್ರ, ಅಭಿಷೇಕ, ಶಮಿಕಾ, ಭೂಮಿಕಾ ಹಾಗೂ ರೇಣುಕಾ ಗುನಗಾರವರನ್ನು ಸನ್ಮಾನಿಸಲಾಯಿತು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಬರ್ಗಿ ಪ್ರೌಢ ಶಾಲೆಯಲ್ಲಿನ ಹತ್ತನೆಯ ತರಗತಿಯ ಸಂಸ್ಕೃತ ವಿದ್ಯಾರ್ಥಿಗಳಿಗೆ ಕಾರವಾರದ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ವಿಶ್ರಾಂತ ನಿರ್ದೇಶಕರಾಗಿರುವ ಡಾ. ಗಜಾನನ ನಾಯಕರವರ ಧರ್ಮಪತ್ನಿ ಅರ್ಚನಾರವರ ಪ್ರಾಯೋಜಕತ್ವದಲ್ಲಿನ ಗುಣಮಟ್ಟದ ವಾಚ್ ಗಳನ್ನು ವಿತರಿಸಲಾಯಿತು.
ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಬರ್ಗಿಯವರು ಸ್ವಾಗತಿಸಿ – ವಂದಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮೋಹನ ನಾಯ್ಕರವರು ನಿರೂಪಿಸಿದರು. ತಾಲ್ಲೂಕಾ ಪಂಚಾಯತ್ ದ ಮಾಜಿ ಅಧ್ಯಕ್ಷೆ ವಿಜಯ ಪಟಗಾರ, ಕನ್ನಡ ಭಾರತಿ ಪ್ರಪಂಚದ ಸಂಚಾಲಕ ನಾರಾಯಣ ನಾಗು ನಾಯಕ, ಬರ್ಗಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ ನಾಯ್ಕ, ಉಪನ್ಯಾಸಕರಾದ ಹರೀಶ ನಾಯಕ, ಸುಮಾ ಶೆಟ್ಟಿ, ಜಗದೀಶ ಮಾಸ್ತರ್ ಹಿರೇಗುತ್ತಿ, ಭವ್ಯ ಗಾವಡಿ ಹಾಗೂ ಅಶೋಕ ಪಂಡಿತ್ ಮೊದಲಾದವರಿದ್ದರು.

More Stories
ಬರ್ಗಿ ಸಂಸ್ಕೃತೋತ್ಸವದಲ್ಲಿ ರಾಮಾಯಣ ಪರೀಕ್ಷೆಯ ಸಾಧಕಿಯರಿಗೆ ಗೌರವ
ಹಿರೇಗುತ್ತಿ ಹೈಸ್ಕೂಲಿನಲ್ಲಿ ಅಂಬೇಡ್ಕರ್ ಜನ್ಮ ಜಯಂತಿ ಆಚರಣೆ
ಸ್ಪೋಕನ್ ಇಂಗ್ಲೀಷ್ ಅನಿವಾರ್ಯಮಾಸೂರಿನ ಬೇಸಿಗೆ ಶಿಬಿರದಲ್ಲಿ ಮಂಜುನಾಥ ಬರ್ಗಿ ಅಭಿಮತ