ಭಟ್ಕಳ: ಭಾರತೀಯ ಸೇನೆಯ ಪ್ರತಿಷ್ಠಿತ ವಿಶೇಷ ಪಡೆಯಲ್ಲಿ (Special Forces) 17 ವರ್ಷಗಳ ಕಾಲ ಸುದೀರ್ಘ ಹಾಗೂ ಸಾಹಸಮಯ ಸೇವೆ ಸಲ್ಲಿಸಿ ನಿವೃತ್ತರಾದ ಕಮಾಂಡೋ ಹರೀಶ್ ಮಂಜುನಾಥ ನಾಯ್ಕ್ ಅವರು ತವರಿಗೆ ಆಗಮಿಸಿದ ಸಂದರ್ಭದಲ್ಲಿ ಮುರುಡೇಶ್ವರದಲ್ಲಿ ಮಾಜಿ ಸೈನಿಕರು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಭವ್ಯವಾಗಿ ಸ್ವಾಗತಿಸಿ ಗೌರವಿಸಿದರು.

ತಾಲೂಕಿನ ಮಾಜಿ ಸೈನಿಕರ ಸಂಘ, ಲಯನ್ಸ್ ಕ್ಲಬ್ ಭಟ್ಕಳ, ಮುರುಡೇಶ್ವರ ಹಾಗೂ ಶಿರಾಲಿಯ ಜನತಾ ವಿದ್ಯಾಲಯದ ಶಿಕ್ಷಕ ವೃಂದ, ಆಟೋ ಚಾಲಕ-ಮಾಲೀಕರ ಸಂಘ ಮತ್ತು ನೂರಾರು ಸಾರ್ವಜನಿಕರು ಮುರುಡೇಶ್ವರ ನಾಕಾದಲ್ಲಿ ಕಮಾಂಡೋ ಹರೀಶ್ ಅವರನ್ನು ಹೂಮಾಲೆ ಧರಿಸಿ, ದೇಶಭಕ್ತಿಯ ಘೋಷಣೆಗಳೊಂದಿಗೆ ಆತ್ಮೀಯವಾಗಿ ಬರಮಾಡಿಕೊಂಡರು.

ಗ್ರಾಮೀಣ ಪ್ರತಿಭೆಯ ಸಾಧನೆಯ ಹಾದಿ:
ಮುರುಡೇಶ್ವರ ಸಮೀಪದ ಹಿರೇದೋಮಿ-ತೂದಳ್ಳಿ ಗ್ರಾಮದ ಮಂಜುನಾಥ ಶನಿಯರ ನಾಯ್ಕ್ ಹಾಗೂ ಯಮುನಾ ದಂಪತಿಯ ಪುತ್ರರಾದ ಹರೀಶ್ ನಾಯ್ಕ್, ಸದ್ಯ ಬೈಲೂರು ಗ್ರಾಮದ ಎಡಬಡ್ರುವಿನಲ್ಲಿ ವಾಸವಾಗಿದ್ದಾರೆ. ತೂದಳ್ಳಿ ಹಾಗೂ ಕೆರೆಕಟ್ಟೆಯ ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು, ಮುರುಡೇಶ್ವರದ ಜನತಾ ವಿದ್ಯಾಲಯದಲ್ಲಿ ಪ್ರೌಢಶಿಕ್ಷಣ, ಶಿರಾಲಿಯ ಜನತಾ ವಿದ್ಯಾಲಯದಲ್ಲಿ ಪಿಯುಸಿ ಹಾಗೂ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿದ್ದರು.

