June 15, 2026

ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಅಕ್ರಮ ಸಾರಾಯಿ, ಗಾಂಜಾ ಹಾವಳಿ ತಡೆಗೆ ಆಗ್ರಹ: ಜೂನ್ 16ಕ್ಕೆ ಭಾರಿ ಪ್ರತಿಭಟನೆ

ಶಿರಸಿ: ಶಿರಸಿ – ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಅಕ್ರಮ ಸಾರಾಯಿ ಹಾಗೂ ಯುವ ಪೀಳಿಗೆಯನ್ನು ಬಲಿ ತೆಗೆದುಕೊಳ್ಳುತ್ತಿರುವ ಗಾಂಜಾ ಮತ್ತು ಡ್ರಗ್ಸ್ ಹಾವಳಿಯನ್ನು ತಕ್ಷಣವೇ ನಿಯಂತ್ರಿಸುವಂತೆ ಆಗ್ರಹಿಸಿ, ಇದೇ ಜೂನ್ 16ರಂದು ಬೆಳಿಗ್ಗೆ 11 ಗಂಟೆಗೆ ಶಿರಸಿ ಸಹಾಯಕ ಆಯುಕ್ತರ (AC) ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಅನಂತ ಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್, ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಈ ಪ್ರತಿಭಟನೆ ನಡೆಯಲಿದ್ದು, ಸಹಾಯಕ ಆಯುಕ್ತರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಟ್ರಸ್ಟ್‌ನ ಅಧ್ಯಕ್ಷರಾದ ಅನಂತ ಮೂರ್ತಿ ಹೆಗಡೆ ತಿಳಿಸಿದ್ದಾರೆ.

ರೈತರು, ಬಡವರ ಬಲಿ ತೆಗೆದುಕೊಳ್ಳುತ್ತಿರುವ ಅಕ್ರಮ ಸಾರಾಯಿ

ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಇದನ್ನು ಕುಡಿದು ರೈತರು, ಬಡವರು ಹಾಗೂ ದಿನಗೂಲಿ ಕಾರ್ಮಿಕರು ಬಲಿಯಾಗುತ್ತಿದ್ದಾರೆ. ಈಗಾಗಲೇ ಹಲವಾರು ಜನರು ತಮ್ಮ ಕಿಡ್ನಿ ಹಾಗೂ ಲಿವರ್ ಹಾಳುಮಾಡಿಕೊಂಡು ಸಾವನ್ನಪ್ಪಿದ್ದಾರೆ. ಈ ಮಾರಕ ಅಕ್ರಮ ಸಾರಾಯಿ ದಂದೆಗೆ ತಕ್ಷಣವೇ ಬ್ರೇಕ್ ಬೀಳಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗಳನ್ನು ಕಾಡುತ್ತಿರುವ ಗಾಂಜಾ-ಡ್ರಗ್ಸ್ ಜಾಲ; ಪಾಲಕರಲ್ಲಿ ಆತಂಕ

ಕ್ಷೇತ್ರದಲ್ಲಿ ಕಳೆದ ಎರಡು ವರ್ಷಗಳಿಂದ ಗಾಂಜಾ ಮತ್ತು ಡ್ರಗ್ಸ್‌ನಂತಹ ಅನೈತಿಕ ವ್ಯವಹಾರಗಳು ತೀವ್ರವಾಗಿ ಹೆಚ್ಚುತ್ತಿವೆ. ತಾಲೂಕಿನ ಬಹುತೇಕ ಶಾಲೆ ಮತ್ತು ಕಾಲೇಜುಗಳ ಸಮೀಪದಲ್ಲೇ ಡ್ರಗ್ಸ್ ಹಾಗೂ ಗಾಂಜಾ ಹಾವಳಿ ಹೆಚ್ಚಾಗಿದ್ದು, ಅಮಾಯಕ ವಿದ್ಯಾರ್ಥಿಗಳು ಇದಕ್ಕೆ ಬಲಿಯಾಗುತ್ತಿದ್ದಾರೆ. ಇದು ಪಾಲಕರಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ. ಪತ್ರಿಕೆಗಳಲ್ಲಿ ಪ್ರತಿದಿನ ಈ ಕುರಿತು ವರದಿಗಳು ಬರುತ್ತಿದ್ದರೂ, ವಿದ್ಯಾರ್ಥಿಗಳಿಗೆ ಈ ಮಾದಕ ದ್ರವ್ಯಗಳನ್ನು ಸಪ್ಲೈ ಮಾಡುತ್ತಿರುವ ಅಸಲಿ ಕಿಂಗ್‌ಪಿನ್‌ಗಳು ಯಾರು? ಅವರನ್ನು ಪತ್ತೆ ಹಚ್ಚುವಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ

“ಕ್ಷೇತ್ರದ ಭವಿಷ್ಯ ಹಾಗೂ ಯುವ ಪೀಳಿಗೆಯನ್ನು ಹಾಳು ಮಾಡುತ್ತಿರುವ ಇಂತಹ ಅನೈತಿಕ ವ್ಯವಹಾರಗಳನ್ನು ತಕ್ಷಣವೇ ಬಂದ್ ಮಾಡಿಸಬೇಕಿದೆ. ನಮ್ಮ ಮನೆ ಹಾಗೂ ಊರಿನ ಮಕ್ಕಳ ಹಿತದೃಷ್ಟಿಯಿಂದ ನಡೆಯುತ್ತಿರುವ ಈ ಹೋರಾಟಕ್ಕೆ ಸಾರ್ವಜನಿಕರು, ಹಿರಿಯರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬೆಂಬಲ ನೀಡಬೇಕು.”
– ಅನಂತ ಮೂರ್ತಿ ಹೆಗಡೆ, ಅಧ್ಯಕ್ಷರು, ಅನಂತ ಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್

ಪ್ರತಿಭಟನೆಯ ವಿವರ:

  • ದಿನಾಂಕ: 16 ಜೂನ್ 2026 (ಮಂಗಳವಾರ)
  • ಸಮಯ: ಬೆಳಿಗ್ಗೆ 11:00 ಗಂಟೆಗೆ
  • ಸ್ಥಳ: ಸಹಾಯಕ ಆಯುಕ್ತರ (AC) ಕಚೇರಿ ಎದುರು, ಶಿರಸಿ.

About The Author

error: Content is protected !!