May 23, 2026

ಹೊನ್ನಾವರದ ಎಂ.ಜಿ. ನಾಯ್ಕರಿಗೆ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಟ್ಟ

ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಶಿಕ್ಷಕ ವಲಯದಲ್ಲಿ ಸೇವಾಭಾವ, ಸಂಘಟನಾ ಶಕ್ತಿ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಮೂಲಕ ಗುರುತಿಸಿಕೊಂಡಿರುವ ಎಂ.ಜಿ. ನಾಯ್ಕ ಅವರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ತಾಲೂಕಿನ ಶಿಕ್ಷಕರಿಗೆ ಹೆಮ್ಮೆಯ ವಿಷಯವಾಗಿದೆ.

ಸುಮಾರು ಎರಡು ದಶಕಗಳ ಕಾಲ ಶಿಕ್ಷಕ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಎಂ.ಜಿ. ನಾಯ್ಕ ಅವರು ತಾಲೂಕು ಶಿಕ್ಷಕರ ಸಂಘಟನೆಯನ್ನು ಜಿಲ್ಲೆಗೆ ಮಾದರಿಯಾಗುವಂತೆ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಶಿಕ್ಷಕರ ಯಾವುದೇ ಸಮಸ್ಯೆಗೆ ತಕ್ಷಣ ಸ್ಪಂದಿಸಿ, ಸಂಘಟನೆಯ ಬಲದೊಂದಿಗೆ ಪರಿಹಾರ ಕಂಡುಕೊಡುವ ಅವರ ಕಾರ್ಯಶೈಲಿ ಶಿಕ್ಷಕರ ವಿಶ್ವಾಸಕ್ಕೆ ಪಾತ್ರವಾಗಿದೆ.

ತಾಲೂಕಿನ ಶಿಕ್ಷಕರ ಕುಟುಂಬದ ಸಂತಸ-ದುಃಖಗಳಲ್ಲಿ ಭಾಗಿಯಾಗಿರುವ ಎಂ.ಜಿ. ನಾಯ್ಕ ಅವರು ಶಿಕ್ಷಕರ ಮಕ್ಕಳ ಮದುವೆ ಸಮಾರಂಭಗಳಿAದ ಹಿಡಿದು ನಿವೃತ್ತಿ ಕಾರ್ಯಕ್ರಮಗಳವರೆಗೆ ಹಾಜರಾಗಿ ಸಂಘಟನೆಯ ಪರವಾಗಿ ಶುಭ ಹಾರೈಸಿರುವುದು ಶಿಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದೆ. ಪ್ರತಿ ವರ್ಷ ಶಿಕ್ಷಕರ ದಿನಾಚರಣೆ, ಸಾವಿತ್ರಿಬಾಯಿ ಫುಲೆ ದಿನಾಚರಣೆ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿ, ಸಾಧಕ ಶಿಕ್ಷಕರು ಹಾಗೂ ಮಹಿಳಾ ಶಿಕ್ಷಕಿಯರನ್ನು ಗೌರವಿಸುವ ಮೂಲಕ ಸಂಘಟನೆಯ ಗೌರವವನ್ನು ಹೆಚ್ಚಿಸಿದ್ದಾರೆ.

ಕೋರೊನಾ ಸಂಕಷ್ಟದ ಸಂದರ್ಭದಲ್ಲಿಯೂ ಶಿಕ್ಷಕರ ನೆರವಿಗೆ ಧಾವಿಸಿದ್ದ ಅವರು, ಮೆಡಿಕಲ್ ಬಿಲ್ ಸಮಸ್ಯೆ, ವರ್ಗಾವಣೆ, ಮಳೆ ಹಾನಿ, ಆರ್ಥಿಕ ಸಂಕಷ್ಟ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಶಿಕ್ಷಕರ ಬೆನ್ನಿಗೆ ನಿಂತಿದ್ದಾರೆ. ಶಿಕ್ಷಕ ಸಂಘದ ನಿರ್ದೇಶಕರಾಗಿ ಆರಂಭವಾದ ಅವರ ಸಂಘಟನಾ ಪಯಣ, ಪ್ರಧಾನ ಕಾರ್ಯದರ್ಶಿ, ತಾಲೂಕು ಅಧ್ಯಕ್ಷ, ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ, ರಾಜ್ಯ ಪರಿಷತ್ ಸದಸ್ಯ ಸೇರಿದಂತೆ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಇಂದು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ತಲುಪಿದೆ.

ಎಂ.ಜಿ. ನಾಯ್ಕ ಅವರ ಈ ಬೆಳವಣಿಗೆಯ ಹಿಂದೆ ಅವರ ಧರ್ಮಪತ್ನಿ ಜಯಂತಿ ನಾಯ್ಕ ಅವರ ಸಹಕಾರವೂ ಮಹತ್ವದ್ದಾಗಿದೆ. ಕುಟುಂಬದ ಜವಾಬ್ದಾರಿಗಳ ಜೊತೆಗೆ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಾ ಪತಿಯ ಸಂಘಟನಾ ಕಾರ್ಯಗಳಿಗೆ ಬೆಂಬಲ ನೀಡಿರುವುದು ಶ್ಲಾಘನೀಯವಾಗಿದೆ.
ಹಾಗೆಯೇ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಆನಂದ ಗಾವಂಕರ್ ಅವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹವೂ ಎಂ.ಜಿ. ನಾಯ್ಕ ಅವರ ಸಂಘಟನಾ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಂ.ಜಿ. ನಾಯ್ಕ ಅವರಿಗೆ ಶಿಕ್ಷಕ ಸಮುದಾಯದಿಂದ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.

ವರದಿ : ಪಿ.ಆರ್. ನಾಯ್ಕ

About The Author

error: Content is protected !!