2009ರ ಮಾರ್ಚ್ 23ರಂದು ಭಾರತೀಯ ಸೇನೆಗೆ ಸೇರ್ಪಡೆಯಾದ ಹರೀಶ್, ಆರ್ಮಿ ಏರ್ ಡಿಫೆನ್ಸ್ ಸೆಂಟರ್ನಲ್ಲಿ ಮೂಲಭೂತ ತರಬೇತಿ ಮುಗಿಸಿ, 2010ರಲ್ಲಿ ಜೋಧ್ಪುರದ 152 ಏರ್ ಡಿಫೆನ್ಸ್ ರೆಜಿಮೆಂಟ್ನಲ್ಲಿ ಗನ್ನರ್ ಆಗಿ ಸೇವೆ ಆರಂಭಿಸಿದರು. ಅತ್ಯುತ್ತಮ ಕ್ರೀಡಾಪಟುವೂ ಆಗಿದ್ದ ಇವರು, 110 ಮೀಟರ್ ಹರ್ಡಲ್ಸ್ ಅಥ್ಲೀಟ್ ಆಗಿ ಮೂರು ಬಾರಿ ಆರ್ಮಿ ಕಮಾಂಡ್ ಮಟ್ಟದಲ್ಲಿ ಸೇನೆಯನ್ನು ಪ್ರತಿನಿಧಿಸಿದ್ದರು.
ಪ್ಯಾರಾ ಕಮಾಂಡೋ ಆಗಿ ಸಾಹಸಮಯ ಸೇವೆ:
2014-15ರಲ್ಲಿ ಅತ್ಯಂತ ಕಠಿಣವಾದ ಕಮಾಂಡೋ ತರಬೇತಿ, ಪ್ಯಾರಾ ಜಂಪ್ ಹಾಗೂ ಕಮಾಂಡೋ ಕೋರ್ಸ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಇವರು, ಭಾರತೀಯ ಸೇನೆಯ ಅತ್ಯುನ್ನತ ಬಹುಮಾನವಾದ ‘ಬಲಿಧಾನ್ ಬ್ಯಾಡ್ಜ್’ ಹಾಗೂ ‘ಮೆರೂನ್ ಕ್ಯಾಪ್’ ಧರಿಸುವ ಅರ್ಹತೆ ಪಡೆದರು. ಆ ನಂತರ ಭಾರತೀಯ ಸೇನೆಯ ಪ್ರತಿಷ್ಠಿತ 10 PARA (SPECIAL FORCES) ಘಟಕಕ್ಕೆ ಆಯ್ಕೆಯಾದರು.
ತಮ್ಮ ಸೇವಾ ಅವಧಿಯಲ್ಲಿ ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ವಿವಿಧ ಗಡಿ ಭಾಗಗಳಲ್ಲಿ ಉಗ್ರನಿಗ್ರಹ ಕಾರ್ಯಾಚರಣೆಗಳು ಮತ್ತು ಅತ್ಯಂತ ರಹಸ್ಯ ವಿಶೇಷ ಸೇನಾ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ರಾಜಸ್ಥಾನ, ಉತ್ತರ ಪ್ರದೇಶ, ಪಂಜಾಬ್ ಹಾಗೂ ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸಿರುವ ಇವರು, ಅಮೆರಿಕ ಹಾಗೂ ಅಫ್ಘಾನಿಸ್ತಾನ ದೇಶಗಳ ಸೇನೆಗಳೊಂದಿಗೆ ನಡೆದ ಜಂಟಿ ಸೇನಾ ಅಭ್ಯಾಸಗಳಲ್ಲೂ ಭಾಗವಹಿಸಿದ್ದರು.
ಒಂದೇ ಮನೆಯ ಇಬ್ಬರು ಪ್ಯಾರಾ ಕಮಾಂಡೋಗಳು!
ವಿಶೇಷವೆಂದರೆ, ಹರೀಶ್ ನಾಯ್ಕ್ ಅವರ ಸಹೋದರ ನಂದೀಶ್ ಮಂಜುನಾಥ ನಾಯ್ಕ್ ಕೂಡ ಭಾರತೀಯ ಸೇನೆಯ 2 PARA (SPECIAL FORCES) ಘಟಕದಲ್ಲಿ ಕಮಾಂಡೋ ಆಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಏಳು ವರ್ಷಗಳಿಂದ ಜಮ್ಮು-ಕಾಶ್ಮೀರದ ಗಡಿಯಲ್ಲಿ ವಿಶೇಷ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಂದೇ ಮನೆಯ ಇಬ್ಬರು ಹೆಮ್ಮೆಯ ಪುತ್ರರು ದೇಶದ ಅತ್ಯುನ್ನತ ವಿಶೇಷ ಪಡೆಯಲ್ಲಿ ಕಮಾಂಡೋಗಳಾಗಿ ಸೇವೆ ಸಲ್ಲಿಸಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.
ನಿವೃತ್ತ ಕಮಾಂಡೋ ಹರೀಶ್ ನಾಯ್ಕ್ ಅವರ ಕಠಿಣ ಪರಿಶ್ರಮ, ಶಿಸ್ತು ಮತ್ತು ದೇಶಸೇವೆಯ ಬದುಕು ಇಂದಿನ ಯುವಪೀಳಿಗೆಗೆ ದೊಡ್ಡ ಮಾದರಿಯಾಗಿದೆ ಎಂದು ಕಾರ್ಯಕ್ರಮದಲ್ಲಿ ಗಣ್ಯರು ಪ್ರಶಂಸಿಸಿದರು.
ಗಣ್ಯರ ಉಪಸ್ಥಿತಿ:
ಈ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ಡಿ. ಪಕ್ಕಿ, ಕಾರ್ಯದರ್ಶಿ ಶ್ರೀಕಾಂತ ನಾಯ್ಕ್, ಪ್ರಮುಖರಾದ ಸುರೇಶ್ ನಾಯ್ಕ್, ಮಂಜುನಾಥ ಹೆಗಡೆ, ವಿ.ಆರ್. ಶೆಟ್ಟಿ, ಶಂಭು ಹೆಗಡೆ, ಎಸ್.ಎಸ್. ಕಾಮತ್, ನಿವೃತ್ತ ಸೈನಿಕ ಹಾಗೂ ಜಿಎಸ್ಟಿ ಸಹಾಯಕ ಆಯುಕ್ತ ರಂಗನಾಥ ಎಂ., ಬಬಲೇಶ್ವರ್, ಸಂಬು, ಮುರ್ಗಪ್ಪ, ಕಮಾಂಡೋ ಕುಟುಂಬಸ್ಥರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.

More Stories
ಮುರುಡೇಶ್ವರ: ಆರ್. ಎನ್. ಶೆಟ್ಟಿ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪದಗ್ರಹಣ ಸಮಾರಂಭ
ಅಕ್ರಮ ಕಸ ಸುರಿಯಲು ಬಂದ ವಾಹನ ಗ್ರಾಮಸ್ಥರ ವಶಕ್ಕೆ
ಉಚಿತ ಕಿಡ್ಸ್ ಕಂಪ್ಯೂಟರ್ ತರಬೇತಿ