July 15, 2026

ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಪ್ರವೀಣ ನಾಯಿಕ ನೇತೃತ್ವದಲ್ಲಿ ಮನವಿ: ಮದಭಾವಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸಲು ಆಗ್ರಹ

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ (ಕಾಗವಾಡ ಮತಕ್ಷೇತ್ರ) ಮದಭಾವಿ ಗ್ರಾಮದಲ್ಲಿ ನೂತನವಾಗಿ ಸರ್ಕಾರಿ ಕನ್ನಡ ಪ್ರೌಢಶಾಲೆಯನ್ನು ಪ್ರಾರಂಭಿಸಲು ಸರ್ಕಾರದ ಮಟ್ಟದಲ್ಲಿ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕೆಂದು ಒತ್ತಾಯಿಸಿ, ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಲಾಯಿತು.


ಅಥಣಿ ನಗರಕ್ಕೆ ಖಾಸಗಿ ಕಾರ್ಯಕ್ರಮವೊಂದರ ನಿಮಿತ್ತ ಆಗಮಿಸಿದ್ದ ಸಚಿವರನ್ನು, ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರು ಹಾಗೂ ಸಾಮಾಜಿಕ ಹೋರಾಟಗಾರರಾದ ಪ್ರವೀಣ ನಾಯಿಕ ಅವರ ನೇತೃತ್ವದ ನಿಯೋಗವು ಭೇಟಿ ಮಾಡಿ ಈ ಕುರಿತು ಸವಿಸ್ತಾರವಾದ ಚರ್ಚೆ ನಡೆಸಿತು.

೩೦೦ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳ ಹಿತದೃಷ್ಟಿ:

ಮನವಿ ಸಲ್ಲಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಪ್ರವೀಣ ನಾಯಿಕ ಅವರು, “ಮದಭಾವಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸದ್ಯ ಸುಮಾರು ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳೇ ಹೆಚ್ಚಾಗಿದ್ದು, ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಖಾಸಗಿ ಶಾಲೆಗಳ ದುಬಾರಿ ಶುಲ್ಕವನ್ನು ಭರಿಸಲು ಪೋಷಕರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ, ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ಸಿಗಬೇಕಾದರೆ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯ ಅವಶ್ಯಕತೆ ತುಂಬಾ ಇದೆ,” ಎಂದು ಸಚಿವರ ಗಮನಕ್ಕೆ ತಂದರು.

ಸಚಿವರ ಸಕಾರಾತ್ಮಕ ಸ್ಪಂದನೆ:

ವಿಷಯದ ಗಂಭೀರತೆ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯವನ್ನು ಮನಗಂಡ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮನವಿಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದರು. ಮದಭಾವಿ ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ತಕ್ಷಣವೇ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ಆದೇಶ ಮತ್ತು ಸೂಚನೆಗಳನ್ನು ನೀಡುವುದಾಗಿ ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಪ್ರಮುಖರಾದ ಅನಿಲ ಭಾಮನೆ, ಶರಣಪ್ಪಾ ಶಿಂಧೆ, ಎಂ. ಶರ್ಮಾ, ಅಮೂಲ ಚವಾಣ, ಶಿವಾನಂದ ನಾವಿ, ಪ್ರಶಾಂತ ಶಿಂದೆ ಹಾಗೂ ಮಹಿಳಾ ಮುಖಂಡರಾದ ಸರಸ್ವತಿ ನೇಮಗೌಡ, ಕವಿತಾ ಭೋಸಲೆ, ಶಾಂತಾ ಶಿಂಧೆ, ರೇಷ್ಮಾ ತೇಲಿ, ಸಾವಿತ್ರಿ ಬಡಿಗೇರ ಮತ್ತು ಅಶೋಕ ಬಡಿಗೇರ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

error: Content is protected !!