

ಭಟ್ಕಳ: ತಾಲೂಕಿನ ಹನುಮಾನ್ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣವನ್ನು ಕೆಲವು ಸ್ಥಳೀಯ ಯುವಕರು ಅನಧಿಕೃತವಾಗಿ ಕ್ರಿಕೆಟ್ ಮೈದಾನವನ್ನಾಗಿ ಬಳಸಿಕೊಂಡು ಹಣ ವಸೂಲಿ ಮಾಡುತ್ತಿರುವುದಾಗಿ ಆರೋಪಿಸಿ, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಶ್ರೀ ವೆಂಕಟೇಶ್ವರ ಅಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ, ಶಾಲಾ ಮೈದಾನವನ್ನು ಅಕ್ಕಪಕ್ಕದ ಗ್ರಾಮಗಳ ಯುವಕರಿಗೆ ಹಣ ಪಡೆದು ಕ್ರಿಕೆಟ್ ಆಡಲು ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಇತ್ತೀಚೆಗೆ ಆಸರಕೇರಿ ಗ್ರಾಮದ ಯುವಕರು ಮೈದಾನ ಬಳಕೆಗೆ ಅನುಮತಿ ಕೇಳಿದಾಗ ಹೆಚ್ಚಿನ ಹಣದ ಬೇಡಿಕೆ ಇಟ್ಟಿದ್ದು, ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಜಗಳವಾಡಿ ಬೆದರಿಕೆ ಹಾಕಲಾಗಿದೆ ಎಂದು ದೂರಲಾಗಿದೆ.


ಶಾಲಾ ಮೈದಾನದಲ್ಲಿ ಶಾಶ್ವತ ಕ್ರಿಕೆಟ್ ಅಂಕಣ ನಿರ್ಮಿಸಿರುವುದಲ್ಲದೆ, ಮದ್ಯಪಾನ ಹಾಗೂ ಗಾಂಜಾ ಸೇವನೆಯಂತಹ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪವೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಶಾಲಾ ಮಕ್ಕಳ ಸುರಕ್ಷತೆ ಹಾಗೂ ಶಾಲಾ ಪರಿಸರದ ಹಿತದೃಷ್ಟಿಯಿಂದ ಮೈದಾನವನ್ನು ಪರಿಶೀಲಿಸಿ, ಶಾಲಾ ಚಟುವಟಿಕೆಗಳಿಗೆ ಮಾತ್ರ ಸೀಮಿತಗೊಳಿಸುವಂತೆ ಕ್ರಮ ಕೈಗೊಳ್ಳಬೇಕು. ಶಾಶ್ವತ ಕ್ರಿಕೆಟ್ ಅಂಕಣ ತೆರವುಗೊಳಿಸಿ, ಅಗತ್ಯವಿದ್ದರೆ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಶಾಲೆಯ ಸುರಕ್ಷತೆ ಕಾಪಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಕುರಿತು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ಶ್ರೀಧರ ನಾಯ್ಕ ಎಚ್ಚರಿಸಿದ್ದಾರೆ

About The Author




More Stories
ತೆರೆದ ಚರಂಡಿ ಹೊಂಡ: ಅಪಾಯದ ನಡುವೆ ಭಟ್ಕಳದ ವಾಹನ ಸವಾರರ ಸಂಚಾರ.
ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಮಂಕಾಳ್ ಎಸ್. ವೈದ್ಯ ಆಯ್ಕೆ: ಮಾಜಿ ಸಚಿವರಿಗೆ ಭಟ್ಕಳದಲ್ಲಿ ಅದ್ಧೂರಿ ಸ್ವಾಗತ.
ಆಗಸ್ಟ್ 18ರಂದು ಭಟ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರ: ಡಾ. ಸುರೇಶ ನಾಯಕ್ ಸ್ಮರಣಾರ್ಥ ಆಯೋಜನೆ