June 7, 2026

ವಿಶ್ವ ಪರಿಸರ ದಿನಾಚರಣೆ, ಹಾಗೂ ‘ಲೋಕ ಕಲ್ಯಾಣ ಮೇಳ’

ಹೊನ್ನಾವರ: ಪಟ್ಟಣ ಪಂಚಾಯತಿ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಪರಿಸರ ದಿನಾಚರಣೆ ಕಾರ್ಯಕ್ರಮ ಜರುಗಿತು. ಪ.ಪಂ. ಮುಖ್ಯಾಧಿಕಾರಿ ಏಸು ಎಸ್ ಬೆಂಗಳೂರು ಗಿಡ ನೆಡುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ ಪ್ರಕೃತಿಯನ್ನು ರಕ್ಷಿಸುವುದು ಮತ್ತು ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಉಡುಗೊರೆಯಾಗಿ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಜಾಗತಿಕ ತಾಪಮಾನವನ್ನು ನಿಯಂತ್ರಿಸಲು ಪ್ರತಿಯೊಬ್ಬರೂ ಕನಿಷ್ಠ ಒಂದೊAದು ಗಿಡವನ್ನು ನೆಟ್ಟು, ಅದನ್ನು ಪೋಷಿಸಿ ಬೆಳೆಸಬೇಕು. ಪರಿಸರ ಸಂರಕ್ಷಣೆ ಕೇವಲ ಒಂದು ದಿನದ ಆಚರಣೆಯಾಗದೇ ನಿರಂತರ ಪ್ರಕ್ರಿಯೆಯಾಗಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಆರ್ಥಿಕ ಸಬಲೀಕರಣ ಹಾಗೂ ಅವರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಹೊನ್ನಾವರ ಪಟ್ಟಣ ಪಂಚಾಯತ ಸಭಾಭವನದಲ್ಲಿ ‘ಲೋಕ ಕಲ್ಯಾಣ ಮೇಳ’ ಜರುಗಿತು. ಮೇಳದಲ್ಲಿ ಉಪಸ್ಥಿತರಿದ್ದ ವಿವಿಧ ಬ್ಯಾಂಕ್‌ಗಳ ವ್ಯವಸ್ಥಾಪಕರು ಬೀದಿ ಬದಿ ವ್ಯಾಪಾರಿಗಳಿಗೆ ಪ್ರಸ್ತುತ ದಿನಗಳಲ್ಲಿ ಡಿಜಿಟಲ್ ವ್ಯವಹಾರದ ಮಹತ್ವ ಹಾಗೂ ಅದರ ಬಳಕೆಯಿಂದ ಸಿಗುವ ಪ್ರಯೋಜನಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ಇದೇ ವೇಳೆ, ಬೀದಿ ಬದಿ ವ್ಯಾಪಾರಿಗಳ ಸ್ವಾವಲಂಬನೆಗಾಗಿ ಸರ್ಕಾರದ ವತಿಯಿಂದ ಸಿಗುವ ವಿವಿಧ ಸಾಲ ಸೌಲಭ್ಯಗಳು, ವಿಶೇಷವಾಗಿ ‘ಪಿ.ಎಂ. ಸ್ವನಿಧಿ’ ಯೋಜನೆ ಮತ್ತು ಕಡಿಮೆ ಬಡ್ಡಿದರದಲ್ಲಿ ಸಿಗುವ ಸಾಲಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ವ್ಯಾಪಾರಿಗಳಲ್ಲಿದ್ದ ಗೊಂದಲಗಳನ್ನು ಪರಿಹರಿಸಿದರು.

ಪಟ್ಟಣ ಪಂಚಾಯತ ಆವರಣದಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಹಮ್ಮಿಕೊಳ್ಳಲಾದ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್, ಪಿಂಚಣಿ ಯೋಜನೆಯ ನೋಂದಣಿ ಕಾರ್ಯಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆ ವತಿಯಿಂದ ಸಂಘದವರು ನೊಂದಣಿ ಕೌಂಟರ್ ತೆರೆದಿದ್ದು, ಅರ್ಹ ವ್ಯಾಪಾರಸ್ಥರು ಮತ್ತು ಶ್ರಮಿಕರು ತಮ್ಮ ಭವಿಷ್ಯದ ಭದ್ರತೆಗಾಗಿ ಬೀದಿ ಬದಿ ವ್ಯಾಪಾಸ್ಥರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡರು. ಪಟ್ಟಣದ ವಿವಿಧ ಬ್ಯಾಂಕ್‌ಗಳ ವ್ಯವಸ್ಥಾಪಕರು ಹಾಗೂ ಹಿರಿಯ ಅಧಿಕಾರಿಗಳು ಹಾಗೂ ಪಟ್ಟಣದ ಪ್ರಮುಖ ಬೀದಿ ಬದಿ ವ್ಯಾಪಾರಸ್ಥರು, ಪಟ್ಟಣ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!