May 23, 2026

ಅಧಿಕಾರಿಗಳೇ ಎಚ್ಚೆತ್ತುಕೊಳ್ಳುವಿರಾ? ಜನರ ಮೂಲಭೂತ ಸಮಸ್ಯೆಗೆ ಕೊನೆಗೂ ನ್ಯಾಯ ಸಿಗುತ್ತದೆಯಾ?

ಅಥಣಿ: ತಾಲೂಕಿನ ಪ್ರವಾಸ ಮಂದಿರದಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಲು ಆಗಮಿಸಿದ್ದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ [Satish Jarkiholi ] ಅವರಿಗೆ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಅಥಣಿ ತಾಲೂಕು ಘಟಕ ಹಾಗೂ ಸಾರ್ವಜನಿಕರು ವಿವಿಧ ಪ್ರಮುಖ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು.

ಸಂಚಾರ ದಟ್ಟಣೆ ನಿಯಂತ್ರಣ, ಹದಗೆಟ್ಟ ಗ್ರಾಮೀಣ ರಸ್ತೆಗಳ ದುರಸ್ತಿ, ಮಹಿಳೆಯರಿಗಾಗಿ ಹೈಟೆಕ್ ಶೌಚಾಲಯ ನಿರ್ಮಾಣ ಹಾಗೂ ಮಂಗಸೂಳಿ ಗ್ರಾಮದ ಎಸ್‌ಸಿ ಕಾಲೋನಿಯ ಚರಂಡಿ ಸಮಸ್ಯೆ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು.

ಸ್ಥಳದಲ್ಲೇ ಇಒಗೆ ಖಡಕ್ ಸೂಚನೆ

ಮಂಗಸೂಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಾರ್ಡ್ ನಂ. ೬ರ ಎಸ್‌ಸಿ ಕಾಲೋನಿಯಲ್ಲಿ ದಿನಬಳಕೆ ಹಾಗೂ ಶೌಚಾಲಯದ ನೀರು ಸಮರ್ಪಕವಾಗಿ ಹರಿಯದೆ ಮನೆಗಳ ಗೋಡೆಗಳು ಶಿಥಿಲಗೊಳ್ಳುತ್ತಿರುವ ಗಂಭೀರ ಸಮಸ್ಯೆಯನ್ನು ರೋಹಿಣಿ ರೋಹಿದಾಸ್ ಭಂಡಾರೆ ಸಚಿವರ ಮುಂದೆ ವಿವರಿಸಿದರು.

ಸಮಸ್ಯೆಯ ಗಂಭೀರತೆಯನ್ನು ಅರಿತ ಸಚಿವ ಸತೀಶ್ ಜಾರಕಿಹೊಳಿ ಅವರು ಸ್ಥಳದಲ್ಲೇ ಕಾಗವಾಡ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣಾ ವಾಲಿ ಅವರಿಗೆ ಒಂದು ವಾರದ ಒಳಗಾಗಿ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದರು.

ರಸ್ತೆ, ಟ್ರಾಫಿಕ್ ಮತ್ತು ಶೌಚಾಲಯದ ಬೇಡಿಕೆ

ಮದಭಾವಿ, ಹುಲಗಬಾಳ, ಅಡಹಳ್ಳಿ, ಬೆವನೂರ ಹಾಗೂ ಮಲಾಬಾದ್ ಗ್ರಾಮಗಳ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಯಿತು. ಅಥಣಿ ಹಾಗೂ ಕಾಗವಾಡ ಪಟ್ಟಣಗಳಲ್ಲಿ ದಿನೇದಿನೇ ಹೆಚ್ಚುತ್ತಿರುವ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆಗೆ ಹೆಚ್ಚುವರಿ ಸೌಲಭ್ಯ ಒದಗಿಸಬೇಕು ಹಾಗೂ ಮಹಿಳೆಯರ ಅನುಕೂಲಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಬೇಕೆಂದು ತಾಲೂಕು ಮುಖ್ಯಸ್ಥ ಪ್ರವೀಣ್ ನಾಯಿಕ ಆಗ್ರಹಿಸಿದರು.

ಸಾರ್ವಜನಿಕರ ತೀವ್ರ ಆಕ್ರೋಶ

ಪಂಚಾಯತಿಯಿAದ ಹಿಡಿದು ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ರಾಜ್ಯ ಸರ್ಕಾರ, ಮುಖ್ಯಮಂತ್ರಿ, ಸಚಿವರು, ಉಸ್ತುವಾರಿ ಸಚಿವರು, ಶಾಸಕರು, ಕೇಂದ್ರ ಸರ್ಕಾರ, ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳವರೆಗೆ ಬೃಹತ್ ಆಡಳಿತ ವ್ಯವಸ್ಥೆ ಇದ್ದರೂ ಸಾಮಾನ್ಯ ಜನರ ಮೂಲಭೂತ ಸಮಸ್ಯೆಗಳು ವರ್ಷಗಳಿಂದ ಬಗೆಹರಿಯದೇ ಉಳಿಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿ ಬಾರಿ ಮನವಿ, ಪತ್ರ, ಮಾಧ್ಯಮ ವರದಿ ಹಾಗೂ ಅಧಿಕಾರಿಗಳಿಗೆ ಸೂಚನೆಗಳಾದರೂ ಸಮಸ್ಯೆಗಳು ಯಥಾಸ್ಥಿತಿಯಲ್ಲೇ ಮುಂದುವರಿಯಬೇಕೇ? ಅಥವಾ ಈ ಬಾರಿ ಸಚಿವರ ಆದೇಶದ ಬಳಿಕ ಅಧಿಕಾರಿಗಳು ನಿಜವಾಗಿಯೂ ಕಾರ್ಯಪ್ರವೃತ್ತರಾಗಿ ಜನರಿಗೆ ನ್ಯಾಯ ಒದಗಿಸುತ್ತಾರಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಇನ್ನಾದರೂ ಸಂಬAಧಪಟ್ಟ ಅಧಿಕಾರಿಗಳು ತಮ್ಮ ಉದಾಸೀನ ಧೋರಣೆ ಬಿಟ್ಟು ಕಾಲಮಿತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಿ ಜನರ ವಿಶ್ವಾಸ ಉಳಿಸಿಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಶರಣಪ್ಪ ಶಿಂದೆ, ಅನಿಲ್ ಭಾಮನೆ, ಎಂ.ಎA. ಶರ್ಮಾ, ಶಿವಾನಂದ ನಾವಿ, ಕವಿತಾ ಬೋಸಲೆ, ಸಂಗೀತ ಮುರಗೋಡ, ರೋಹಿಣಿ ಭಂಡಾರೆ, ರೋಹಿದಾಸ್ ಭಂಡಾರೆ ಸೇರಿದಂತೆ ಹಲವು ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ: ಮಹೇಶ್ ಶರ್ಮಾ, ಬೆಳಗಾವಿ

About The Author

error: Content is protected !!