July 15, 2026

ಚಿಕ್ಕೋಡಿಯ ಯುವಕರಿಂದ 47 ದಿನಗಳ ಉತ್ತರ ಭಾರತ ಬೈಕ್ ಮಹಾಯಾತ್ರೆ ಯಶಸ್ವಿ: ಪಂಚಕೇದಾರದಿಂದ ಉಮ್ಲಿಂಗ್ ಲಾವರೆಗೆ ಸಾಹಸಮಯ ಪಯಣ

ಚಿಕ್ಕೋಡಿ: ಕೆಲವು ಪ್ರಯಾಣಗಳು ಕೇವಲ ಕಿಲೋಮೀಟರ್‌ಗಳನ್ನು ಮಾತ್ರ ಅಳೆಯುವುದಿಲ್ಲ; ಅವು ಮನುಷ್ಯನ ವ್ಯಕ್ತಿತ್ವ, ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಅಳೆಯುತ್ತವೆ ಎಂಬುದನ್ನು ಚಿಕ್ಕೋಡಿಯ ಸಾಹಸಿ ಯುವಕರು ಸಾಬೀತುಪಡಿಸಿದ್ದಾರೆ. ಪಟ್ಟಣದ ಬಾಹುಬಲಿ ಹುಕ್ಕೇರಿ ಮತ್ತು ಶುಭಂ ಬಡವೆ ಅವರು ಬೈಕ್ ಮೂಲಕ ಕೈಗೊಂಡಿದ್ದ 47 ದಿನಗಳ ಅತ್ಯಂತ ಕಠಿಣ ಹಾಗೂ ರೋಮಾಂಚಕ ಉತ್ತರ ಭಾರತದ ಆತ್ಮಾನ್ವೇಷಣೆಯ ಮಹಾಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ತಾಯ್ನಾಡಿಗೆ ಮರಳಿದ್ದಾರೆ.


2026ರ ಮೇ 11ರಂದು ಆರಂಭವಾದ ಈ ಮೋಟಾರ್‌ಸೈಕಲ್ ಯಾತ್ರೆಯಲ್ಲಿ ಕರ್ನಾಟಕದ ಚಿಕ್ಕೋಡಿಯಿಂದ ಬಾಹುಬಲಿ ಹುಕ್ಕೇರಿ ಮತ್ತು ಶುಭಂ ಬಡವೆ, ರಾಣೆಬೆನ್ನೂರಿನಿಂದ ಶ್ಯಾಮಸುಂದರ ದೈವಜ್ಞ ಹಾಗೂ ಮಹಾರಾಷ್ಟ್ರದ ಕುರುಂದವಾಡದಿಂದ ಸೋಮನಾಥ ಸುತಾರ ಮತ್ತು ವಿವೇಕ ಪಾಟೀಲ್ ಸೇರಿದಂತೆ ಐವರು ಬೈಕ್‌ಗಳಲ್ಲಿ ಪ್ರಯಾಣ ಆರಂಭಿಸಿದ್ದರು. ಹರಿದ್ವಾರ ತಲುಪಿದಾಗ ಕುರುಂದವಾಡದ ಆದರ್ಶ ಪಾಟೀಲ್ ಇವರೊಂದಿಗೆ ಕೈಜೋಡಿಸಿ, ಒಟ್ಟು ಆರು ಸದಸ್ಯರ ತಂಡ ಈ ಸಾಹಸಯಾತ್ರೆಯನ್ನು ಕೈಗೊಂಡಿತ್ತು.

