July 15, 2026

ಹುಬ್ಬಳ್ಳಿಯಲ್ಲಿ ‘ಕರ್ನಾಟಕ ಸಾಧನಾ ಮುಕುಟ’ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ: 100ಕ್ಕೂ ಹೆಚ್ಚು ಸಾಧಕರಿಗೆ ಗೌರವ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಮಹಾರಾಷ್ಟ್ರ ಮಂಡಳ ಕಾರ್ಯಾಲಯದಲ್ಲಿ ಮದರ್ ತೆರೇಸಾ ಜನ ಸೇವಾ ಟ್ರಸ್ಟ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ‘ಕರ್ನಾಟಕ ಸಾಧನಾ ಮುಕುಟ’ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭವು ಅತ್ಯಂತ ಅದ್ದೂರಿಯಾಗಿ ಜರುಗಿತು.


ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಟ್ರಸ್ಟ್‌ನ ಗೌರವಾಧ್ಯಕ್ಷರಾದ ಪರಮ ಪೂಜ್ಯ ಶ್ರೀ ತಾವರಗೇರಿ ಮಠದ ಮಹೇಶ್ವರ ತಾತನವರು ವಹಿಸಿ, ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಆಶೀರ್ವಚನ ನೀಡಿದ ಅವರು, “ಮದರ್ ತೆರೇಸಾ ಅವರು ಧರ್ಮ, ಜಾತಿ, ಕುಲ ಎನ್ನದೆ ಇಡೀ ಜಗತ್ತಿಗೆ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಮಹಾತಾಯಿಯಾಗಿ ಅಜರಾಮರವಾಗಿದ್ದಾರೆ. ಅವರ ಹೆಸರಿನಲ್ಲಿರುವ ಈ ಜನ ಸೇವಾ ಟ್ರಸ್ಟ್ ಹೆಮ್ಮರವಾಗಿ ಬೆಳೆದು, ಬಡವರ ಹಾಗೂ ನಿರ್ಗತಿಕರ ಸೇವೆಗೆ ಸದಾ ಕಾಲ ಮುಡುಪಾಗಿರಲಿ,” ಎಂದು ಹರಸಿದರು.

ಹಿರಿಯ ಮಹಿಳೆಗೆ ಪಾದಪೂಜೆ:

ಕಾರ್ಯಕ್ರಮದಲ್ಲಿ ಅತ್ಯಂತ ವಿಶೇಷವಾಗಿ, ಮದರ್ ತೆರೇಸಾ ಅವರ ಕರುಣಾಮಯಿ ರೂಪವನ್ನು ಹಿರಿಯ ಮಹಿಳೆಯರ ಮುಖದಲ್ಲಿ ಕಾಣುವ ಮೂಲಕ ಅವರಿಗೆ ಪಾದಪೂಜೆ ನೆರವೇರಿಸಲಾಯಿತು. ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಮೇರಿ ಮೂಷ್ಟಗೇರಿ ಅವರು ಪೂಜೆ ಸಲ್ಲಿಸಿ ಮಾತನಾಡಿ, “ನಾನು ನನ್ನ ಸ್ವಾರ್ಥಕ್ಕಾಗಿ ಈ ಟ್ರಸ್ಟ್ ಸ್ಥಾಪಿಸಿಲ್ಲ. ಸಮಾಜದ ಬಡ ಮಕ್ಕಳಿಗೆ, ಆಸರೆಯಿಲ್ಲದ ನಿರ್ಗತಿಕರಿಗೆ ಹೆಗಲಾಗಿ ನಿಂತು ಸಹಾಯ ಮಾಡುವುದೇ ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ,” ಎಂದು ಭಾವುಕರಾಗಿ ನುಡಿದರು. ಇದೇ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ೩೦ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗಾಗಿ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಸಾಧಕರಿಗೆ ಪ್ರಶಸ್ತಿ ಗೌರವ:

ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆಗೈದ ೧೦೦ ಜನ ಸಾಧಕರಿಗೆ ಮಹನೀಯರ ಸಮ್ಮುಖದಲ್ಲಿ ‘ಕರ್ನಾಟಕ ಸಾಧನಾ ಮುಕುಟ’ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ಸಮಾಜಕ್ಕೆ ಮಾದರಿಯಾಗಿ ಬಾಳುತ್ತಿರುವ ೫ ಆದರ್ಶ ದಂಪತಿಗಳನ್ನೂ ಸಹ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.                  

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರಾದ ಪ್ರವೀಣ ನಾಯಿಕ, ಎಸ್‌ .ಎಸ್‌ . ಪಾಟೀಲ, ಬಂದೇನವಾಜ ಗಡ್ಡೆಕರ ಹಾಗೂ ನಿಂಗಪ್ಪ ಹಡಪದ ಅವರುಗಳು ಪ್ರಸ್ತುತ ಸಮಾಜದಲ್ಲಿ ಸೇವಾ ಸಂಸ್ಥೆಗಳ ಅಗತ್ಯತೆ ಕುರಿತು ಮಾತನಾಡಿದರು.
ವೇದಿಕೆಯ ಮೇಲೆ ಪ್ರಮುಖರಾದ ಡೇವಿಡ್ ಶೆಟ್ಟಿ, ರಮೇಶ ಮಹಾದೇವಪ್ಪ, ಎಂ. ಬಿ. ನದಾಫ, ಬಸವರಾಜ ಶಾಸ್ತ್ರಿ, ಸುರೇಶ ಪೂಜಾರಿ, ವಿದ್ಯಾ ಹಿರೇಮಠ, ವಸಂತಾ ಡಂಗನವರ, ಅಂಜಲಿ ಹಿರೇಮಠ, ಆದಿತ್ಯಗೌಡಾ ನಾಯಿಕ ಸೇರಿದಂತೆ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.

About The Author

error: Content is protected !!