ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಶೈಕ್ಷಣಿಕ ಕ್ರಾಂತಿಯ ಹರಿಕಾರ ಎನಿಸಿಕೊಂಡಿರುವ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ (Bhatkal Education Trust) ತನ್ನ 90 ವರ್ಷಗಳ ಅವಿಶ್ರಾಂತ ಸೇವೆಯ ಸಾರ್ಥಕ ಕ್ಷಣದಲ್ಲಿದೆ. ಈ ಸಂಭ್ರಮದ ಅಂಗವಾಗಿ ಏಪ್ರಿಲ್ 29ರಂದು ನೂತನ ಕಟ್ಟಡ ಉದ್ಘಾಟನೆ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮದ ವಿವರಗಳು: ದಿನಾಂಕ: 29 ಏಪ್ರಿಲ್ 2026, ಬುಧವಾರ, ಸ್ಥಳ: ಬಂದರ ರಸ್ತೆ ಆವರಣ, ಭಟ್ಕಳ
1. ನೂತನ ಕಟ್ಟಡ ಉದ್ಘಾಟನೆ (ಬೆಳಿಗ್ಗೆ 8:13ಕ್ಕೆ): ಸಂಸ್ಥೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲಿಷ್ ಪಿ.ಯು. ಕಾಲೇಜು ಕಟ್ಟಡ ಹಾಗೂ ‘ಗೀತಾ ವಾಮನ ಶಾನಭಾಗ ಬ್ಲಾಕ್’ ನ ಉದ್ಘಾಟನೆಯನ್ನು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪರಮಪೂಜ್ಯ ಶ್ರೀಮದ್ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ನೆರವೇರಿಸಲಿದ್ದಾರೆ.
2. ಗಣ್ಯರ ಉಪಸ್ಥಿತಿ: ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಂಕಾಳ್ ಎಸ್. ವೈದ್ಯ ಅವರು ಆಗಮಿಸಲಿದ್ದಾರೆ. ಅತಿಥಿಗಳಾಗಿ ಪುಣೆಯ ಕೈಗಾರಿಕೋದ್ಯಮಿ ಶ್ರೀ ಸದಾನಂದ ಬಾಳಿಗಾ, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ (DDPU) ಶ್ರೀ ಸತೀಶ್ ನಾಯ್ಕ, ಬೆಂಗಳೂರಿನ ಸಾಗರ್ ಆಸ್ಪತ್ರೆಯ ವೈದ್ಯರಾದ ಡಾ. ದೇವೇಂದ್ರ ನಾಯ್ಕ ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರದ ವಲಯ ವ್ಯವಸ್ಥಾಪಕರಾದ ಶ್ರೀ ಸುಚೇತ್ ಡಿಸೋಜಾ ಭಾಗವಹಿಸಲಿದ್ದಾರೆ.
3. ಹಳೆಯ ವಿದ್ಯಾರ್ಥಿಗಳ ಸಮಾಗಮ ಮತ್ತು ಗುರುವಂದನೆ (ಬೆಳಿಗ್ಗೆ 11:00ಕ್ಕೆ): 1935ರಲ್ಲಿ ಕೇವಲ 34 ವಿದ್ಯಾರ್ಥಿಗಳೊಂದಿಗೆ ಆರಂಭವಾದ ‘ದಿ ನ್ಯೂ ಇಂಗ್ಲಿಷ್ ಶಾಲೆ’ ಇಂದು ಹೆಮ್ಮರವಾಗಿ ಬೆಳೆದಿದೆ. ಈ ಹಿನ್ನೆಲೆಯಲ್ಲಿ, ಶಾಲೆಯ ಪೂರ್ವ ವಿದ್ಯಾರ್ಥಿಗಳು ತಮ್ಮ ಯಶೋಗಾಥೆಗೆ ಕಾರಣಕರ್ತರಾದ ಗುರುಗಳನ್ನು ಗೌರವಿಸುವ ‘ಗುರುವಂದನಾ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಸಂಸ್ಥೆಯ ಹಿನ್ನೆಲೆ:
ಸ್ವಾತಂತ್ರ್ಯ ಪೂರ್ವದಲ್ಲಿ ಈ ಭಾಗದ ಜನರ ಶಿಕ್ಷಣಕ್ಕಾಗಿ 1935ರಲ್ಲಿ ಶ್ರೀ ನಾಗಪ್ಪ ವಾಮನ ನಾಯಕ, ಶ್ರೀ ರಾಮಕೃಷ್ಣ ನಾಯಕ ಮತ್ತು ಶ್ರೀ ವಾಮನ ಗಣಪಯ್ಯ ಶಾನಭಾಗ ಅವರ ನೇತೃತ್ವದಲ್ಲಿ ಸ್ಥಾಪಿತವಾದ ಈ ಟ್ರಸ್ಟ್, ಇಂದು 8 ವಿದ್ಯಾಸಂಸ್ಥೆಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದೆ. ಶತಮಾನೋತ್ಸವದ ಹಾದಿಯಲ್ಲಿರುವ ಸಂಸ್ಥೆಯು ಸಿ.ಇ.ಟಿ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸತತವಾಗಿ ಅತ್ಯುತ್ತಮ ಸಾಧನೆ ಮಾಡುತ್ತಾ ಬಂದಿದೆ.
ಈ ಐತಿಹಾಸಿಕ ಕ್ಷಣಕ್ಕೆ ಸಮಸ್ತ ಸಾರ್ವಜನಿಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಪ್ರೇಮಿಗಳು ಸಾಕ್ಷಿಯಾಗಬೇಕೆಂದು ಟ್ರಸ್ಟ್‌ನ ಆಡಳಿತ ಮಂಡಳಿ ವಿನಂತಿಸಿದೆ

More Stories
ಮರಂಬಳ್ಳಿ ಶ್ರೀ ಯೋಗ ನರಸಿಂಹ ದೇವಸ್ಥಾನದ ವರ್ಧಂತಿ ಮಹೋತ್ಸವ
ಭಟ್ಕಳ ನ್ಯೂ ಇಂಗ್ಲಿಷ್ ಶಾಲೆ ಪೂರ್ವ ವಿದ್ಯಾರ್ಥಿಗಳ ಸಮಾಗಮ ಏ.29ರಂದು
ಮಣ್ಕುಳಿ ಪ್ರೀಮಿಯರ್ ಲೀಗ್–2026: ರಾಯಲ್ ಸಾಮ್ರಾಟ್ ಚಾಂಪಿಯನ್