ಪಂಚಕೇದಾರದ ದಿವ್ಯ ಭಕ್ತಿ ಪಯಣ:

ಯಾತ್ರೆಯ ಮೊದಲ ಗುರಿ ಉತ್ತರಾಖಂಡದ ಪ್ರಸಿದ್ಧ ಪಂಚಕೇದಾರ ಕ್ಷೇತ್ರಗಳಾಗಿದ್ದವು. ತಂಡವು ವಿಶ್ವಪ್ರಸಿದ್ಧ ಕೇದಾರನಾಥ, ಮಧ್ಯಮಹೇಶ್ವರ, ತುಂಗನಾಥ, ರುದ್ರನಾಥ ಹಾಗೂ ಕಲ್ಪೇಶ್ವರ ದೇವಾಲಯಗಳ ದರ್ಶನ ಪಡೆಯಿತು. ಬೈಕ್ ಸವಾರಿಯ ಜೊತೆಗೆ ಹಿಮಾಲಯದ ದುರ್ಗಮ ಕಣಿವೆಗಳು, ದಟ್ಟ ಕಾಡುಗಳು ಹಾಗೂ ಹಿಮಶಿಖರಗಳ ಮಧ್ಯೆ ಸುಮಾರು 187 ಕಿಲೋಮೀಟರ್‌ಗಳ ಅತ್ಯಂತ ಕಠಿಣ ಟ್ರೆಕ್ಕಿಂಗ್ (ಪರ್ವತಾರೋಹಣ) ನಡೆಸಿ ದೇವದರ್ಶನ ಪಡೆದರು. ನಂತರ ಬದ್ರಿನಾಥ ಧಾಮ ಹಾಗೂ ಭಾರತದ ಮೊದಲ ಗ್ರಾಮ ಎನಿಸಿಕೊಂಡಿರುವ ‘ಮಾಣಾ’ ತಲುಪಿ ಗಡಿಭಾಗದ ಸೈನಿಕರ ತ್ಯಾಗ ಮತ್ತು ದೇಶಭಕ್ತಿಯನ್ನು ಕಣ್ಣಾರೆ ಕಂಡು ಮೊದಲ ಹಂತವನ್ನು ಶಿಮ್ಲಾದಲ್ಲಿ ಪೂರ್ಣಗೊಳಿಸಿದರು.

ಸ್ಪಿತಿ ವ್ಯಾಲಿ – ಪ್ರಕೃತಿಯ ಅದ್ಭುತ ಲೋಕ:

ಶಿಮ್ಲಾದಿಂದ ಆರಂಭವಾದ ಸ್ಪಿತಿ ವ್ಯಾಲಿಯ ಪಯಣ ಇಡೀ ತಂಡವನ್ನು ಮಂತ್ರಮುಗ್ಧರನ್ನಾಗಿಸಿತು. ಭಾರತ-ಟಿಬೆಟ್ ಗಡಿಯ ಕೊನೆಯ ಗ್ರಾಮ ಚಿತ್ಕುಲ್, ರೇಕಾಂಗ್ ಪಿಯೋ, ಕಲ್ಪಾ, 550 ವರ್ಷ ಹಳೆಯದಾದ ಗುಯೆ ಮಠದ ಮಮ್ಮಿ, ನಾಕೋ ಸರೋವರ ಮತ್ತು ಪ್ರಾಚೀನ ಟಾಬೋ ಕ್ಷೇತ್ರಗಳಿಗೆ ಭೇಟಿ ನೀಡಿದರು. ಕಾಜಾದಲ್ಲಿರುವ ವಿಶ್ವದ ಅತಿ ಎತ್ತರದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ ಬೈಕ್‌ಗಳಿಗೆ ಇಂಧನ ತುಂಬಿಸಿಕೊಂಡ ಹೆಮ್ಮೆಯ ಕ್ಷಣಗಳನ್ನು ಹಂಚಿಕೊಂಡ ತಂಡ, ವಿಶ್ವದ ಅತಿ ಎತ್ತರದ ಗ್ರಾಮ ಕೋಮಿಕ್ ಮತ್ತು ಅತಿ ಎತ್ತರದ ‘ಹಿಕ್ಕಿಂ’ ಅಂಚೆ ಕಚೇರಿಯಿಂದ ತಮ್ಮ ಮನೆಗಳಿಗೆ ಕೈಯಾರೆ ಬರೆದ ಪತ್ರಗಳನ್ನು ಪೋಸ್ಟ್ ಮಾಡಿದರು.


ಏಷ್ಯಾದ ಅತಿ ಉದ್ದದ ತೂಗುಸೇತುವೆಯಾದ ಚಿಚಮ್ ಬ್ರಿಡ್ಜ್ ಹಾಗೂ ಮಹಾಭಾರತದ ಪುರಾಣ ಪ್ರಸಿದ್ಧ ಚಂದ್ರತಾಲ್ ಸರೋವರವನ್ನು ವೀಕ್ಷಿಸಿದರು. ಆದರೆ, ಅಲ್ಲಿಂದ ಮನಾಲಿಯವರೆಗಿನ 150 ಕಿಲೋಮೀಟರ್ ರಸ್ತೆ ಸಂಪೂರ್ಣ ಆಫ್‌ರೋಡ್, ಕೆಸರು, ಬಂಡೆಗಳು ಹಾಗೂ 15 ರಿಂದ 20 ಜಲಪಾತಗಳ ತೀವ್ರ ನೀರಿನ ಹರಿವನ್ನು ದಾಟಬೇಕಾದ ಇಡೀ ಪ್ರವಾಸದ ಅತ್ಯಂತ ಭಯಾನಕ ಮತ್ತು ಕಠಿಣ ಪರೀಕ್ಷೆಯಾಗಿತ್ತು ಎಂದು ರೈಡರ್ಸ್ ತಮ್ಮ ಸಾಹಸದ ದಿನಗಳನ್ನು ನೆನಪಿಸಿಕೊಂಡರು.

ತಾಯ್ನಾಡಿನಲ್ಲಿ ಅದ್ದೂರಿ ಸ್ವಾಗತ:

47 ದಿನಗಳ ಕಾಲ ಪ್ರಕೃತಿ, ಭಕ್ತಿ ಮತ್ತು ದೇಶಭಕ್ತಿಯ ಅದ್ಭುತ ಸಾಹಸ ಯಾತ್ರೆಯನ್ನು ಮುಗಿಸಿ ಮರಳಿ ಚಿಕ್ಕೋಡಿ ಪಟ್ಟಣಕ್ಕೆ ಆಗಮಿಸಿದ ವೀರ ಯಾತ್ರಿಗಳಾದ ಬಾಹುಬಲಿ ಹುಕ್ಕೇರಿ ಮತ್ತು ಶುಭಂ ಬಡವೆ ಅವರಿಗೆ ಕುಟುಂಬಸ್ಥರು ಹಾಗೂ ಮಹಾವೀರ ನಗರದ ನಿವಾಸಿಗಳು ಹೂಮಳೆಗರೆದು, ಕೇಕ್ ಕತ್ತರಿಸಿ, ಆರತಿ ಎತ್ತುವ ಮೂಲಕ ಅತ್ಯಂತ ಅದ್ದೂರಿಯಾಗಿ ಸ್ವಾಗತಿಸಿದರು.
ಈ ಸಂಧರ್ಭದಲ್ಲಿ ಹಿರಿಯರಾದ ದಯಾನಂದ ತುಬಚಿ, ಶಿವಪುತ್ರ ದರ್ಬಾರೆ, ಅಣ್ಣಾಸಾಹೇಬ ಕಾಮನೆ, ಚಂದ್ರಕಾಂತ ಹುಕ್ಕೇರಿ, ಅಭಿನಂದನ ಹುಕ್ಕೇರಿ ಸೇರಿದಂತೆ ಮಹಾವೀರ ನಗರದ ನೂರಾರು ಮಹಿಳೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಯುವಕರ ಸಾಹಸಕ್ಕೆ ಬೆನ್ನುತಟ್ಟಿ ಹರಸಿದರು.
ವರದಿ: ಮಹೇಶ್ ಶರ್ಮಾ

About The Author

error: Content is protected !!